ADVERTISEMENT

ಕನಿಷ್ಠ ದರಕ್ಕೆ ಅನಾನಸ್ ಮಾರಾಟ!

ಹೊರ ರಾಜ್ಯ, ಜಿಲ್ಲೆಗೆ ಪೂರೈಕೆ ಸ್ಥಗಿತ: ಸ್ಥಳೀಯ ಮಾರುಕಟ್ಟೆ ನೆಚ್ಚಿಕೊಂಡ ರೈತರು

ಗಣಪತಿ ಹೆಗಡೆ
Published 3 ಆಗಸ್ಟ್ 2021, 3:15 IST
Last Updated 3 ಆಗಸ್ಟ್ 2021, 3:15 IST
ಅನಾನಸ್ ಬೆಳೆಗಾರರು ಹಣ್ಣುಗಳನ್ನು ಗಾಡಿಯಲ್ಲಿ ತಂದು ಶಿರಸಿ ನಗರದಲ್ಲಿ ಮಾರುತ್ತಿರುವುದು
ಅನಾನಸ್ ಬೆಳೆಗಾರರು ಹಣ್ಣುಗಳನ್ನು ಗಾಡಿಯಲ್ಲಿ ತಂದು ಶಿರಸಿ ನಗರದಲ್ಲಿ ಮಾರುತ್ತಿರುವುದು   

ಶಿರಸಿ: ತಾಲ್ಲೂಕಿನ ಪೂರ್ವಭಾಗದ ರೈತರ ಆದಾಯಕ್ಕೆ ಬಹುದೊಡ್ಡ ಮೂಲವಾಗಿದ್ದ ಅನಾನಸ್ ಇಳುವರಿ ಇತ್ತೀಚಿನ ವರ್ಷಗಳಲ್ಲಿ ಇಳಿಮುಖಗೊಳ್ಳುತ್ತ ಸಾಗಿದೆ. ಫಸಲು ಕೊಯ್ಲು ಮುಗಿಯುವ ಹೊತ್ತಿಗೆ ಕಡಿಮೆ ದರಕ್ಕೆ ಹಣ್ಣು ಮಾರುವ ಅನಿವಾರ್ಯತೆ ಉಂಟಾಗಿದೆ.

ಏಪ್ರಿಲ್‍ನಿಂದ ಜೂನ್‍ವರೆಗೆ ಹೇರಳ ಪ್ರಮಾಣದಲ್ಲಿ ಅನಾನಸ್ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಜುಲೈ, ಆಗಸ್ಟ್ ಮಧ್ಯಂತರದವರೆಗೂ ಹಣ್ಣುಗಳ ಕೊಯ್ಲು ನಡೆಯುತ್ತವೆ. ಬನವಾಸಿ, ಭಾಶಿ, ತಿಗಣಿ, ಕಿರವತ್ತಿ, ಹೆಬ್ಬತ್ತಿ ಸೇರಿದಂತೆ ಪೂರ್ವಭಾಗದ ನೂರಾರು ರೈತರಿಗೆ ಇದು ಮುಖ್ಯ ಬೆಳೆಯೂ ಆಗಿದೆ.

ಸರಾಸರಿ ₹20–25 ದರದಲ್ಲಿ ಮಾರಾಟವಾಗುತ್ತಿದ್ದ ಹಣ್ಣುಗಳನ್ನು ಈಗ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ನಗರದ ಮಾರುಕಟ್ಟೆಯಲ್ಲಿ ಸಾಧಾರಣ ಗಾತ್ರದ ಹಣ್ಣುಗಳನ್ನು ₹8, ₹10ಕ್ಕೆ ಮಾರಲಾಗುತ್ತಿದೆ. ಗೂಡ್ಸ್ ರಿಕ್ಷಾಗಳಲ್ಲಿ ಹಣ್ಣುಗಳನ್ನು ತಂದು ಮಾರುವ ದೃಶ್ಯಗಳು ಸಾಮಾನ್ಯವಾಗಿವೆ.

ADVERTISEMENT

‘ಮಳೆಗಾಲದಲ್ಲಿ ಅನಾನಸ್ ಹಣ್ಣುಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಕಳಿಸಲಾಗುತ್ತಿತ್ತು. ಈ ಬಾರಿ ನೆರೆಯಿಂದ ಬೆಳಗಾವಿ, ವಿಜಯಪುರ ಭಾಗದಲ್ಲಿ ಬೇಡಿಕೆ ಕುಸಿದಿದೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಗೆ ಹಣ್ಣು ಪೂರೈಸಲಾಗುತ್ತಿದೆ’ ಎನ್ನುತ್ತಾರೆ ರೈತ ರಾಘವೇಂದ್ರ ನಾಯ್ಕ.

‘ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಗೆ ಕೆಲ ರೈತರು ಈಗಲೂ ಹಣ್ಣು ಕಳಿಸುತ್ತಿದ್ದರು. ಅಲ್ಲಿನ ವ್ಯಾಪಾರಿಗಳು ಸಿಲಿಗುರಿಯಿಂದ ಸದ್ಯ ಹಣ್ಣು ಖರೀದಿಸುತ್ತಿರುವ ಪರಿಣಾಮ ಬನವಾಸಿ ಭಾಗದ ಹಣ್ಣುಗಳ ಬೇಡಿಕೆ ಕುಸಿದಿದೆ. ದರ ಇಳಿಕೆಗೂ ಇದು ಒಂದು ಕಾರಣವಾಗಿರಬಹುದು’ ಎಂದು ತಿಳಿಸಿದರು.

‘ಸತತ ಲಾಕ್‍ಡೌನ್ ಕಾರಣದಿಂದ ಹಣ್ಣುಗಳನ್ನು ಹೊರ ರಾಜ್ಯಕ್ಕೆ ಕಳಿಸುವುದು ಕಷ್ಟಸಾದ್ಯವಾಗಿತ್ತು. ಆಗ ಸ್ಥಳೀಯ ಮಾರುಕಟ್ಟೆಗೆ, ಸಂಸ್ಕರಣಾ ಘಟಕಕ್ಕೆ ಹಣ್ಣು ಮಾರಾಟ ಹೆಚ್ಚಿತ್ತು. ಈಗ ಅಲ್ಲಿಯೂ ಹೆಚ್ಚು ಬೇಡಿಕೆ ಇಲ್ಲ. ವಾರದೊಳಗೆ ಅವು ಮುಚ್ಚುವ ಸಾಧ್ಯತೆ ಇದೆ. ಹೀಗಾಗಿ ಸೀಸನ್ ಕೊನೆಯಲ್ಲಿ ಕನಿಷ್ಠ ದರ ಕಾಣುವಂತಾಗಿದೆ’ ಎಂದು ಹಣ್ಣು ವ್ಯಾಪಾರಿ ಉಮೇಶ ಉಪ್ಪಾರ ತಿಳಿಸಿದರು.

‘ಪಶ್ಚಿಮ ಬಂಗಾಳದಿಂದ ದೆಹಲಿ ಮತ್ತಿತರ ಕಡೆಗೆ ಅನಾನಸ್ ಪೂರೈಕೆಯಾಗುತ್ತಿದೆ. ಸೀಸನ್ ಕೊನೆಯಲ್ಲಿ ಸ್ಥಳೀಯವಾಗಿ ಹಣ್ಣುಗಳನ್ನು ಮಾರಾಟ ಮಾಡಬೇಕಿರುವುದು ದರ ಇಳಿಕೆಗೆ ಕಾರಣವಾಗಿರಬಹುದು’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗಣೇಶ ಹೆಗಡೆ ಅಭಿಪ್ರಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.