ADVERTISEMENT

ಉತ್ತರ ಕನ್ನಡ | ವೃದ್ಧರಿಗಿಲ್ಲ ‘ವಯೋ ವಂದನಾ’ ಫಲ

60 ಸಾವಿರ ಜನರ ಪೈಕಿ 5 ಸಾವಿರ ಮಂದಿಯಿಂದ ನೋಂದಣಿ

ಗಣಪತಿ ಹೆಗಡೆ
Published 10 ಸೆಪ್ಟೆಂಬರ್ 2025, 7:02 IST
Last Updated 10 ಸೆಪ್ಟೆಂಬರ್ 2025, 7:02 IST
   

ಕಾರವಾರ: ಬಡವರು, ಸಿರಿವಂತರ ಬೇಧವಿಲ್ಲದೆ 70 ವರ್ಷ ಮೇಲ್ಪಟ್ಟ ವೃದ್ಧರಿಗೆ ₹5 ಲಕ್ಷ ಮೊತ್ತದವರೆಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುವ ‘ಆಯುಷ್ಮಾನ್ ವಯೋ ವಂದನಾ’ ಯೋಜನೆಯಡಿ ಜಿಲ್ಲೆಯಲ್ಲಿ 5,000ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಆಸ್ಪತ್ರೆಗಳಲ್ಲಿ ವಿಮೆ ಸೌಲಭ್ಯ ಸಿಗದೆ ಪರದಾಡುವಂತಾಗಿದೆ.

ಆಯುಷ್ಮಾನ್ ಭಾರತ ಯೋಜನೆ ವಿಸ್ತರಿಸಿದ್ದ ಕೇಂದ್ರ ಸರ್ಕಾರ ಆಯುಷ್ಮಾನ್ ವಯೋ ವಂದನಾ ಯೋಜನೆ ಪರಿಚಯಿಸಿದೆ. ಈ ಯೋಜನೆಯಡಿ ಚಿಕಿತ್ಸಾ ಸೌಲಭ್ಯ ಪಡೆಯುವ ಸಲುವಾಗಿ ಹೆಸರು ನೋಂದಣಿಗೆ ವೃದ್ಧರು ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳತ್ತ ಮುಖಮಾಡಿದ್ದಾರೆ.ಆದರೆ, ವಯೋ ವಂದನಾ ಯೋಜನೆಯಡಿ ಹೊಸದಾಗಿ ಹೆಸರು ನೋಂದಾಯಿಸಲು ಅವಕಾಶ ಇಲ್ಲ ಎಂಬ ಕಾರಣದಿಂದ ಬೇಸರದಿಂದ ಮರಳುತ್ತಿದ್ದಾರೆ.

ಆರೋಗ್ಯ ಇಲಾಖೆಯು ಕುಟುಂಬ ಸಮೀಕ್ಷೆಯ ದತ್ತಾಂಶ ಆಧರಿಸಿ ಜಿಲ್ಲೆಯಲ್ಲಿ 60,353 ಮಂದಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿದ್ದಾರೆ ಎಂದು ಅಂದಾಜಿಸಿದೆ.

ADVERTISEMENT

‘ಆಯುಷ್ಮಾನ್ ವಯೋ ವಂದನಾ ಯೋಜನೆಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ನಿರ್ವಹಣೆ ಮಾಡುತ್ತಿದ್ದು, ಅದರ ಪೋರ್ಟಲ್‌ ಮೂಲಕ ಫಲಾನುಭವಿಗಳೇ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಪೋರ್ಟಲ್ ಮೂಲಕ ಜಿಲ್ಲೆಯಲ್ಲಿ 5,131 ಜನರು ಹೆಸರು ನೋಂದಾಯಿಸಿಕೊಂಡಿದ್ದು, ರಾಜ್ಯದಲ್ಲಿ ಉತ್ತರ ಕನ್ನಡ 7ನೇ ಸ್ಥಾನದಲ್ಲಿದೆ’ ಎಂದು ಆಯುಷ್ಮಾನ್ ವಯೋ ವಂದನಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ.ಶಂಕರ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಯೋ ವಂದನಾ ಯೋಜನೆ ರಾಜ್ಯದಲ್ಲಿ ಇನ್ನೂ ಅನುಷ್ಠಾನಗೊಂಡಿಲ್ಲ. ಯೋಜನೆ ಕುರಿತ ಗೊಂದಲ ಬಗೆಹರಿಯದ ಕಾರಣ ಆಸ್ಪತ್ರೆಗಳಲ್ಲಿ ವಯೋ ವಂದನಾ ಕಾರ್ಡ್‌ದಾರರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡಲು ಆದೇಶ ಬಂದಿಲ್ಲ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏನಿದು ವಯೋ ವಂದನಾ?: ಆಯುಷ್ಮಾನ್ ಭಾರತ್ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ₹5 ಲಕ್ಷ ಮೊತ್ತದವರೆಗೆ ಉಚಿತವಾಗಿ ಆರೋಗ್ಯ ಸೌಲಭ್ಯ ಒದಗಿಸಲಾಗುತ್ತದೆ. ಈ ಯೋಜನೆಯನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರ ಯಾವುದೇ ಸ್ತರದವರಾದರೂ 70 ವರ್ಷ ಮೇಲ್ಪಟ್ಟ ವೃದ್ಧರಿಗೆ ₹5 ಲಕ್ಷ ಮೊತ್ತದವರೆಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸಲು ಜಾರಿಗೆ ತಂದ ಯೋಜನೆ ಇದಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.