ADVERTISEMENT

ಉತ್ತರ ಕನ್ನಡ: ಬಡವರಿಗೆ ಭಾರವಾದ ‘ಆಯುಷ್ಮಾನ್ ಭಾರತ’

ಗಣಪತಿ ಹೆಗಡೆ
Published 1 ನವೆಂಬರ್ 2025, 4:11 IST
Last Updated 1 ನವೆಂಬರ್ 2025, 4:11 IST
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ   

ಕಾರವಾರ: ‘ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ’ (ಎಬಿಎಕೆ) ಯೋಜನೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಬಡಕುಟುಂಬಗಳಿಗೆ ನೆರವಾಗುತ್ತಿಲ್ಲ. ನೆರೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲು ಹಿಂದೇಟು ಹಾಕುವ ಸ್ಥಿತಿ ಇದೆ'.

ಇದು ಜಿಲ್ಲೆಯ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಕುಮಟಾ ನಿವಾಸಿ ಸಂಜಯ ನಾಯ್ಕ್ ಮಾತು. ‘ಮೂರು ತಿಂಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆ ಚಿಕಿತ್ಸೆಗಾಗಿ ತಂದೆಯವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹೋದಾಗ, ಎಬಿಎಕೆ ಶಿಫಾರಸ್ಸಿನ ರೋಗಿಯೆಂದು ಖಾಸಗಿ ಆಸ್ಪತ್ರೆಯವರು ದಾಖಲಿಸಿಕೊಳ್ಳಲು ಹಿಂಜರಿದರು. ವೈದ್ಯಾಧಿಕಾರಿಗಳನ್ನು ಕಾಡಿ, ಬೇಡಿ ಚಿಕಿತ್ಸೆ ಪಡೆಯಬೇಕಾಯಿತು’ ಎಂದು ಅವರು ನೋವಿನಿಂದ ಹೇಳಿದರು.

ಇದು ಅವರೊಬ್ಬರದ್ದೇ ಸಮಸ್ಯೆ ಅಲ್ಲ, ಇಂತಹ ಹತ್ತಾರು ಘಟನೆಗಳು ನಿತ್ಯ ನಡೆಯುತ್ತವೆ. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಕಾರಣ ಚಿಕಿತ್ಸೆಗಾಗಿ ಅಕ್ಕಪಕ್ಕದ ಜಿಲ್ಲೆಗಳನ್ನು ಅವಲಂಬಿಸಬೇಕಿದೆ ಎಂಬ ಅಸಹಾಯಕತೆ ಉತ್ತರ ಕನ್ನಡ ಜಿಲ್ಲೆಯವರದ್ದು.

ADVERTISEMENT

‘ಸರ್ಕಾರ ಬಡ ಕುಟುಂಬದವರಿಗೆ ಉಚಿತ ಆರೋಗ್ಯ ಸೌಲಭ್ಯಕ್ಕೆ ‘ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ’ ಯೋಜನೆ ಪರಿಚಯಿಸಿದೆ. ಆದರೆ, ಅದರ ಸೌಲಭ್ಯ ಪಡೆಯಲು ಉತ್ತರ ಕನ್ನಡ ಜಿಲ್ಲೆಯ ಜನರು 210 ಕಿ.ಮೀ ದೂರದ ಮಂಗಳೂರು, ಇಲ್ಲವೇ 120 ಕಿ.ಮೀ ದೂರದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕು.

‘ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜಿಲ್ಲೆಯ ಯಾವ ಆಸ್ಪತ್ರೆಗಳಲ್ಲೂ ತಜ್ಞ ವೈದ್ಯರಿಲ್ಲ. ಇಲ್ಲಿನ ಸರ್ಕಾರಿ ಆಸ್ಪತ್ರೆಗಳಿಂದ ಎಬಿಎಕೆ ಶಿಫಾರಸು ಪತ್ರ ಪಡೆದು ಹೋದರೆ, ಹೊರಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲು ವಿಳಂಬ ಮಾಡಲಾಗುತ್ತಿದೆ. ಅಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆಯ ಕಾರಣ ನೀಡಿ ಖಾಸಗಿ ಆಸ್ಪತ್ರೆಗೆ ಸಾಗಹಾಕಲಾಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ವಿಜಯ ನಾಯ್ಕ ದೂರಿದರು.

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಂಕೋಲಾದ ಚಂದ್ರಹಾಸ ಆಗೇರ ಎಂಬುವವರನ್ನು ಚಿಕಿತ್ಸೆಗೆ ದಾಲಿಸಿಕೊಳ್ಳದೆ ಮಂಗಳೂರಿನ ಖಾಸಗಿ ಆಸ್ಪತ್ರೆಯವರು ಸಾಗಹಾಕಿದ್ದರು. ಅವರ ಜೀವದ ಆಸೆ ಕೈಚೆಲ್ಲಿ ಕುಟುಂಬಸ್ಥರು ಮರಳಿ ಕರೆತರುವ ವೇಳೆ ಮಾರ್ಗಮಧ್ಯೆಯೇ ಅವರು ಮೃತಪಟ್ಟರು.

‘ಮಾವನ ಚಿಕಿತ್ಸೆಗೆ ಕ್ರಿಮ್ಸ್‌ನಿಂದ ಎಬಿಎಕೆ ಶಿಫಾರಸ್ಸು ಪತ್ರ ಪಡೆದು ಹೋದರೂ ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಿಲ್ಲ. ಮೂರ್ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ವಿಚಾರಿಸಿದರೂ ಮುಂಗಡ ಹಣ ಪಾವತಿಗೆ ಸೂಚಿಸಿದರೇ ಹೊರತು ಚಿಕಿತ್ಸೆ ನೀಡಲಿಲ್ಲ. ನಮ್ಮ ಕೈಯಲ್ಲಿ ಹಣವಿಲ್ಲದೆ ಅವರ ಜೀವ ಕಳೆದುಹೋಯಿತು’ ಎಂದು ಚಂದ್ರಹಾಸ ಅವರ ಸೋದರ ಸೊಸೆ ಶ್ವೇತಾ ನೋವು ತೋಡಿಕೊಂಡರು.

ತಜ್ಞ ವೈದ್ಯರಿಲ್ಲದೇ ತೊಂದರೆ

‘ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್) ಸ್ಥಾಪನೆಗೊಂಡು ದಶಕವಾದರೂ ಹೃದ್ರೋಗ ಆಂಕಾಲಜಿ ನರರೋಗ ರೇಡಿಯಾಲಜಿ ಸೇರಿ ಹಲವು ವಿಭಾಗಗಳಿಗೆ ತಜ್ಞ ವೈದ್ಯರ ನೇಮಕ ಆಗಿಲ್ಲ. 17 ಬಾರಿ ಸಂದರ್ಶನ ಕರೆದರೂ ಒಬ್ಬ ವೈದ್ಯರೂ ಸಂದರ್ಶನ ನೀಡಲು ಬಂದಿಲ್ಲ’ ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ ತಿಳಿಸಿದರು. ‘ಜಿಲ್ಲೆಯಿಂದ ಪ್ರತಿ ತಿಂಗಳು ಸರಾಸರಿ 150 ರಿಂದ 200 ಪ್ರಕರಣಗಳು ಎಬಿಎಕೆ ಶಿಫಾರಸು ಮೂಲಕ ಹೊರಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ರವಾನೆಯಾಗುತ್ತಿವೆ. ಅವುಗಳಲ್ಲಿ ಹೃದ್ರೋಗ ಕ್ಯಾನ್ಸರ್ ನರರೋಗಕ್ಕೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಿವೆ. ಇಡೀ ಜಿಲ್ಲೆಯಲ್ಲಿ ಈ ಸಮಸ್ಯೆಗೆ ಚಿಕಿತ್ಸೆ ಸಿಗದೆ ಹೊರಜಿಲ್ಲೆಗೆ ಅಲೆದಾಟ ಅನಿವಾರ್ಯ’ ಎಂದು ಸುವರ್ಣ ಆರೋಗ್ಯ ಟ್ರಸ್ಟ್‌ನ ಜಿಲ್ಲಾಮಟ್ಟದ ಅಧಿಕಾರಿಯೊಬ್ಬರು ಹೇಳಿದರು.

ಎಬಿಎಕೆ ಯೋಜನೆಯಡಿ ಜಿಲ್ಲೆಯಿಂದ ಶಿಫಾರಸು ಆದ ಪ್ರಕರಣಗಳಿಗೆ ಸರಿಯಾಗಿ ಸ್ಪಂದಿಸದ ಬಗ್ಗೆ ಅಧಿಕೃತವಾಗಿ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಕ್ರಮವಾಗಲಿದೆ
- ಡಾ.ನೀರಜ್ ಬಿ.ವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.