ADVERTISEMENT

ಶಿರಸಿ |ಉತ್ತಮ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

ಎರಡು ದಿಗಳಿಂದ ತಾಲ್ಲೂಕಿನಲ್ಲಿ ಹದ ಮಳೆ: ಕೃಷಿಕರು ಸಂತಸ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:25 IST
Last Updated 15 ಜೂನ್ 2025, 14:25 IST
ಶಿರಸಿ ತಾಲ್ಲೂಕಿನ ಬನವಾಸಿ ಭಾಗದಲ್ಲಿ ಬಿತ್ತನೆಗೆ ಗದ್ದೆ ಹದಗೊಳಿಸುತ್ತಿರುವ ರೈತ 
ಶಿರಸಿ ತಾಲ್ಲೂಕಿನ ಬನವಾಸಿ ಭಾಗದಲ್ಲಿ ಬಿತ್ತನೆಗೆ ಗದ್ದೆ ಹದಗೊಳಿಸುತ್ತಿರುವ ರೈತ    

ಶಿರಸಿ: ಮುಂಗಾರು ಮಳೆ ಅಬ್ಬರ ಶುರುವಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಮೇ ತಿಂಗಳಲ್ಲಿ ಈ ಬಾರಿ ಉತ್ತಮ ಮಳೆ ಸುರಿದಿದ್ದರಿಂದ ಕೃಷಿಗೆ ನೀರಿನ ಸಮಸ್ಯೆ ದೂರವಾಗಿತ್ತು. ಅಲ್ಲದೆ ಕೃಷಿಕರು ತಮ್ಮ ತೋಟ, ಗದ್ದೆಗಳ ಕೆಲಸವನ್ನು ಬೇಗನೆ ಆರಂಭಿಸಿದ್ದರು. ಆದರೆ ಜೂನ್ ಆರಂಭವಾಗುತ್ತಿದ್ದಂತೆ ತಾಲ್ಲೂಕಿನಲ್ಲಿ ಸುಮಾರು 10-12 ದಿನಗಳ ಕಾಲ ಮಳೆ ದೂರವಾಯಿತು. ಈ ಸಮಯ ಕೃಷಿ ಕೆಲಸಗಳು ಕೊಂಚ ಕುಂಠಿತಗೊಂಡವು. ಎರಡು ದಿನಗಳಿಂದ ಉತ್ತಮ ಮಳೆ ಬೀಳುತ್ತಿದ್ದು, ಭತ್ತದ ಗದ್ದೆಗಳಲ್ಲಿ ನೀರು ತುಂಬಿದೆ. ಇದು ಬಿತ್ತನೆ ಭತ್ತದ ಗದ್ದೆಗಳಿಗೆ ಉತ್ತಮವಾಗಿದೆ. ಗದ್ದೆಗಳ ಕೆಲಸಗಳು ಭರದಿಂದ ಸಾಗಿದ್ದು, ನಾಟಿಯ ತಯಾರಿ ನಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ಹೆಚ್ಚಿನ ಕೃಷಿಕರು ಆಗತ್ಯ ಕೆಲಸಗಳಿಗೆ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಇದು ಕಡಿಮೆ ಖರ್ಚು ಹಾಗೂ ಕೆಲಸಗಳು ವೇಗವಾಗಿ ಸಾಗಲು ಸಹಕಾರಿಯಾಗಿದೆ. ಗದ್ದೆಗಳನ್ನು ಹದ ಮಾಡಲು ಟಿಲ್ಲ‌ರ್, ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಹೆಚ್ಚಿದೆ.

ADVERTISEMENT

ಬಿತ್ತನೆ ಬೀಜದ ಬೇಡಿಕೆ ಅಧಿ ಕಗೊಂಡಿದೆ. ಗದ್ದೆಗಳ ಬದು ಕಟ್ಟುವುದು, ಸಣ್ಣ ಪ್ರಮಾಣದ ಕಣಿಗಳನ್ನು ನಿರ್ಮಿಸುವುದು, ನೀರು ನಿಲ್ಲಿಸುವ, ಅಧಿಕ ನೀರನ್ನು ಹೊರ ಬಿಡುವ ಕೆಲಸ ಮಾಡಲಾಗುತ್ತಿದೆ.

ಅಡಿಕೆಗೆ ಮದ್ದು ಸಿಂಪಡಣೆ 

ಜೂನ್ ತಿಂಗಳ ಮೊದಲೆರಡು ವಾರದಲ್ಲಿ ಮಳೆ ಪ್ರಮಾಣ ತೀರಾ ಕಡಿಮೆಯಿತ್ತು. ಹಾಗಾಗಿ ಅಡಿಕೆ ತೋಟಗಳಿಗೆ ಔಷಧ ಸಿಂಪಡಿಸುವ ಕೃಷಿಕರಿಗೆ ಹೆಚ್ಚಿನ ಅನುಕೂಲ ನೀಡಿತ್ತು. ಮೇ ತಿಂಗಳ ಕೊನೆಯ ವಾರದಲ್ಲಿ ವಿಪರೀತ ಮಳೆಯಿಂದ ಔಷಧ ಸಿಂಪಡಣೆಗೆ ಹೆಣಗಾಡುತ್ತಿದ್ದ ಅಡಿಕೆ ಕೃಷಿಕರಿಗೆ ಜೂನ್ ಮೊದಲ ವಾರ ಮಳೆಬಿಟ್ಟದ್ದು ಅನುಕೂಲವಾಯಿತು. ಅರ್ಧಕ್ಕಿಂತ ಅಧಿಕ ತೋಟಗಳಲ್ಲಿ ಈಗಾಗಲೇ ಪ್ರಥಮ ಹಂತದ ಔಷಧ ಸಿಂಪಡಣೆ ಪೂರ್ಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.