ADVERTISEMENT

ಜರ್ಮನ್ ಬೇಕರಿ ಬಾಂಬ್‌ ಸ್ಫೋಟ ಪ್ರಕರಣ: ಭಟ್ಕಳದಲ್ಲಿ ಎಟಿಎಸ್‌ನಿಂದ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 13:55 IST
Last Updated 8 ಜುಲೈ 2021, 13:55 IST
ರಿಯಾಜ್ ಭಟ್ಕಳ
ರಿಯಾಜ್ ಭಟ್ಕಳ   

ಭಟ್ಕಳ (ಉತ್ತರ ಕನ್ನಡ): 2010ರ ಡಿ.4ರಂದು ಪುಣೆಯ ಜರ್ಮನ್ ಬೇಕರಿಯಲ್ಲಿ ಬಾಂಬ್ ಸ್ಫೋಟ ಪ್ರಕರಣ ತನಿಖೆಗೆ ಸಂಬಂಧಿಸಿ ಪುಣೆಯ ಭಯೋತ್ಪಾದನೆ ನಿಗ್ರಹ ದಳದ (ಎ.ಟಿ.ಎಸ್) ಅಧಿಕಾರಿಗಳು ಪಟ್ಟಣದಲ್ಲಿ ತನಿಖೆ ಕೈಗೊಂಡಿದ್ದಾರೆ. ಬುಧವಾರ ಮತ್ತು ಗುರುವಾರ ಮಾಹಿತಿ ಸಂಗ್ರಹಿಸಿ ತೆರಳಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಿಯಾಜ್ ಭಟ್ಕಳ, ಮೂಲತಃ ಭಟ್ಕಳದವನು. ಹೀಗಾಗಿ ಆರೋಪಿಯ ಸಂಬಂಧಿಕರ ಜಾಡು ಹಿಡಿದು ಅಧಿಕಾರಿಗಳು ಪಟ್ಟಣದಲ್ಲಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ತಿಂಗಳು ಭಟ್ಕಳದಲ್ಲಿ ಬಂಧಿಸಲಾದ ಪಾಕಿಸ್ತಾನಿ ಮಹಿಳೆ ಸುಳ್ಳು ದಾಖಲೆಗಳನ್ನು ನೀಡಿ ಆಧಾರ್, ಪಡಿತರ ಮತ್ತು ಪಾನ್ ಕಾರ್ಡ್ ಮಾಡಿಸಿಕೊಂಡ ಮಾಹಿತಿ ತನಿಖೆಯಿಂದ ತಿಳಿದುಬಂದಿತ್ತು. ಇದೇ ಆಧಾರದಲ್ಲಿ ಎ.ಟಿ.ಎಸ್ ಅಧಿಕಾರಿಗಳ ತಂಡವು, ರಿಯಾಜ್ ಪಟ್ಟಣದಲ್ಲಿ ಪಡೆದುಕೊಂಡ ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ADVERTISEMENT

ಭಟ್ಕಳದ ವಿವಿಧ ಸರ್ಕಾರಿ ಅಧಿಕಾರಿಗಳನ್ನು ತನಿಖಾ ತಂಡವು ಭೇಟಿಯಾಗಿ, ಆತ ಪಡೆದುಕೊಂಡಿರಬಹುದಾದ ದಾಖಲೆಗಳ ಬಗ್ಗೆ ವಿಚಾರಿಸಿದ್ದಾರೆ. ಇದೇವೇಳೆ, ಆತನ ಕುಟುಂಬದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಜರ್ಮನ್ ಬೇಕರಿ ಬಾಂಬ್ ಸ್ಫೋಟದಲ್ಲಿ 17 ಮಂದಿ ಮೃತಪಟ್ಟು, 60 ಮಂದಿ ಗಾಯಗೊಂಡಿದ್ದರು. ಈ ಕೃತ್ಯದಲ್ಲಿ ಉಗ್ರವಾದಿ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಕೈವಾಡವು ತನಿಖೆಯಿಂದ ಗೊತ್ತಾಗಿತ್ತು. ಇದರ ಕಮಾಂಡರ್‌ಗಳಾಗಿರುವ ರಿಯಾಜ್ ಭಟ್ಕಳ ಮತ್ತು ಸಹೋದರ ಇಕ್ಬಾಲ್ ಭಟ್ಕಳ, ಸ್ಫೋಟದ ನಂತರ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.