ADVERTISEMENT

ಕೂರ್ಮಗಡ ನರಸಿಂಹ ದೇವರ ಜಾತ್ರೆ: 27 ದೋಣಿಗಳಿಗೆ ಅನುಮತಿ

ಸಮುದ್ರ ಮಧ್ಯದಲ್ಲಿರುವ ನಡುಗಡ್ಡೆಯಲ್ಲಿ ನಡೆಯಲಿರುವ ಉತ್ಸವ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 14:45 IST
Last Updated 27 ಜನವರಿ 2021, 14:45 IST
ಜಾತ್ರೆಗೆ ತೆರಳುವ ದೋಣಿಗಳನ್ನು ಮೀನುಗಾರರು ಬೈತಖೋಲ್ ಬಂದರಿನಲ್ಲಿ ತಳಿರು ತೋರಣಗಳಿಂದ ಬುಧವಾರ ಅಲಂಕರಿಸಿರುವುದು
ಜಾತ್ರೆಗೆ ತೆರಳುವ ದೋಣಿಗಳನ್ನು ಮೀನುಗಾರರು ಬೈತಖೋಲ್ ಬಂದರಿನಲ್ಲಿ ತಳಿರು ತೋರಣಗಳಿಂದ ಬುಧವಾರ ಅಲಂಕರಿಸಿರುವುದು   

ಕಾರವಾರ: ಜಿಲ್ಲೆಯ ಪ್ರಸಿದ್ಧ ಕೂರ್ಮಗಡ ನರಸಿಂಹ ದೇವರ ಜಾತ್ರಾ ಮಹೋತ್ಸವವು ಜ.28ರಂದು ನಡೆಯಲಿದೆ. ಈ ಬಾರಿ ಕೋವಿಡ್ ಕಾರಣದಿಂದ ಸರಳವಾಗಿ, ಸರ್ಕಾರದ ನಿಯಮಾವಳಿ ಪ್ರಕಾರ ನೆರವೇರಲಿದೆ.

‘ಸಮುದ್ರ ಮಧ್ಯವಿರುವ ನಡುಗಡ್ಡೆಗೆ ತೆರಳಲು 18 ಟ್ರಾಲ್ ದೋಣಿಗಳು ಹಾಗೂ 9 ಪರ್ಸೀನ್ ದೋಣಿಗಳ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಷರತ್ತುಬದ್ಧವಾಗಿ ಎಲ್ಲರಿಗೂ ಅನುಮತಿ ನೀಡಲಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ದೋಣಿಗಳು ಮರು ಪ್ರಯಾಣ ಮಾಡಬೇಕು’ ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಿ.ನಾಗರಾಜು ತಿಳಿಸಿದ್ದಾರೆ.

ದೋಣಿಗಳ ಮಾಲೀಕರು ದೋಣಿ ನೋಂದಣಿಯ ಪ್ರಮಾಣ ಪತ್ರ ಹೊಂದಿರಬೇಕು. 10 ಮೀಟರ್‌ಗಿಂತ ಕಡಿಮೆ ಉದ್ದವಿರುವ ದೋಣಿಗಳಲ್ಲಿ 20, 10ರಿಂದ 15 ಮೀಟರ್ ಉದ್ದದ ದೋಣಿಗಳಲ್ಲಿ 30 ಮಂದಿ ಪ್ರಯಾಣಿಸಬಹುದು. 15ರಿಂದ 20 ಮೀಟರ್ ಉದ್ದದ ದೋಣಿಗಳಲ್ಲಿ ಗರಿಷ್ಠ 50 ಹಾಗೂ 20 ಮೀಟರ್‌ಗಿಂತ ಹೆಚ್ಚು ಉದ್ದದ ದೋಣಿಗಳಲ್ಲಿ 75 ಜನರಿಗೆ ಅನುಮತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ದೋಣಿಯಲ್ಲಿ ಪ್ರಯಾಣಿಸುವವರು ಜೀವರಕ್ಷಕ ಜಾಕೆಟ್ ಹಾಗೂ ಮುಖಗವಸನ್ನು ಕಡ್ಡಾಯವಾಗಿ ಧರಿಸಬೇಕು. ಜಾತ್ರೆಯ ಸಲುವಾಗಿ ನಡುಗಡ್ಡೆಗೆ ತೆರಳುವ ದೋಣಿಗಳ ವಿವರಗಳನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಬೇಕು ಎಂದೂ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಬೈತಖೋಲ್ ಮೀನುಗಾರಿಕಾ ಬಂದರು ಪ್ರದೇಶದಿಂದ ಮಾತ್ರ ದೋಣಿಗಳು ಸಾಗಲಿವೆ. ಕೋವಿಡ್ ಕಾರಣದಿಂದ ಸ್ಥಳೀಯರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.

ದೋಣಿಗಳಿಗೆ ಶೃಂಗಾರ:

ಕೂರ್ಮಗಡ ಜಾತ್ರೆಯು ಕಾರವಾರ ಸುತ್ತಮುತ್ತಲಿನ ಮೀನುಗಾರರಿಗೆ ವಿಶೇಷವಾಗಿದೆ. ಸಮುದ್ರದ ಮಧ್ಯೆ ಇರುವ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಧ್ಯಾಹ್ನ ವಾಪಸಾಗುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ. ಹಾಗಾಗಿ, ಬೈತಖೋಲ್ ಬಂದರಿನಿಂದ ತೆರಳುವ ದೋಣಿಗಳಿಗೆ ಬುಧವಾರವೇ ತಳಿರು ತೋರಣಗಳಿಂದ ಅಲಂಕರಿಸಿ ಸಿದ್ಧತೆ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.