ADVERTISEMENT

ಅಂಕೋಲಾ | ಶಿಥಿಲಾವಸ್ಥೆಯಲ್ಲಿ ಸಿಂಡ್ಲಗದ್ದೆ ಸೇತುವೆ: ಜೀವಭಯದಲ್ಲೇ ಸಾಗುವ ಜನರು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 13:08 IST
Last Updated 10 ಫೆಬ್ರುವರಿ 2025, 13:08 IST
ಅಂಕೋಲಾ ತಾಲ್ಲೂಕಿನ ಸುಂಕಸಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಡ್ಲಗದ್ದೆ ಸೇತುವೆ ಶಿಥಿಲಾವಸ್ಥೆಯಲ್ಲಿರುವುದು
ಅಂಕೋಲಾ ತಾಲ್ಲೂಕಿನ ಸುಂಕಸಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಡ್ಲಗದ್ದೆ ಸೇತುವೆ ಶಿಥಿಲಾವಸ್ಥೆಯಲ್ಲಿರುವುದು   

ಅಂಕೋಲಾ: ತಾಲ್ಲೂಕಿನ ಸುಂಕಸಾಳ–ಸಿಂಡ್ಲಗದ್ದೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ಕಿರುಸೇತುವೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಜನರು ಆತಂಕದಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕು ಕೇಂದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಸಿಂಡ್ಲಗದ್ದೆ ಹಾಗೂ ಬೇರುಳಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮನೆಗಳಿವೆ. ಈ ಗ್ರಾಮದ ಜನರು ಸುಂಕಸಾಳಕ್ಕೆ ತಲುಪಲು ಕಿರುಸೇತುವೆ ದಾಟಿ ಬರಬೇಕಿದೆ. ಗ್ರಾಮದಲ್ಲಿ ಹರಿಯುವ ದೊಡ್ಡದಾದ ಹಳ್ಳಕ್ಕೆ ಎರಡು ದಶಕಗಳ ಹಿಂದೆ ನಿರ್ಮಿಸಿದ ಸೇತುವೆ ಕುಸಿದು ಬೀಳುವ ಅಪಾಯ ಎದುರಿಸುತ್ತಿದೆ ಎಂಬುದಾಗಿ ಸ್ಥಳಿಯರು ದೂರಿದ್ದಾರೆ.

‘ಗ್ರಾಮದಲ್ಲಿನ ಹತ್ತಾರು ವಿದ್ಯಾರ್ಥಿಗಳು ನಿತ್ಯ ಶಾಲೆಕಾಲೇಜುಗಳಿಗೆ ತೆರಳಲು ಇದೇ ಸೇತುವೆ ಬಳಕೆ ಅನಿವಾರ್ಯ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದ ವೇಳೆ ಸೇತುವೆ ದಾಟಲು ಜನರು ಹಿಂಜರಿದಿದ್ದರು. ಹಳೆದಾದ ಸೇತುವೆಯ ಕಾಂಕ್ರೀಟ್ ಕಂಬಗಳಲ್ಲಿ ಬಿರುಕುಗಳಿವೆ. ಕಲ್ಲುಗಳು ಅಲ್ಲಲ್ಲಿ ಕಿತ್ತು ಬಿದ್ದಿವೆ. ಜೀವ ಕೈಲಿ ಹಿಡಿದು ಸೇತುವೆ ದಾಟುತ್ತಿದ್ದೇವೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ADVERTISEMENT

‘ಹಿಂದಿನ ಸರ್ಕಾರದ ಅವಧಿಯಲ್ಲಿ ರೂಪಾಲಿ ನಾಯ್ಕ ಶಾಸಕರಾಗಿದ್ದ ಅವಧಿಯಲ್ಲಿ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಈವರೆಗೆ ಕಾಮಗಾರಿ ಆರಂಭಗೊಂಡಿಲ್ಲ. ಈಗಿನ ಶಾಸಕ ಸತೀಶ ಸೈಲ್ ಗಮನಕ್ಕೂ ತರಲಾಗಿದೆ’ ಎಂದು ಗ್ರಾಮಸ್ಥರಾದ ಲಕ್ಷ್ಮಣ್ ಗೌಡ, ನಾರಾಯಣ ಭಟ್, ಮಹಾಬಲೇಶ್ವರ ನಾಯ್ಕ, ಸತೀಶ್ ನಾಯ್ಕ, ಗೌರಿ ಗೌಡ, ಇತರರು ಹೇಳಿದ್ದಾರೆ.

‘ಸೇತುವೆಯು ಶಿಥಿಲಗೊಂಡಿರುವ ಬಗ್ಗೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಸುಂಕಸಾಳ ಗ್ರಾಮ ಪಂಚಾಯಿತಿ ಪಿಡಿಒ ನಾಗೇಂದ್ರ ನಾಯ್ಕ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.