
ಕುಮಟಾ: ‘ವ್ಯಕ್ತಿಯ ಜೀವನವನ್ನು ಬದಲಾಯಿಸಿ ಹೊಸದೊಂದು ಲೋಕ ಕೊಂಡೊಯ್ಯುವ ಸಾಮರ್ಥ್ಯವನ್ನು ಕಲೆ ಹೊಂದಿದೆ. ಜೀವನದಲ್ಲಿ ಶಿಕ್ಷಣದೊಂದಿಗೆ ಕಲೆ ಮೈಗೂಡಿಸಿಕೊಂಡರೆ ಜೀವನಕ್ಕೆ ಹೊಸ ಅರ್ಥ ದೊರೆಯುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹೇಳಿದರು.
ಪಟ್ಟಣದ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ವಿಧಾತ್ರಿ ಅಕಾಡೆಮಿ ಹಾಗೂ ಕೊಂಕಣ ಎಜುಕೇಶನ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ‘ಕಲಾಂಜಲಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಜಂಜಾಟದ ಬದುಕಿಗೆ ಖುಷಿ ಕೊಡುವ ಉತ್ತಮ ಕಲಾವಿದ ಒಂದು ರೀತಿಯಲ್ಲಿ ಮಾನಸಿಕ ವೈದ್ಯ’ ಎಂದರು.
ರಂಗಕರ್ಮಿ ಕಾಸರಗೋಡು ಚಿನ್ನ ಮಾತನಾಡಿ, ‘ಶಾಲಾ-ಕಾಲೇಜು ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ ಎಷ್ಟೋ ಜನರು ಕಲೆಯಲ್ಲಿ ಉನ್ನತ ಸಾಧನೆ ಮಾಡಿದ ನಿದರ್ಶನಗಳಿವೆ. ಬದುಕಿನ ಪ್ರತಿ ತಿರುವಿನಲ್ಲೂ ಯಶಸ್ಸಿಗೆ ಹೊಸ ಮಾರ್ಗ ಹೊಳೆಯುತ್ತವೆ’ ಎಂದರು.
ಈ ವೇಳೆ ವಿ.ಎಸ್. ಭಟ್ಟ, ದಾಮೋದರ ನಾಯ್ಕ ಅವರನ್ನು ಗೌರವಿಸಲಾಯಿತು. ಯಕ್ಷಗಾನ ಹಿರಿಯ ಭಾಗವತ ಸುಬ್ರಾಯ ಭಟ್ಟ ಕಪ್ಪೆಕೆರೆ ಅವರಿಗೆ ‘ವಿಧಾತ್ರಿ ಸಮ್ಮಾನ್’ ನೀಡಿ ಗೌರವಿಸಲಾಯಿತು. ಕೊಂಕಣ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ರಮೇಶ ಪ್ರಭು ಅಧ್ಯಕ್ಷತೆ ವಹಿಸಿದ್ದರು. ವಿಧಾತ್ರಿ ಆಕಾಡೆಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಚಾರ್ಯ ಕಿರಣ ಭಟ್ಟ, ಉಪನ್ಯಾಸಕ ಚಿದಾನಂದ ಭಂಡಾರಿ, ಮುಖ್ಯ ಶಿಕ್ಷಕ ಗಣೇಶ ಜೋಶಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.