ಶಿರಸಿ: ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಏರ್ ಗನ್ ಟ್ರಿಗರ್ ಅದುಮಿದ ಪರಿಣಾಮ ಗುಂಡು ತಗುಲಿ ಮತ್ತೋರ್ವ ಬಾಲಕ ಮೃತಪಟ್ಟ ಘಟನೆ ಶಿರಸಿಯ ಸೋಮನಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಸೋಮನಳ್ಳಿಯ ರಾಘವೇಂದ್ರ ಹೆಗಡೆ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹಾವೇರಿ ಜಿಲ್ಲೆಯ ಬಸಪ್ಪ ಉಂಡಿಯರ್ ಎಂಬುವವರ ಇಬ್ಬರು ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ಒಂಭತ್ತು ವರ್ಷದ ಕರಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
'ಈ ಭಾಗದ ತೋಟದಲ್ಲಿ ಮಂಗಗಳ ಹಾವಳಿ ನಿಯಂತ್ರಿಸುವ ಸಲುವಾಗಿ ಗ್ರಾಮಸ್ಥರಿಂದ ನೇಮಕವಾಗಿದ್ದ ನಿತೀಶ ಗೌಡ ಅವರು ರಾಘವೇಂದ್ರ ಹೆಗಡೆ ಅವರಿಗೆ ಸೇರಿದ ಗನ್ ಹಿಡಿದುಕೊಂಡು ಬಸಪ್ಪ ಅವರ ಮನೆ ಬಳಿ ಬಂದಿದ್ದರು. ಈ ವೇಳೆ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ಅಲ್ಲಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಏಳು ವರ್ಷದ ಬಾಲಕ, ನಿತೀಶ ಗೌಡ ಅವರ ಕೈಯಲ್ಲಿದ್ದ ಏರ್ ಗನ್ ಟ್ರಿಗರ್ ಅದುಮಿದ್ದಾನೆ. ಇದರಿಂದ ಎದುರಿಗಿದ್ದ ಬಾಲಕನಿಗೆ ಗುಂಡು ತಗುಲಿ ಸ್ಥಳದಲ್ಲೇ ಕುಸಿದಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗದೇ ಬಾಲಕ ಮೃತಪಟ್ಟಿದ್ದಾನೆ' ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿ ಸಿಸಿಟಿವಿಯಲ್ಲಿ ವಿಡಿಯೋ ದಾಖಲಾಗಿದೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐ ಸಂತೋಷಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.