ಶಿರಸಿ: ಕೃಷಿಕರಿಗೆ ಬೆಳೆ, ರೋಗ ನಿರ್ವಹಣೆ ಮಾಹಿತಿ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಬೇಕಾದ ಕೃಷಿ ಇಲಾಖೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಎದುರಾಗಿದೆ.
ಪ್ರಸಕ್ತ ವರ್ಷ ಮುಂಗಾರುಪೂರ್ವ ಹಾಗೂ ಮುಂಗಾರು ಮಳೆಗೆ ಭತ್ತ, ಮೆಕ್ಕೆಜೋಳ ಬೆಳೆದ ಪ್ರದೇಶದಲ್ಲಿ ಸಾಕಷ್ಟು ಹಾನಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಕೃಷಿ ಇಲಾಖೆ ಸಿಬ್ಬಂದಿಯ ಕೊರತೆಯಿಂದ ಬಳಲುತ್ತಿದ್ದು, ರೈತರೂ ದಿಕ್ಕು ತೋಚದಂತಾಗಿದ್ದಾರೆ.
‘ಜಿಲ್ಲೆಯಲ್ಲಿ ಒಟ್ಟು 367 ಮಂಜೂರಾದ ಹುದ್ದೆಗಳಲ್ಲಿ 80 ಹುದ್ದೆಯಷ್ಟೇ ಭರ್ತಿಯಾಗಿದೆ. ಉಳಿದಂತೆ 287 ಹುದ್ದೆಗಳು ಖಾಲಿಯಿವೆ. ಇದರಲ್ಲಿ 8 ಸಹಾಯಕ ನಿರ್ದೇಶಕರು, 1 ಆಡಳಿತ ಸಹಾಯಕ, 1 ಅಧೀಕ್ಷಕ, 69 ಕೃಷಿ ಅಧಿಕಾರಿಗಳು ಹಾಗೂ 86 ಸಹಾಯಕ ಕೃಷಿ ಅಧಿಕಾರಿಗಳ ಕೊರತೆ ಇದೆ. ಇದರಿಂದ ಜಿಲ್ಲಾ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಅಧಿಕಾರಿಗಳ ಕೊರತೆ ಕಾಡುತ್ತಿದೆ. ಉಳಿದಂತೆ 24 ದ್ವಿತೀಯ ದರ್ಜೆ ಸಹಾಯಕರು, 8 ಪ್ರಥಮ ದರ್ಜೆ ಸಹಾಯಕರು, 52 ಡಿ ಗ್ರೂಪ್ ನೌಕರರು ಸೇರಿದಂತೆ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಸುಮಾರು 287 ಹುದ್ದೆಗಳು ಖಾಲಿ ಇವೆ’ ಎಂದು ಕೃಷಿ ಇಲಾಖೆ ಉಪನಿರ್ದೇಶಕ ಟಿ.ನಟರಾಜ ಮಾಹಿತಿ ನೀಡಿದರು.
‘ಜಿಲ್ಲೆಯು ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಯನ್ನು ಒಳಗೊಂಡಿದ್ದು, ಮಳೆ ಆಶ್ರಿತ ಹಾಗೂ ಕೊಳವೆಬಾವಿ ಆಶ್ರಯದಲ್ಲಿಯೂ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಜಿಲ್ಲೆಯಲ್ಲಿ ಮುಸುಕಿನ ಜೋಳ, ಭತ್ತ, ವಿವಿಧ ಬಗೆಯ ತರಕಾರಿಗಳನ್ನು ಬೆಳೆಯಲಾಗುತ್ತದೆ. ಆದರೆ ರೈತರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಇತರೆ ಸೌಲಭ್ಯ ಒದಗಿಸಬೇಕಾದ ಕೃಷಿ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆಯಿಂದಾಗಿ ರೈತರು ಅನೇಕ ಸಮಸ್ಯೆ ಎದುರಿಸುವಂತಾಗಿದೆ’ ಎಂಬುದು ಹಲವು ರೈತರ ದೂರು.
‘ಮಳೆಯಿಂದ ಹಾನಿಗೆ ಒಳಗಾದ ಬೆಳೆಗಳ ಮಾಹಿತಿ ಪಡೆಯುವುದಕ್ಕೂ ಕೃಷಿ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿಯ ಕೊರತೆ ಇದೆ. ಇರುವ ಅಧಿಕಾರಿ ಹಾಗೂ ಸಿಬ್ಬಂದಿ ಕಚೇರಿಯ ಕೆಲಸ ಮಾಡುವುದಕ್ಕೆ ಸಾಕಾಗುತ್ತಿಲ್ಲ. ಗದ್ದೆಗಳಿಗೆ ಭೇಟಿ ಮಾಡಿ ಪರಿಶೀಲನೆ ಮಾಡಲು ಸಮಯವೇ ಸಿಗುತ್ತಿಲ್ಲ. ಇದರಿಂದ ಮಳೆಹಾನಿಯ ಸಂದರ್ಭದಲ್ಲಿ ರೈತರಿಗೆ ತೀವ್ರ ಸಮಸ್ಯೆ ಆಗುತ್ತಿದೆ’ ಎನ್ನುತ್ತಾರೆ ರೈತ ಮುಖಂಡ ರಾಘವೇಂದ್ರ ನಾಯ್ಕ.
ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವುದು ಕೇಂದ್ರ ಕಚೇರಿ ಹಾಗೂ ಸರ್ಕಾರದ ಗಮನದಲ್ಲಿದೆ. ಸಿಬ್ಬಂದಿ ನೇಮಕವಾದರೆ ಸಮಸ್ಯೆ ನಿವಾರಣೆಯಾಗುತ್ತದೆಟಿ.ನಟರಾಜ್ ಕೃಷಿ ಇಲಾಖೆ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.