ADVERTISEMENT

ಬೇಡ್ತಿ, ವರದಾ ನದಿ ತಿರುವು ಯೋಜನೆಯ ಡಿಪಿಆರ್ ಕೈಬಿಡಿ-ಅಶೀಸರ

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಮೇ 2022, 13:06 IST
Last Updated 2 ಮೇ 2022, 13:06 IST
ಅನಂತ ಹೆಗಡೆ ಅಶೀಸರ
ಅನಂತ ಹೆಗಡೆ ಅಶೀಸರ   

ಶಿರಸಿ: ಬೇಡ್ತಿ, ವರದಾ ನದಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ರಾಜ್ಯ ನೀರಾವರಿ ಇಲಾಖೆಗೆ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕೈಬಿಡುವಂತೆ ವೃಕ್ಷಲಕ್ಷ ಆಂದೋಲನ ಸಮಿತಿ ಅದ್ಯಕ್ಷ ಅನಂತ ಹೆಗಡೆ ಅಶೀಸರ ಒತ್ತಾಯಿಸಿದ್ದಾರೆ.

ಈಚೆಗೆ ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿದ್ದ ಅಶೀಸರ ಅವರು ಡಿಪಿಆರ್ ತಿರಸ್ಕರಿಸುವಂತೆ ಒತ್ತಾಯಿಸಿದ್ದಾರೆ.

‘ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ನದಿ ಕಣಿವೆಗಳ ನಾಶಕ್ಕೆ ಕಾರಣವಾಗಲಿದೆ. ಭೂಕುಸಿತವಾಗಲಿದೆ. ಅವೈಜ್ಞಾನಿಕ, ಅವ್ಯವಹಾರಿಕ ಯೋಜನೆ ಇದಾಗಿದ್ದು, ರೈತರು ವನವಾಸಿಗಳ ಬದುಕಿಗೆ ಮಾರಕವಾಗಲಿದೆ. ಈ ಯೋಜನೆ ಕೈಗೆತ್ತಿಕೊಳ್ಳಬಾರದು ಎಂದು ಮನವಿ ಮಾಡಿದ್ದೇವೆ’ ಎಂದು ಅಶೀಸರ ತಿಳಿಸಿದ್ದಾರೆ.

ADVERTISEMENT

‘ವರದಿಯ ಅಂಶಗಳನ್ನು ಸ್ವರ್ಣವಲ್ಲಿ ಸ್ವಾಮೀಜಿ ಗಮನಕ್ಕೆ ತರಲಾಗಿದ್ದು ಶೀಘ್ರ ಸಭೆ ಕರೆಯಲು ಸೂಚಿಸಿದ್ದಾರೆ. ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಲಿದ್ದೇವೆ’ ಎಂದು ಹೇಳಿದ್ದಾರೆ.

‘ಶಿರಲೇಬೈಲ್ ಎಂಬಲ್ಲಿ ಪಟ್ಟಣದ ಹೊಳೆಯಿಂದ, ಹುಳಗೋಳ ಸಮೀಪ ಶಾಲ್ಮಲಾ ನದಿಯಿಂದ, ಯಲ್ಲಾಪುರದ ಸುರೆಮನೆ ಎಂಬಲ್ಲಿ ಬೇಡ್ತಿ ನದಿಯಿಂದ ನೀರು ಸಾಗಿಸುವ ಯೋಜನೆಗಳ ಪ್ರಸ್ತಾಪ ಇದೆ. ಒಟ್ಟೂ 22 ಟಿಎಂಸಿ ನೀರನ್ನು ಶಾಲ್ಮಲಾ, ಬೇಡ್ತಿಯಿಂದ ಸಾಗಿಸುವ ಮಾಹಿತಿ ವರದಿಯಲ್ಲಿದೆ’ ಎಂದು ತಿಳಿಸಿದ್ದಾರೆ.

‘ 145 ಮೀ. ಉದ್ದದ ಅಡ್ಡ ಕಟ್ಟೆಯನ್ನು ಪಟ್ಟಣದ ಹೊಳೆಗೆ, 202 ಮೀಟರ್ ಉದ್ದದ ಆಣೆಕಟ್ಟೆಯನ್ನು ಶಾಲ್ಮಲಾ ನದಿಗೆ, 165 ಮೀ. ಉದ್ದದ ಆಣೆಕಟ್ಟೆಯನ್ನು ಬೇಡ್ತಿ ನದಿಗೆ ನಿರ್ಮಿಸಲಾಗುವುದು. ಸುಮಾರು 608 ಎಕರೆ ಅರಣ್ಯ ನಾಶವಾಗಲಿದೆ ಎಂದು ಡಿಪಿಆರ್ ನಲ್ಲಿ ಉಲ್ಲೇಖವಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.