ADVERTISEMENT

ಉತ್ತರ ಕನ್ನಡ | ಗುಡ್ಡದಲ್ಲಿ ಬಹು ಬೆಳೆಯ ತೋಟ

ಕರ್ಕಿಸವಲು ಗ್ರಾಮದ ದಿನೇಶ ಹೆಗಡೆ ಕೃಷಿಯ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 19:31 IST
Last Updated 12 ಜನವರಿ 2023, 19:31 IST
ಸಿದ್ದಾಪುರ ತಾಲ್ಲೂಕಿನ ಕರ್ಕಿಸವಲಿನ ಕೃಷಿಕ ದಿನೇಶ ಹೆಗಡೆ ತಾವು ಬೇಳೆದ ಬಹು ಬೆಳೆಯ ತೋಟದಲ್ಲಿರುವುದು.
ಸಿದ್ದಾಪುರ ತಾಲ್ಲೂಕಿನ ಕರ್ಕಿಸವಲಿನ ಕೃಷಿಕ ದಿನೇಶ ಹೆಗಡೆ ತಾವು ಬೇಳೆದ ಬಹು ಬೆಳೆಯ ತೋಟದಲ್ಲಿರುವುದು.   

ಸಿದ್ದಾಪುರ: ಪಾರಂಪರಿಕ ವಾಣಿಜ್ಯ ಬೆಳೆಯಾದ ಅಡಿಕೆಯನ್ನೇ ಅವಲಂಬಿಸಿರುವ ಮಲೆನಾಡಿನ ರೈತರ ನಡುವೆ ಬಹು ಬೆಳೆಯ ಕೃಷಿಯಲ್ಲಿ ಯಶಸ್ಸು ಕಾಣುತ್ತಿರುವ ತಾಲ್ಲೂಕಿನ ಹಾರ್ಸಿಕಟ್ಟಾ ಪಂಚಾಯ್ತಿ ವ್ಯಾಪ್ತಿಯ ಕರ್ಕಿಸವಲಿನ ಕೃಷಿಕ ದಿನೇಶ ಹೆಗಡೆ ವಿಭಿನ್ನ ಎನಿಸುತ್ತಿದ್ದಾರೆ.

ಪೂರ್ವಜರಿಂದ ಬಂದ ಸುಮಾರು ನಾಲ್ಕು ಎಕರೆ ಅಡಿಕೆ ತೋಟದ ಜತೆಗೆ ಎರಡು ಎಕರೆ ಹೊಸ ಅಡಿಕೆ ತೋಟವನ್ನು ಬೆಳೆದಿದ್ದಾರೆ. ಸುಮಾರು ಎಂಟು ಎಕರೆಯಷ್ಟು ಗುಡ್ಡದಲ್ಲಿರುವ ಖುಷ್ಕಿ ಜಾಗವನ್ನು ಸದುಪಯೋಗ ಪಡಿಸಿಕೊಳ್ಳಲು ಪಣ ತೊಟ್ಟ ಅವರು ಮೂರು ವರ್ಷಗಳ ಹಿಂದೆ ಐದು ಎಕರೆ ಗುಡ್ಡದಲ್ಲಿ ಸಿಲ್ವರ್ ಓಕ್ ಗಿಡಗಳನ್ನು ನೆಟ್ಟು ಕಾಲುವೆಗಳನ್ನು ನಿರ್ಮಿಸಿ ಅನಾನಸ್ ಬೆಳೆಯನ್ನು ಬೆಳೆದರು.

‘ಕೋವಿಡ್ ಕಾಲದಲ್ಲಿ ಸುಮಾರು 10 ಟನ್ ನಷ್ಟು ಇಳುವರಿ ಪಡೆದು ನಿರೀಕ್ಷಿತ ಲಾಭಕ್ಕಿಂತ ಕಡಿಮೆ ಆದಾಯಕ್ಕೆ ತೃಪ್ತಿ ಪಡಬೇಕಾಯಿತು. ನಂತರ ಅನಾನಸ್ ಬದಲು ಏಲಕ್ಕಿ ಸಸಿಗಳನ್ನು ಬೆಳೆಸಿದೆ. ಗುಡ್ಡದಲ್ಲಿ ನೆಡಲಾಗಿದ್ದ ಸಿಲ್ವರ್ ಓಕ್ ಗಿಡಗಳಿಗೆ ಸಾವಿರಕ್ಕೂ ಹೆಚ್ಚು ಕಾಳುಮೆಣಸಿನ ಬಳ್ಳಿಗಳನ್ನು ಬೆಳೆಸಿದೆ. ಸಿಲ್ವರ್ ಗಿಡಗಳ ಮಧ್ಯೆ ಅಡಿಕೆ ಮತ್ತು ದಾಲ್ಚಿನಿ ಗಿಡಗಳನ್ನು ಹಾಕಿದ್ದೇನೆ. ಈಗ ದಾಲ್ಚಿನಿ, ಕಾಳುಮೆಣಸು ಮತ್ತು ಏಲಕ್ಕಿಯ ಇಳುವರಿ ದೊರೆಯುತ್ತಿದೆ’ ಎನ್ನುತ್ತಾರೆ ದಿನೇಶ ಹೆಗಡೆ.

ADVERTISEMENT

‘ಕೂಲಿ ಕಾರ್ಮಿಕರ ಕೊರತೆ ಸರಿದೂಗಿಸಲು ಯಂತ್ರೋಪಕರಣಗಳನ್ನು ಬಳಸುತ್ತಿದ್ದೇನೆ. ಫೈಬರ್ ದೋಟಿ, ಪ್ರೆಶರ್ ವಾಶರ್, ಅಡಿಕೆ ಸುಲಿಯುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ, ಸಾಗಾಟಕ್ಕಾಗಿ ಮೋಟೋ ಕಾರ್ಟ್, ಚೈನ್ ಪುಲ್ಲಿಗಳಂತಹ ಸೌಲಭ್ಯಗಳನ್ನು ಅಳವಡಿಸಿಕೊಂಡಿದ್ದೇನೆ’ ಎನ್ನುತ್ತಾರೆ ಅವರು.

‘ಹಾರ್ಸಿಕಟ್ಟಾದಲ್ಲಿರುವ ಅಘನಾಶಿನಿ ಸಾಂಬಾರು ಬೆಳೆಗಳ ಉತ್ಪಾದಕ ಕಂಪನಿಯ ಸಂಸ್ಥಾಪಕ ನಿರ್ದೇಶಕರಾಗಿದ್ದೇನೆ. ಬೆಳೆದ ಬೆಳೆಗಳಿಗೆ ಉತ್ಪಾದಕ ಕಂಪನಿಯ ಮೂಲಕ ಉತ್ತಮ ಮಾರುಕಟ್ಟೆಯನ್ನೂ ಕಂಡುಕೊಂಡಿದ್ದೇನೆ’ ಎಂದರು.

‘ಇಂದಿನ ಅಡಿಕೆಯ ಮಾರುಕಟ್ಟೆ ದರ ಗಮನಿಸಿ ಅಡಿಕೆ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಅಡಿಕೆಗೆ ದರ ಕುಸಿಯುವ ಸಾಧ್ಯತೆಯೂ ಬರಬಹುದು. ಕೇವಲ ಒಂದೇ ಬೆಳೆಯನ್ನು ಅವಲಂಬಿಸುವ ಬದಲು ಬಹು ಕೃಷಿ ಅಳವಡಿಸಿಕೊಂಡರೆ ಲಾಭದಾಯಕವಾಗಬಹುದು’ ಎಂದೂ ಸಲಹೆ ನೀಡಿದರು.

ಇಂಗುಗುಂಡಿಯ ಪ್ರಯೋಜನ: ಗಿಡಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಗುಡ್ಡದ ತುದಿಯಲ್ಲಿ ತೋಟಗಾರಿಕಾ ಇಲಾಖೆಯ ಯೋಜನೆ ಅಡಿಯಲ್ಲಿ ಇಂಗು ಗುಂಡಿಯನ್ನು ನಿರ್ಮಿಸಿದ್ದರು. ಕಳೆದ ಎರಡು ವರ್ಷ ಇಂಗು ಗುಂಡಿಯಲ್ಲಿ ನೀರು ಸಂಗ್ರಹಿಸಿ ಮೀನು ಸಾಕಣೆ ಮಾಡಿದ್ದರು. ಅದರಿಂದಲೂ ಆದಾಯ ಗಳಿಸಿದ್ದಾರೆ. ಖಾಲಿ ಜಾಗದಲ್ಲಿ ತೆಂಗು, ಲಿಂಬು, ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದಾರೆ.

***

ಗುಡ್ಡದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದು ಕಷ್ಟಸಾಧ್ಯ ಎಂದು ಹಲವರು ಹೇಳಿದ್ದರು. ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದೇನೆ.
ದಿನೇಶ ಹೆಗಡೆ ಕರ್ಕಿಸವಲು, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.