ADVERTISEMENT

ವಿಜ್ಞಾನ ಶಿಕ್ಷಕ ಕೆ.ಎಲ್. ಭಟ್ಟರಿಗೆ ರಾಜ್ಯ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 12:26 IST
Last Updated 4 ಸೆಪ್ಟೆಂಬರ್ 2018, 12:26 IST
ಕೆ.ಎಲ್.ಭಟ್ಟ
ಕೆ.ಎಲ್.ಭಟ್ಟ   

ಶಿರಸಿ: ಸಂಶೋಧನಾತ್ಮಕ ವಿಜ್ಞಾನ ಮಾದರಿಗಳನ್ನು ತಯಾರಿಸಲು ಮಕ್ಕಳನ್ನು ಪ್ರೇರೇಪಿಸಿ, ಅಣಿಗೊಳಿಸುವ ಇಲ್ಲಿನ ಗಣೇಶನಗರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೆ.ಎಲ್.ಭಟ್ಟ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಸೆ.5ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಯಲ್ಲಾಪುರ ಕಳಚೆಯ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ನಂತರ ಅಲ್ಲಿಯೇ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ಹೊಂದಿದರು. ಅಲ್ಲಿಂದ ವರ್ಗಾವಣೆಗೊಂಡು, ಗಣೇಶನಗರ ಪ್ರೌಢಶಾಲೆಗೆ ಬಂದಿರುವ ಅವರು, ಮಕ್ಕಳಲ್ಲಿ ವಿಜ್ಞಾನ ಕುತೂಹಲ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರಮಿಕ ವರ್ಗದವರೇ ಅಧಿಕವಾಗಿರುವ ಗಣೇಶನಗರದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದೇ ದೊಡ್ಡ ಸವಾಲು. ನಗರಕ್ಕೆ ಸನಿಹವಿದ್ದರೂ, ಹಿಂದುಳಿದಿರುವ ಈ ಪ್ರದೇಶದ ಮಕ್ಕಳಿಗೆ ತರಬೇತಿ ನೀಡಿ, ಅವರು ವಿಜ್ಞಾನ ಮಾದರಿಗಳನ್ನು ತಯಾರಿಸಲು ಹುರಿದುಂಬಿಸುತ್ತಾರೆ ಕೆ.ಎಲ್.ಭಟ್ಟರು.

ADVERTISEMENT

ನವೀನ ಮಾದರಿಯ ವಿವಿಧೋದ್ದೇಶ ಅಸ್ತ್ರ ಒಲೆ, ಬಡವರ ಭಾಗ್ಯಜ್ಯೋತಿ, ಬಹುಪಯೋಗಿ ಸೌರ ಜಲತಾಪಕ, ಮಿತ ಇಂಧನ ದೀಪ ಮೊದಲಾದ ವಿಜ್ಞಾನ ಮಾದರಿಗಳು ರಾಜ್ಯ ಮಟ್ಟದ ಬಹುಮಾನ ಗಳಿಸಿವೆ. ಶಾಲೆಗೆ ಸೇರಿದ್ದ ಮೂವರು ಚಿಂದಿ ಆಯುವ ಮಕ್ಕಳನ್ನು ಬಳಸಿಕೊಂಡು ಸಿದ್ಧಪಡಿಸಿದ ಮಾದರಿಗೆ ರಾಷ್ಟ್ರ ಮಟ್ಟದ ಬಹುಮಾನ ದೊರೆತಿದೆ. ಮೂರು ವಿನೂತನ ಮಾದರಿ ಸಿದ್ಧಪಡಿಸಿದ ಕಾರಣಕ್ಕೆ ‘ಸಿ.ಎನ್.ಆರ್‌ ರಾವ್ ಬೆಸ್ಟ್ ಟೀಚರ್’ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ರಾಜೀವಗಾಂಧಿ ವಿಜ್ಞಾನ ಶಿಕ್ಷಕ ಪ್ರಶಸ್ತಿ, ಬಸವಶ್ರೀ ಕಾಯಕ ಪ್ರಶಸ್ತಿ ಕೂಡ ಅವರಿಗೆ ಲಭಿಸಿದೆ.

‘ಕೆ.ಎಲ್.ಭಟ್ಟರು ಶಾಲೆಗೆ ಬರುವಾಗ ಸಮಯ ಪಾಲಿಸುತ್ತಾರೆ. ಆದರೆ, ತಿರುಗಿ ಮನೆಗೆ ಹೋಗುವಾಗ ಅವರಿಗೆ ಸಮಯ ನಿಗದಿಯಿಲ್ಲ. ಶಾಲೆ ಮುಗಿದ ಮೇಲೆಯೂ ಶ್ರದ್ಧೆಯಿಂದ ಕೆಲಸದಲ್ಲಿ ತೊಡಗಿಕೊಳ್ಳುವ ಶಿಕ್ಷಕ ಅವರು’ ಎನ್ನುತ್ತಾರೆ ಮುಖ್ಯ ಶಿಕ್ಷಕ ಎಂ.ಎಚ್.ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.