ADVERTISEMENT

ಸರಸರ ಮರವೇರಿದರು ತರುಣರು

ಅಡಿಕೆ ಮರ ಹತ್ತುವ ಕೌಶಲಾಭಿವೃದ್ಧಿ ತರಬೇತಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 14:23 IST
Last Updated 14 ಜೂನ್ 2019, 14:23 IST
ಶಿರಸಿ ತಾಲ್ಲೂಕಿನ ಹಾರುಗಾರಿನ ತೋಟದಲ್ಲಿ ಅಡಿಕೆ ಮರ ಹತ್ತುವ ತರಬೇತಿ ಶುಕ್ರವಾರ ನಡೆಯಿತು
ಶಿರಸಿ ತಾಲ್ಲೂಕಿನ ಹಾರುಗಾರಿನ ತೋಟದಲ್ಲಿ ಅಡಿಕೆ ಮರ ಹತ್ತುವ ತರಬೇತಿ ಶುಕ್ರವಾರ ನಡೆಯಿತು   

ಶಿರಸಿ: ಪಿಯುಸಿ, ಬಿ.ಎ, ಬಿ.ಕಾಂ ಮುಗಿಸಿದ ಯುವಕರು ತಲೆಗೆ ಹೆಲ್ಮೆಟ್, ಸೊಂಟಕ್ಕೆ ಬೆಲ್ಟ್ ಕಟ್ಟಿ, ಕೈಯಲ್ಲಿ ಹಗ್ಗ ಹಿಡಿದು ಸರಸರನೆ ಮರವೇರುತ್ತಿದ್ದರು. ಮಾಸಲು ಅಂಗಿ, ತಲೆಗೊಂದು ಹಳೆಯ ಟುವಾಲು ಸುತ್ತಿಕೊಂಡು, ಕವಳ ಹಾಕಿ ಮರವೇರುತ್ತಿದ್ದ ಕೊನೆಗೌಡರಿಗಿಂತ ಇವರು ಭಿನ್ನವಾಗಿ ಕಾಣುತ್ತಿದ್ದರು.

ಅಡಿಕೆ ಗೊನೆಗೆ ಮದ್ದು ಸಿಂಪಡಿಸುವ, ಕೊನೆಕೊಯ್ಲಿಗೆ ಎದುರಾಗಿರುವ ಪರಿಣಿತರ ಕೊರತೆಯನ್ನು ಮನಗಂಡ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕದಂಬ ಮಾರ್ಕೆಟಿಂಗ್ ಜಂಟಿಯಾಗಿ ವಿವಿಧ ಸಂಘ–ಸಂಸ್ಥೆಗಳೊಡಗೂಡಿ ಆಯೋಜಿಸಿರುವ ಅಡಿಕೆ ಮರ ಹತ್ತುವ ಕೌಶಲಾಭಿವೃದ್ಧಿ ತರಬೇತಿ ಹಮ್ಮಿಕೊಂಡಿದೆ. ತರಬೇತಿಯ ನಾಲ್ಕನೇ ದಿನ ಶುಕ್ರವಾರ ತಾಲ್ಲೂಕಿನ ಹಾರೂಗಾರಿನಲ್ಲಿ ಅಡಿಕೆ ಮರ ಹತ್ತುವ ತರಬೇತಿ ನಡೆಯಿತು.

ಮರವೇರುವವರ ಸುರಕ್ಷತೆ ದೃಷ್ಟಿಯಿಂದ ಶಿಬಿರಾರ್ಥಿಗಳಿಗೆ ಅಗತ್ಯ ಸಲಕರಣೆಗಳನ್ನು ನೀಡಲಾಗಿದೆ. ಪರಿಣಿತಿ ಹೊಂದಿರುವ ತರಬೇತುದಾರರು, ವಿಜ್ಞಾನಿಗಳು ಸೇರಿ ವೈಜ್ಞಾನಿಕವಾಗಿ ತರಬೇತಿ ನೀಡುತ್ತಿದ್ದಾರೆ. ಮರ ಹತ್ತಲು ಕಲಿಯುತ್ತಿರುವ ಸುಮಾರು 25 ಯುವಕರಿಗೆ ಸುರಕ್ಷತಾ ಬೆಲ್ಟ್, ನೈಲಾನ್ ಹಗ್ಗ, ಹೆಲ್ಮೆಟ್‌ ಕೊಟ್ಟು, ಇವುಗಳನ್ನು ಧರಿಸಿಯೇ ಅಡಿಕೆ ಮರ ಹತ್ತುವ ಅಭ್ಯಾಸ ರೂಢಿಸಲಾಗುತ್ತಿದೆ. ಅವರಿಗೆ ವಿಮೆ ಕೂಡ ಮಾಡಿಸಲಾಗಿದೆ.

ADVERTISEMENT

‘ಮರ ಹತ್ತುವುದರ ಜತೆಗೆ ಪ್ರತಿದಿನ ಯೋಗ, ಆರೋಗ್ಯ ಕಾಳಜಿ, ನೈತಿಕ ಶಿಕ್ಷಣ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಬಿಡುವಿನ ಅವಧಿಯಲ್ಲಿ ಹೈನುಗಾರಿಕೆ, ಕೃಷಿ ಮಾಡುವ ಮೂಲಕ ಆದಾಯ ಗಳಿಸುವ ಮಾರ್ಗವನ್ನು ಕಲಿಸಿಕೊಡಲಾಗಿದೆ’ ಎನ್ನುತ್ತಾರೆ ಕೆವಿಕೆ ಮುಖ್ಯಸ್ಥ ಮಂಜು ಎಂ.ಜೆ.

‘ಅಡಿಕೆ ತೋಟದ ಕೆಲಸಕ್ಕೆ ಕೂಲಿಕಾರರ ಸಮಸ್ಯೆ ತೀವ್ರವಾಗಿದೆ. ಯಾಂತ್ರೀಕರಣ ಬಳಸುವುದು ಸಹ ಕಷ್ಟವಾಗಿದೆ. ಹೀಗಾಗಿ ಕೂಲಿಕಾರರ ಅವಲಂಬನೆ ಅನಿವಾರ್ಯವಾಗಿದ್ದು, ಶಿಬಿರಾರ್ಥಿಗಳಿಗೆ ತುತ್ತ–ಸುಣ್ಣ ಮಿಶ್ರಣ ಮಾಡುವುದೂ ಸೇರಿದಂತೆ ಎಲ್ಲ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಒಂದು ತಂಡ ರಚನೆ ಮಾಡಿ ಕೆಲಸಕ್ಕೆ ಅಗತ್ಯವಾದ ಕಡೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು’ ಎಂದರು. ಡಾ‌. ಸಂತೋಷ, ಡಾ. ರೂಪಾ ಪಾಟಿಲ್, ರಂಗನಾಥ, ಡಾ.ಶಶಿಧರ, ಡಾ.ನಾಗರಾಜಪ್ಪ ಮೊದಲಾದವರು ತರಬೇತಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.