ADVERTISEMENT

ಲೈಟ್ ಫಿಶಿಂಗ್‌ ನಿಷೇಧ:6ರಂದು ವಿಚಾರಣೆ, ಹೈಕೋರ್ಟ್‌ನತ್ತ ಕರಾವಳಿ ಮೀನುಗಾರರ ಚಿತ್ತ

ಗೊಂದಲ ಬಗೆಹರಿಯುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 13:45 IST
Last Updated 2 ಫೆಬ್ರುವರಿ 2019, 13:45 IST
   

ಕಾರವಾರ:ಬೆಳಕು ಅಳವಡಿಸಿ ಮೀನುಗಾರಿಕೆ (ಲೈಟ್ ಫಿಶಿಂಗ್) ಸಂಬಂಧ ಹೈಕೋರ್ಟ್ ಫೆ.6ರಂದುವಿಚಾರಣೆ ನಡೆಯಲಿದೆ. ಹೀಗಾಗಿ ಕರಾವಳಿಯ ಮೂರೂ ಜಿಲ್ಲೆಗಳ ಮೀನುಗಾರರ ಚಿತ್ತ ನ್ಯಾಯಾಲಯದತ್ತ ನೆಟ್ಟಿದೆ.

ಕೇಂದ್ರ ಸರ್ಕಾರವು ಹಲವು ನಿಬಂಧನೆಗಳನ್ನು ವಿಧಿಸಿ,2016ರ ಜುಲೈ 29ರಂದು ಲೈಟ್‌ ಫಿಶಿಂಗ್‌ಗೆ ಅನುಮತಿ ನೀಡಿತ್ತು. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 2017ರ ನವೆಂಬರ್‌ನಲ್ಲಿ ಲೈಟ್ ಫಿಶಿಂಗ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದವು. ಈ ಹಿನ್ನೆಲೆಯಲ್ಲಿಕೇಂದ್ರ ಸರ್ಕಾರವು ತನ್ನ ಮೊದಲಿನ ಆದೇಶವನ್ನು ರದ್ದು ಪಡಿಸಿತ್ತು.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಉಡುಪಿ ಜಿಲ್ಲಾ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ್ ಖಾರ್ವಿ, ‘ಲೈಟ್‌ ಫಿಶಿಂಗ್ದೋಣಿ ಮಾಲೀಕರು ಸರ್ಕಾರದ ಷರತ್ತುಗಳನ್ನು ಪಾಲಿಸಲಾಗುವುದು. ನಿಷೇಧವನ್ನು ತೆರವು ಮಾಡಿಕೊಡಬೇಕು ಎಂದು ನ್ಯಾಯಾಲಯದ ಮೊರೆ ಹೋದರು. ಆದರೆ, ಅವರು ರದ್ದಾದ ಆದೇಶದ ಆಧಾರದಲ್ಲಿ ಅರ್ಜಿ ಸಲ್ಲಿಸಿದ್ದರು. ಒಂದುವೇಳೆ ನಮಗೆ ನ್ಯಾಯ ಸಿಗದಿದ್ದರೆ ಮೇಲ್ಮನವಿ ಸಲ್ಲಿಸಲು ಸಿದ್ಧರಾಗಿದ್ದೇವೆ’ ಎಂದು ಹೇಳಿದರು.

ADVERTISEMENT

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕೃತವಾಗಿ ಸುಮಾರು 35 ಪರ್ಸೀನ್‌ ದೋಣಿಗಳಿವೆ. ಆದರೆ, ಅನಧಿಕೃತವಾಗಿ ಮೀನುಗಾರಿಕೆ ನಡೆಸುತ್ತಿರುವ ಹಲವು ದೋಣಿಗಳಿವೆ.ಷರತ್ತುಗಳ ಉಲ್ಲಂಘನೆ ಆಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಸಣ್ಣ ಮೀನುಗಾರರುಉಳಿಯಬೇಕು. ಈ ಸಂಬಂಧ ಸಾಂಪ್ರದಾಯಿಕ ದೋಣಿಮೀನುಗಾರರನ್ನುಒಗ್ಗೂಡಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಈ ವರ್ಷ ಜ.21ರಂದು ಆದೇಶ ನೀಡಿದ ಹೈಕೋರ್ಟ್, ಷರತ್ತುಗಳನ್ನು ವಿಧಿಸಿ ಬೆಳಕು ಮೀನುಗಾರಿಕೆಗೆ ಅನುಮತಿ ನೀಡಿತ್ತು. ಕಡಲತೀರದಿಂದ 12 ನಾಟಿಕಲ್ ಮೈಲು ದೂರದಲ್ಲಿ, ನೀರಿನ ಮೇಲಿನಿಂದ ಮಾತ್ರ ಬೆಳಕು ಹರಿಸಿ ಮೀನು ಬೇಟೆಯಾಡಬಹುದು ಎಂಬುದು ಪ್ರಮುಖವಾದ ಷರತ್ತಾಗಿದೆ. 45 ಎಂ.ಎಂ ಅಳತೆಯ ಬಲೆಗಳನ್ನು ಬಳಸುವುದು, ಅಮಾವಾಸ್ಯೆಗೆ ಮೊದಲು ಐದು ದಿನ ಹಾಗೂ ನಂತರ ಐದು ದಿನ ಮಾತ್ರ ಮೀನುಗಾರಿಕೆ ನಡೆಸಲುಒಪ್ಪಿಗೆ ಸೂಚಿಸಿತ್ತು.

ಲೈಟ್ ಫಿಶಿಂಗ್‌ಗೆ ಜಿಲ್ಲೆಯ ವಿವಿಧ ಬಂದರುಗಳಲ್ಲಿಪದೇಪದೇ ವಿರೋಧ ವ್ಯಕ್ತವಾಗುತ್ತಿದೆ. ಸಾಂಪ್ರದಾಯಿಕ ಮತ್ತು ಟ್ರೋಲ್‌ ದೋಣಿಗಳ ಮೀನುಗಾರರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನ್ಯಾಯಾಲಯದ ತೀರ್ಪಿನ ಮೇಲೆ ಸಹಜವಾಗಿ ಕುತೂಹಲ ಮೂಡಿದೆ.

‘ಪರಿಷ್ಕೃತ ಆದೇಶಕ್ಕೆಅರ್ಜಿ’:‘ಲೈಟ್ ಫಿಶಿಂಗ್ ನಿಷೇಧಿಸಿರುವ ಬಗ್ಗೆಕೇಂದ್ರ ಸರ್ಕಾರದ ಆದೇಶವಿದೆ. ಆದರೆ, ಇದಕ್ಕೆ ಪರ್ಸೀನ್ ದೋಣಿ ಮಾಲೀಕರು ಜ.21ರಂದು ಹೈಕೋರ್ಟ್‌ನಿಂದ ತಡೆ ತಂದಿದ್ದಾರೆ.ರಾಜ್ಯ ಮತ್ತು ಕೇಂದ್ರಸರ್ಕಾರಗಳ ಪರವಾಗಿ ನಾವು ಅರ್ಜಿ ಸಲ್ಲಿಸಿದ್ದು, ಪರಿಷ್ಕೃತ ಆದೇಶ ನೀಡುವಂತೆ ಕೋರಿದ್ದೇವೆ’ ಎಂದು ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಕೃಷ್ಣ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.