ADVERTISEMENT

ಕಾರವಾರ: ವರ್ಷದಿಂದ ವರ್ಷಕ್ಕೆ ಭತ್ತದ ಕೃಷಿ ಇಳಿಕೆ

2015ರಿಂದ 18,992 ಹೆಕ್ಟೇರ್ ಕಳೆದುಕೊಂಡ ಭತ್ತ: ವಾಣಿಜ್ಯ ಬೆಳೆಗಳತ್ತ ರೈತರ ಚಿತ್ತ

ಸದಾಶಿವ ಎಂ.ಎಸ್‌.
Published 25 ಡಿಸೆಂಬರ್ 2021, 19:31 IST
Last Updated 25 ಡಿಸೆಂಬರ್ 2021, 19:31 IST
   

ಕಾರವಾರ: ಜಿಲ್ಲೆಯಲ್ಲಿ ಭತ್ತ ವ್ಯವಸಾಯ ಪ್ರದೇಶದಲ್ಲಿ 2015ರಿಂದ 2021ರ ಅವಧಿಯಲ್ಲಿ ಆಗಿರುವ ಒಟ್ಟು ಇಳಿಕೆ ಬರೋಬ್ಬರಿ 18,992 ಹೆಕ್ಟೇರ್. ಒಂದೆಡೆ ಅಡಿಕೆ, ಶುಂಠಿಯಂಥ ವಾಣಿಜ್ಯ ಬೆಳೆಗಳು, ಮತ್ತೊಂದೆಡೆ ಮೆಕ್ಕೆಜೋಳದ ಬೇಸಾಯವು ರೈತರನ್ನು ಆಕರ್ಷಿಸಿದ್ದರ ಪರಿಣಾಮವೇ ಇದು.

ಭತ್ತವು ಕಳೆದುಕೊಂಡಿರುವ ಬಹುಪಾಲು ಗದ್ದೆ ಪ್ರದೇಶವನ್ನು ಅಡಿಕೆ ಪಡೆದುಕೊಂಡಿದೆ. ಜಿಲ್ಲೆಯಲ್ಲಿ 2016–17ರ ಅವಧಿಯಲ್ಲಿ ಜಿಲ್ಲೆಯಲ್ಲಿ ಅಡಿಕೆ ತೋಟದ ವ್ಯಾಪ್ತಿಯು 18,527 ಹೆಕ್ಟೇರ್ ಇತ್ತು. 2020–21ರಲ್ಲಿ 31,274 ಹೆಕ್ಟೇರ್‌ಗೆ ಏರಿಕೆಯಾಗಿದೆ. ಐದು ವರ್ಷಗಳ ಅವಧಿಯಲ್ಲಿ 12,747 ಹೆಕ್ಟೇರ್‌ಗಳಷ್ಟು ಅಡಿಕೆ ತೋಟ ಹೆಚ್ಚಳವಾಗಿದೆ. ಇದಕ್ಕೆ ಸಿಂಹಪಾಲು ಜಾಗ ಸಿಕ್ಕಿರುವುದು ಭತ್ತದ ಗದ್ದೆಗಳಲ್ಲೇ ಎಂಬುದು ಗಮನಾರ್ಹ.

‘ಮೂರು ಹೊತ್ತು ಊಟ ಮಾಡಲು ಭತ್ತದ ಕೃಷಿ ಖಂಡಿತ ಅಗತ್ಯ. ಆದರೆ, ಅದಕ್ಕೆ ಪ್ರತಿವರ್ಷ ಎದುರಾಗುತ್ತಿರುವ ತೊಡಕುಗಳು ಅನುಭವಿಸಿದವರಿಗೇ ಗೊತ್ತು. ಸಕಾಲಕ್ಕೆ ಮಳೆ ಬರುವುದಿಲ್ಲ. ಬಂದರೆ, ವಿಪರೀತ ಸುರಿಯುತ್ತದೆ. ಅಕಾಲಿಕವಾಗಿ ಮಳೆಯಾಗಿ, ಕಷ್ಟಪಟ್ಟು ಬೆಳೆದಿದ್ದ ಫಸಲೆಲ್ಲ ನೀರುಪಾಲಾಗುತ್ತದೆ. ಈ ವರ್ಷ ಹೀಗೆ ಪೈರು ಹಾಳಾಗಿದ್ದೇ ಅಧಿಕ. ಜೊತೆಗೇ ಕಾಡಂಚಿನ ಹೊಲಗ ಳಿಗೆ ಕಾಡಾನೆ, ಕಾಡೆಮ್ಮೆಗಳಂಥ ವನ್ಯಜೀವಿಗಳ ಉಪಟಳ. ಹಾಗಾಗಿ ಭತ್ತದ ಕೃಷಿಯಿಂದ ಅನಿವಾರ್ಯವಾಗಿ ವಿಮುಖರಾಗಬೇಕಾಗಿದೆ’ ಎನ್ನುತ್ತಾರೆ ಹೊನ್ನಾವರದ ರೈತ ವಿನಯ ನಾಯ್ಕ.

ADVERTISEMENT

ಇದೇ ರೀತಿಯ ಅಭಿಪ್ರಾಯ ಹಲವರದ್ದಾಗಿದೆ. ಅಡಿಕೆ ಸಸಿ ನೆಟ್ಟ ಬಳಿಕ ಮೂರು ವರ್ಷ ಅಷ್ಟಾಗಿ ಆರೈಕೆ ಬೇಕಾಗುವುದಿಲ್ಲ. ಫಸಲು ಬರಲು ಶುರುವಾದ ಮೇಲೆ ಕೂಡ ಭತ್ತದಷ್ಟು ಕಾಳಜಿ ಮಾಡಬೇಕಿಲ್ಲ. ಮಳೆಗಾಲ ಔಷಧ ಸಿಂಪಡಣೆ, ಅಡಿಕೆ ಗೊನೆ ಬಲಿತ ನಂತರ ಕೊಯ್ಲು ಮಾಡುವುದು, ಅಡಿಕೆಯನ್ನು ಬೇಯಿಸುವುದು ಅಥವಾ ಒಣಗಿಸಿದರಾಯಿತು. ಒಂದು ವರ್ಷದಿಂದ ಪ್ರತಿ ಕ್ವಿಂಟಲ್ ಅಡಿಕೆಯ ದರವೂ ಆಕರ್ಷಕವಾಗಿದೆ. ಹಾಗಾಗಿ ಅಂಗಡಿಯಿಂದ ಅಕ್ಕಿ ತಂದರೂ ಚಿಂತೆಯಿಲ್ಲ. ಬೇಸಾಯಕ್ಕೆ ಬಂಡವಾಳ ಹೂಡಿ ನಷ್ಟ ಮಾಡಿಕೊಳ್ಳಲು ಮನಸ್ಸಿಲ್ಲ ಎನ್ನುತ್ತಾರೆ.

ಮೆಕ್ಕೆಜೋಳದತ್ತ ಚಿತ್ತ: ಹಳಿಯಾಳ, ಮುಂಡಗೋಡ, ಯಲ್ಲಾಪುರ ತಾಲ್ಲೂಕಿನ ಕೆಲವೆಡೆ ಇತ್ತೀಚಿನ ವರ್ಷ ಗಳಲ್ಲಿ ಮೆಕ್ಕೆಜೋಳ ಬೆಳೆಯ ವ್ಯಾಪ್ತಿ ಹೆಚ್ಚಳವಾಗಿದೆ. ಕೆಲವೆಡೆ ಶುಂಠಿ ಕೃಷಿಯೂ ಹೆಚ್ಚಿದೆ. ಇವು ಗಳಿಗೆ ಭತ್ತದಷ್ಟು ನೀರು ಕೂಡ ಬೇಕಾಗು ವುದಿಲ್ಲ. ವಾಣಿಜ್ಯಿಕ ದೃಷ್ಟಿಯಿಂದ ಬೆಳೆದಾಗ ಭತ್ತದಷ್ಟು ಆರ್ಥಿಕವಾಗಿ ಹೊರೆಯಾಗುವುದಿಲ್ಲ ಎನ್ನುತ್ತಾರೆ ಹಳಿಯಾಳದ ರೈತ ಶರಣಪ್ಪ.

ಎರಡು ತಾಲ್ಲೂಕುಗಳಲ್ಲಿ ಏರಿಕೆ:ಇಡೀ ಜಿಲ್ಲೆಯಲ್ಲಿ 2015ರಿಂದ ಈಚೆಗೆ ಭತ್ತದ ಕೃಷಿಯಲ್ಲಿ ಇಳಿಕೆಯಾಗಿದ್ದರೆ, ಜೊಯಿಡಾ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೊಯಿಡಾದಲ್ಲಿ 285 ಹೆಕ್ಟೇರ್ ಹಾಗೂ ಸಿದ್ದಾಪುರ ತಾಲ್ಲೂಕಿನಲ್ಲಿ 15 ಹೆಕ್ಟೇರ್ ಹೆಚ್ಚಳವಾಗಿದೆ.

ಹಳಿಯಾಳ ತಾಲ್ಲೂಕಿನಲ್ಲಿ ಅತಿ ಹೆಚ್ಚು ಭತ್ತದ ಕೃಷಿ ವ್ಯಾಪ್ತಿ ಇಳಿಕೆಯಾಗಿದೆ. ಇಲ್ಲಿ 6,500 ಹೆಕ್ಟೇರ್‌ಗೂ ಅಧಿಕ ಪ್ರದೇಶ, ಮುಂಡಗೋಡದಲ್ಲಿ 4,900 ಹೆಕ್ಟೇರ್‌ಗೂ ಹೆಚ್ಚು ಬೇಸಾಯ ಕಡಿಮೆಯಾಗಿದೆ.

ಉಳಿದಂತೆ, ಕುಮಟಾ ತಾಲ್ಲೂಕಿನಲ್ಲಿ 1,600, ಹೊನ್ನಾವರ ತಾಲ್ಲೂಕಿನಲ್ಲಿ 1,480, ಯಲ್ಲಾಪುರ ತಾಲ್ಲೂಕಿನಲ್ಲಿ 1,300, ಭಟ್ಕಳ ತಾಲ್ಲೂಕಿನಲ್ಲಿ 1,200, ಕಾರವಾರ ತಾಲ್ಲೂಕಿನಲ್ಲಿ 1,000, ಅಂಕೋಲಾ ತಾಲ್ಲೂಕಿನಲ್ಲಿ 920 ಹಾಗೂ ಶಿರಸಿ ತಾಲ್ಲೂಕಿನಲ್ಲಿ ಅತಿ ಕಡಿಮೆ 67 ಹೆಕ್ಟೇರ್‌ಗಳಷ್ಟು ಇಳಿಕೆಯಾಗಿದೆ.

*
ಜಿಲ್ಲೆಯಲ್ಲಿ ಭತ್ತದ ಕೃಷಿ ಇತ್ತೀಚೆಗೆ ಇಳಿಕೆಯಾಗುತ್ತಿದೆ. ರೈತರು ನಾನಾ ಕಾರಣಗಳಿಂದ ಅಡಿಕೆ, ಶುಂಠಿ, ಮೆಕ್ಕೆಜೋಳದ ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
–ನಟರಾಜ, ಕೃಷಿ ಇಲಾಖೆ ‌ಉಪ ನಿರ್ದೇಶಕ

*
ಹೆಚ್ಚು ವಾಣಿಜ್ಯ ಬೆಳೆಗಳನ್ನೇ ಬೆಳೆದರೆ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ವ್ಯತ್ಯಯವಾಗಬಹುದು. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಬೇಕು.
–ರಮೇಶ ನಾಯ್ಕ, ಕಾರವಾರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.