
ಅಂಕೋಲಾ: ತಾಲ್ಲೂಕಿನ ಪೂಜಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆಂದು ಆರೋಪಿಸಿ ವಿದ್ಯಾರ್ಥಿಗಳು, ಪಾಲಕರು ಮಂಗಳವಾರ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.
‘ಉಪನ್ಯಾಸಕ ರಾಮಚಂದ್ರ ಅಂಕೋಲೆಕರ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಕ್ರಮಕ್ಕೆ ಮುಂದಾಗಬೇಕಿದ್ದ ಕಾಲೇಜಿನ ಪ್ರಾಚಾರ್ಯೆ ವಿಜಯಾ ಪಾಟೀಲ್ ಅವರು ಉಪನ್ಯಾಸಕರ ರಕ್ಷಣೆಗೆ ಪ್ರಯತ್ನಿಸುತ್ತಿರುವ ಶಂಕೆ ಇದೆ. ದೂರು ನೀಡಿದ ವಿದ್ಯಾರ್ಥಿನಿಯರಿಂದ ಆರೋಪಕ್ಕೆ ವಿರುದ್ಧವಾಗಿ ಮುಚ್ಚಳಿಕೆ ಬರೆಯಿಸಿಕೊಳ್ಳಲು ಅವರು ಒತ್ತಡ ಹೇರಿದ್ದಾರೆ’ ಎಂದು ಪಾಲಕರು ಆರೋಪಿಸಿದರು.
‘ಕಾಲೇಜು ಅಭಿವೃದ್ಧಿ ಸಮಿತಿ ಗಮನಕ್ಕೆ ತರದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದು ತಪ್ಪು’ ಎಂದು ಸಮಿತಿ ಉಪಾಧ್ಯಕ್ಷ ಮಂಜೇಶ್ವರ ನಾಯಕ ಪ್ರಾಚಾರ್ಯರನ್ನು ತರಾಟೆಗೆ ಪಡೆದರು.
ಪ್ರತಿಭಟನಾಕಾರರು ನಂತರ ತಹಶೀಲ್ದಾರ್ ಕಚೇರಿಗೆ ಬಂದು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಅವರಿಗೆ ಮನವಿ ಸಲ್ಲಿಸಿ, ಉಪನ್ಯಾಸಕ ಅಮಾನತ್ತುಗೊಳಿಸಬೇಕು, ಪ್ರಾಚಾರ್ಯರನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಜಯ ಬಲೇಗಾರ, ಪ್ರಮೋದ ಬಾನಾವಳಿಕರ, ರಾಜು ಹರಿಕಂತ್ರ, ಸುಂದರ ಖಾರ್ವಿ, ಸಚಿನ ಅನ್ನೋಟಿಕರ, ಇತರರು ಪಾಲ್ಗೊಂಡಿದ್ದರು.
ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.