ಅಘನಾಶಿನಿ ನದಿಯ ನೋಟ
–ಚಿತ್ರ: ಗೋಪಿ ಜಾಲಿ
ಶಿರಸಿ: ಅಘನಾಶಿನಿ- ವೇದಾವತಿ ನದಿ ತಿರುವು ಯೋಜನೆ ಅನುಷ್ಠಾನ ಸಂಬಂಧ ರಾಜ್ಯ ಸರ್ಕಾರದ ಮನವಿ ಮೇರೆಗೆ ಸಾಧ್ಯತಾ ವರದಿಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ತಯಾರಿಸಿದ್ದು, ಪಶ್ಚಿಮ ಘಟ್ಟದ ಜನತೆಗೆ ಗೊತ್ತಿಲ್ಲದ ಬೃಹತ್ ನದಿ ಕಣಿವೆ ಯೋಜನೆ ಜಾರಿಗೆ ತೆರೆಮರೆ ಕಸರತ್ತು ಆರಂಭವಾಗಿರುವ ಬಗ್ಗೆ ವೃಕ್ಷಲಕ್ಷ ಆಂದೋಲನದ ಕಾರ್ಯಕರ್ತರು ಮಾಹಿತಿ ಬಹಿರಂಗ ಮಾಡಿದ್ದಾರೆ.
ರಾಜ್ಯ ಜಲಸಂಪನ್ಮೂಲ ಇಲಾಖೆಯಲ್ಲಿನ ಅಘನಾಶಿನಿ ತಿರುವು ಯೋಜನೆಯ ಮಹತ್ವದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿರುವ ವೃಕ್ಷ ಆಂದೋಲನದ ಪ್ರಮುಖರಾದ ಅನಂತ ಹೆಗಡೆ ಅಶೀಸರ, ಶ್ರೀಪಾದ ಬಿಚ್ಚುಗತ್ತಿ, ಗಣಪತಿ ಕೆ ಹಾಗೂ ವೆಂಕಟೇಶ.ಕೆ ಗುರುವಾರ ಈ ಕುರಿತು ಮಾಹಿತಿ ಬಹಿರಂಗಗೊಳಿಸಿಸುವ ಜತೆಗೆ ಬೇಡ್ತಿ ಅಘನಾಶಿನಿ ಸಂರಕ್ಷಣ ಸಮಿತಿಯ ಗೌರವಾಧ್ಯಕ್ಷ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರಿಗೆ ಯೋಜನೆ ಬಗ್ಗೆ ಲಭ್ಯ ಮಾಹಿತಿ
ನೀಡಿದ್ದಾರೆ.
‘ಅಘನಾಶಿನಿ ನದಿಯನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಗೆ ಜೋಡಿಸುವ ಯೋಜನೆ ಇದಾಗಿದೆ. ಬಾಳೆಕೊಪ್ಪ ಬಳಿ ಆಣೆಕಟ್ಟೆ ನಿರ್ಮಿಸಿ ನೀರನ್ನು ವೇದಾವತಿ ನದಿಯ ವಾಣಿವಿಲಾಸ ಜಲಾಶಯಕ್ಕೆ ಸಾಗಿಸಲಾಗುತ್ತದೆ. ಅಘನಾಶಿನಿಯಿಂದ ನೀರು ಪಂಪ್ ಮಾಡಿ ಗೋಳಿಮಕ್ಕಿ ಹಾರ್ಸಿಕಟ್ಟಾ, ಸಿದ್ದಾಪುರ, ಸಾಗರ, ಶಿವಮೊಗ್ಗ, ತರೀಕೆರೆ, ಅಜ್ಜಂಪುರ ಮಾರ್ಗವಾಗಿ ವಾಣಿವಿಲಾಸ ಜಲಾಶಯಕ್ಕೆ ನೀರು ತುಂಬಿಸಲಾಗುತ್ತದೆ. 35 ಟಿಎಂಸಿ ನೀರು ಅಘನಾಶಿನಿಯಿಂದ ಎತ್ತಲಾಗುತ್ತದೆ. ಈ ಯೋಜನೆ ಸಂಪೂರ್ಣವಾಗಿ ರಾಜ್ಯ ಜಲಸಂಪನ್ಮೂಲ ಇಲಾಖೆ ಯೋಜನೆಯಾಗಿದ್ದು, ರಾಜ್ಯ ಸರ್ಕಾರದ ಮನವಿ ಮೇರೆಗೆ ಕಾರ್ಯ ಸಾಧ್ಯತಾ ವರದಿಯನ್ನು ತಯಾರಿಸಲಾಗಿದೆ. ಅಂದಾಜು ₹23 ಸಾವಿರ ಕೋಟಿ ವೆಚ್ಚವಾಗಲಿದೆ. 194 ಕಿ.ಮೀ ಉದ್ದ ಪೈಪ್ ಲೈನ್ ಹಾಕಲಾಗುತ್ತದೆ ಎಂಬುದು ವರದಿಯಲ್ಲಿ ಉಲ್ಲೇಖವಿದೆ’ ಎಂದು ತಿಳಿಸಿದ್ದಾರೆ.
‘ಯೋಜನೆ ಜಾರಿಯಿಂದ ಅಂದಾಜು 1.20 ಲಕ್ಷ ಮರಗಳು ಆಹುತಿ ಆಗಲಿವೆ. ಸುಮಾರು 600 ಎಕರೆ ಅರಣ್ಯ ಯೋಜನೆಗೆ ಬೇಕಾಗಲಿದೆ. ಶಿರಸಿ, ಸಾಗರ ಅರಣ್ಯ ವಿಭಾಗಗಳ ವ್ಯಾಪ್ತಿಯ ಅರಣ್ಯಗಳು ನಾಶ ಆಗಲಿವೆ. ಶಿರಸಿ, ಕುಮಟಾ ತಾಲ್ಲೂಕುಗಳ ಕುಡಿಯುವ ನೀರಿನ ಯೋಜನೆಗೆ ಹಾಗೂ ಒಂದು ಲಕ್ಷ ರೈತರ ಪಂಪ್‍ಸೆಟ್‌ಗಳಿಗೆ ನೀರು ಒದಗಿಸುವ ಅಘನಾಶಿನಿಗೆ ನದಿ ತಿರುವು ಕಂಟಕ ತರುತ್ತದೆ. ಅಘನಾಶಿನಿ ಕಣಿವೆ ಭೂಕುಸಿತ ಸೂಕ್ಷ್ಮ ಪ್ರದೇಶ. ವ್ಯಾಪಕ ಭೂಕುಸಿತಕ್ಕೆ ಕಾರಣವಾಗಲಿದೆ. ಕುಮಟಾ ಕರಾವಳಿ ಮೀನುಗಾರರು ಮತ್ತು ರೈತರ ಬದುಕು ಅಘನಾಶಿನಿ ನದಿ ನೀರನ್ನೇ ಅವಲಂಬಿಸಿದೆ. ಈ ಯೋಜನೆ ಕರಾವಳಿ ಮೀನುಗಾರ, ರೈತರ ಬದುಕು ಕಸಿದುಕೊಳ್ಳಲಿದೆ’ ಎಂದು ವೃಕ್ಷ ಆಂದೋಲನ ತಜ್ಞರ ತಂಡ ಎಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.