ADVERTISEMENT

ಜೆ.ಜೆ.ಎಂ: ಉತ್ತರ ಕನ್ನಡ ಜಿಲ್ಲೆಗೆ ₹ 405 ಕೋಟಿ ಯೋಜನೆ ಮಂಜೂರು

ಜಿಲ್ಲೆಯಲ್ಲಿ ವಿವಿಧ ‘ಅಮೃತ ಯೋಜನೆ’ಗಳ ಜಾರಿ: ಸಚಿವ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 16:19 IST
Last Updated 27 ಸೆಪ್ಟೆಂಬರ್ 2021, 16:19 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಕಾರವಾರ: ‘ಜಿಲ್ಲೆಯಲ್ಲಿ ಜಲಜೀವನ ಮಿಷನ್ (ಜೆ.ಜೆ.ಎಂ) ಯೋಜನೆಯಡಿ ಮೊದಲ ಹಂತದಲ್ಲಿ ₹ 215 ಕೋಟಿ ಹಾಗೂ ಎರಡನೇ ಹಂತದಲ್ಲಿ ₹ 190 ಕೋಟಿ ಮಂಜೂರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಒಟ್ಟು ₹ 405 ಕೋಟಿಗೂ ಅಧಿಕ ಅನುದಾನದ ಕಾಮಗಾರಿಗಳು ಜಿಲ್ಲೆಯಲ್ಲಿ ಆರಂಭವಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ‘ಜೆ.ಜೆ.ಎಂ ಕಾರ್ಯಕ್ರಮದ ಮೊದಲ ಹಂತದಲ್ಲಿ 283 ಕಾಮಗಾರಿಗಳು ಮಂಜೂರಾಗಿವೆ. ಅವುಗಳಲ್ಲಿ 66 ಪೂರ್ಣವಾಗಿದ್ದು, 182 ಪ್ರಗತಿಯಲ್ಲಿವೆ. 20,735 ನಳ ಸಂಪರ್ಕ ನೀಡಲಾಗಿದೆ. ಎರಡನೇ ಹಂತದಲ್ಲಿ 563 ಕಾಮಗಾರಿಗಳಿದ್ದು, 83,154 ಮನೆಗಳಿಗೆ ಸಂಪರ್ಕ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಹೊಸ ‘ಬಹುಗ್ರಾಮ’ ಕುಡಿಯುವ ನೀರು ಯೋಜನೆಗಳು:

ADVERTISEMENT

ಜಿಲ್ಲೆಯಲ್ಲಿ ಐದು ಹೊಸ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಅಂಕೋಲಾದ ವಾಸರಕುದ್ರಿಗೆಯಲ್ಲಿ ಗಂಗಾವಳಿ ನದಿಗೆ ₹ 26 ಕೋಟಿಯಲ್ಲಿ, ಭಟ್ಕಳದ ಶಿರಾಲಿಗೆ ಶರಾವತಿ ನದಿಯಿಂದ ₹ 56 ಕೋಟಿಯಲ್ಲಿ, ಹೊನ್ನಾವರದ ಕರ್ಕಿ ಮತ್ತು ಇತರ 24 ಗ್ರಾಮಗಳಿಗೆ ಶರಾವತಿ ನದಿಯಿಂದ ₹ 71 ಕೋಟಿಯಲ್ಲಿ, ಕುಮಟಾದ ಹೆಗಡೆ ಮತ್ತು 65 ಗ್ರಾಮಗಳಿಗೆ ಅಘನಾಶಿನಿ ನದಿಯಿಂದ ₹ 85 ಕೋಟಿಯಲ್ಲಿ ಹಾಗೂ ಮುಂಡಗೋಡದ ಬಾಚಣಕಿ ಗ್ರಾಮ ಪಂಚಾಯಿತಿಗೆ ₹ 66.37 ಕೋಟಿ ವೆಚ್ಚದ ಕಾಮಗಾರಿ ಮಂಜೂರಾಗಿವೆ ಎಂದು ತಿಳಿಸಿದರು.

ಪ್ರಗತಿಯಲ್ಲಿರುವ ಯೋಜನೆಗಳು:

ಹಳಿಯಾಳದ ತೇರಗಾಂವ ಗ್ರಾಮದಲ್ಲಿ 91 ಹಳ್ಳಿಗಳಿಗೆ ₹ 119 ಕೋಟಿ ವೆಚ್ಚದ ಕಾಮಗಾರಿ ಮತ್ತು ಗೋಕರ್ಣದ 20 ಗ್ರಾಮಗಳಿಗೆ ₹ 24.50 ಕೋಟಿ ಮೌಲ್ಯದ ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿವೆ. ಅವುಗಳನ್ನು ಶೀಘ್ರವೇ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಉಳಿದಂತೆ, ಮುಂಡಗೋಡದ ಧರ್ಮಾ ಜಲಾಶಯದಿಂದ ಮಳಗಿ, ಪಾಳಾ ಕೂಡಂಬಿಗೆ ನೀರು ಸಾಗಿಸಲು ₹ 4.50 ಕೋಟಿ ಮೌಲ್ಯದ ಟೆಂಡರ್ ಆಗಿದೆ. ಬದನಗೋಡಿಗೆ ನೀರು ನೀಡಲು ₹ 4.60 ಕೋಟಿಯ ಟೆಂಡರ್ ಕರೆಯಲಾಗಿದೆ. ಬನವಾಸಿಗೆ ₹ 7 ಕೋಟಿ ವೆಚ್ಚದ ಯೋಜನೆ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

‘ಅಮೃತ’ ಯೋಜನೆಗಳು:

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ‘ಅಮೃತ ಯೋಜನೆ’ಗಳನ್ನು ಪ್ರಕಟಿಸಲಾಗಿದೆ. 27 ಅಮೃತ ಗ್ರಾಮ ಪಂಚಾಯಿತಿಗಳಿಗೆ ತಲಾ ₹ 25 ಲಕ್ಷ ನೀಡಲಾಗುವುದು. ಅಮೃತ ವಸತಿ ಯೋಜನೆಯಡಿ 23 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದ್ದೆ. ಅಮೃತ ಶಾಲೆ ಯೋಜನೆಯಡಿ ಕಾರವಾರ ಶೈಕ್ಷಣಿಕ ಜಿಲ್ಲೆಯಿಂದ 18 ಹಾಗೂ ಶಿರಸಿ ಜಿಲ್ಲೆಯಿಂದ 22 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳಿಗೆ ತಲಾ ₹ 10 ಲಕ್ಷ ಸಿಗಲಿದೆ. 120 ಅಮೃತ ಸ್ವಸಹಾಯ ಗುಂಪುಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ತಲಾ ₹ 1 ಲಕ್ಷ ಸಹಾಯಧನ ನೀಡಲಾಗುವುದು. ಉಸ್ತುವಾರಿ ಸಚಿವರ ಅಧ್ಯಕ್ಷೆತಯಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.