ADVERTISEMENT

ಮುಖಂಡರ ಬೆಂಬಲಕ್ಕಾಗಿ ಪೈ‍ಪೋಟಿ

ಗರಿಗೆದರಿದ ಹಳ್ಳಿ ಗದ್ದುಗೆಯ ರಾಜಕಾರಣ: ಗ್ರಾಮೀಣ ಭಾಗದಲ್ಲಿ ಸಂಚಲನ

ಶಾಂತೇಶ ಬೆನಕನಕೊಪ್ಪ
Published 2 ಡಿಸೆಂಬರ್ 2020, 11:19 IST
Last Updated 2 ಡಿಸೆಂಬರ್ 2020, 11:19 IST

ಮುಂಡಗೋಡ: ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆಯ ದಿನ ಘೋಷಿಸುತ್ತಿದ್ದಂತೆ, ಆಕಾಂಕ್ಷಿಗಳಲ್ಲಿ ಸಂಚಲನ ಮೂಡಿದೆ. ‘ದಿಲ್ಲಿ ಚುನಾವಣೆಗಿಂತಲೂ ಹಳ್ಳಿ ಚುನಾವಣೆ’ ಹೆಚ್ಚು ತುರುಸಿನಿಂದ ಕೂಡಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಡಿ.27ರಂದು ನಡೆಯುವ ಎರಡನೇ ಹಂತದಲ್ಲಿ, ತಾಲ್ಲೂಕಿನ 16 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 57,336 ಜನರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಇದರಲ್ಲಿ 29,667 ಪುರುಷ ಹಾಗೂ 27,669 ಮಹಿಳಾ ಮತದಾರರಿದ್ದಾರೆ.

ಪಕ್ಷಗಳ ಚಿಹ್ನೆ ಇಲ್ಲದಿದ್ದರೂ ರಾಜಕೀಯ ಪಕ್ಷಗಳ ಬೆಂಬಲದಿಂದಲೇ ಬಹುತೇಕ ಅಭ್ಯರ್ಥಿಗಳು ಆಯ್ಕೆಯಾಗುವುದು ಈ ಚುನಾವಣೆಯ ವಿಶೇಷ. ಪ್ರಮುಖ ಪಕ್ಷಗಳಿಗೆ ಇದು ತಳಮಟ್ಟದಲ್ಲಿ ಕಾರ್ಯಕರ್ತರ ಪಡೆ ಕಟ್ಟಲು ಸಹಾಯ ಮಾಡುತ್ತದೆ. ಈ ಕಾರಣದಿಂದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಣದಷ್ಟು ರಾಜಕೀಯ ತುರುಸು, ಜಿದ್ದಾಜಿದ್ದಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಾಣುತ್ತದೆ.

ADVERTISEMENT

ಅಗ್ನಿಪರೀಕ್ಷೆ: ‘ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಈ ಸಲದ ಗ್ರಾಮ ಪಂಚಾಯ್ತಿ ಚುನಾವಣೆ ಸವಾಲಾಗಿದೆ. ತಾಲ್ಲೂಕಿನ ಬಿ.ಜೆ.ಪಿ.ಯಲ್ಲಿ ವಲಸಿಗ ಹಾಗೂ ಮೂಲ ಕಾರ್ಯಕರ್ತರು ಎಂಬ ಅಸಮಾಧಾನದ ಕಿಡಿ ಮತ್ತೆ ಪ್ರಜ್ವಲಿಸತೊಡಗಿದೆ. ಕಳೆದ ಉಪ ಚುನಾವಣೆಯ ನಂತರ ಎಲ್ಲವೂ ಸರಿಯಾಗಿದೆ ಎಂದುಕೊಂಡಿದ್ದ ಮುಖಂಡರಿಗೆ, ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಸಣ್ಣನೆಯ ಭಿನ್ನಮತ ಬಹಿರಂಗ ಆಗುತ್ತಿರುವುದು ನಿದ್ದೆಗೆಡಿಸಿದೆ’ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸಹಿತ ಅನೇಕ ಮುಖಂಡರು, ಕಾರ್ಯಕರ್ತರು ವರ್ಷದ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವು ತಳಮಟ್ಟದಲ್ಲಿ ಸಂಘಟನೆಗೆ ಹೆಚ್ಚು ಶ್ರಮ ವಹಿಸಬೇಕಾಗಿದೆ. ತಾಲ್ಲೂಕಿನ ಹಳ್ಳಿ ಗದ್ದುಗೆಯಲ್ಲಿ ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದ್ದೇ ‘ಕೈ’ ಮೇಲಾಗಿತ್ತು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಿಂದ, ಈ ಸಲದ ಪಂಚಾಯ್ತಿ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಅಗ್ನಿ ಪರೀಕ್ಷೆ ಆಗಿದೆ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.