ADVERTISEMENT

ಮಾರುಕಟ್ಟೆಗೆ ಲಾಕ್‌ಡೌನ್ ಅಡಚಣೆ: ಬೆಳೆದ ಬಾಳೆ ಕಡಿದ ರೈತ

ಬೆಲೆ ಸಿಗದೇ ಬೇಸರಗೊಂಡ ಬೆಳೆಗಾರ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 14:21 IST
Last Updated 12 ಜೂನ್ 2021, 14:21 IST
ಯಲ್ಲಾಪುರ ತಾಲ್ಲೂಕಿನ ಅಡಿಕೆ ತೋಟದ ಮಧ್ಯದಲ್ಲಿ ಬೆಳೆದ ಬಾಳೆ ಗಿಡಗಳನ್ನು ಕಡಿದು ಹಾಕಿರುವುದು.
ಯಲ್ಲಾಪುರ ತಾಲ್ಲೂಕಿನ ಅಡಿಕೆ ತೋಟದ ಮಧ್ಯದಲ್ಲಿ ಬೆಳೆದ ಬಾಳೆ ಗಿಡಗಳನ್ನು ಕಡಿದು ಹಾಕಿರುವುದು.   

ಯಲ್ಲಾಪುರ: ಲಾಕ್‌ಡೌನ್ ಕಾರಣದಿಂದ ಬಾಳೆಕಾಯಿಗೂ ಮಾರುಕಟ್ಟೆ ಕುಸಿದಿದೆ. ಇದರಿಂದ ಚಿಂತಿತರಾದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ರೈತರು ಬಾಳೆ ಗೊನೆ, ಬಾಳೆ ಗಿಡಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ.

ತಾಲ್ಲೂಕು ಅಡಿಕೆಗೆ ಎಷ್ಟು ಪ್ರಖ್ಯಾತವೋ ಬಾಳೆ ಕೃಷಿಗೂ ಅಷ್ಟೇ ಪ್ರಸಿದ್ಧವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ‍್ರವಾಸಿಗರು ಪಟ್ಟಣದಲ್ಲಿ ಬಾಳೆಹಣ್ಣುಗಳನ್ನು ಖರೀದಿಸಿ ಮುಂದೆ ಸಾಗುತ್ತಾರೆ. ಆದರೆ, ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಯಾದ ಬಳಿಕ ಬಾಳೆ ಬೆಳೆಗಾರರ ಪರಿಸ್ಥಿತಿ ಹದಗೆಟ್ಟು ಹೋಗಿದೆ.

ಬಾಳೆಹಣ್ಣುಗಳನ್ನು ಬಹಳ ದಿನ ಶೇಖರಿಸಿ ಇಡಲಾಗದು. ಹಣ್ಣಾದ ನಂತರ ಅವುಗಳನ್ನು ಮಾರಾಟ ಮಾಡದಿದ್ದರೆ ಕೊಳೆತು ನಷ್ಟವಾಗುತ್ತದೆ. ಈ ಸಮಯದಲ್ಲಿ ತಾಲ್ಲೂಕು ಹೊರತುಪಡಿಸಿ ಬೇರೆ ಪ್ರದೇಶದಲ್ಲಿ ಮಾರುಕಟ್ಟೆ ಲಭ್ಯವಾಗುತ್ತಿಲ್ಲ. ಇದರಿಂದ ಬಹಳಷ್ಟು ರೈತರು ಅಡಿಕೆ ಗಿಡಗಳ ಮಧ್ಯೆ ಬೆಳೆಸಿದ್ದ ಬಾಳೆಗಿಡಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ.

ADVERTISEMENT

ಈ ಮೊದಲು ಜಿಲ್ಲೆಯ ಕರಾವಳಿಯ ತಾಲ್ಲೂಕುಗಳಿಗೆ, ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಅಲ್ಲದೇ ಗೋವಾಕ್ಕೆ ವಾರಕ್ಕೆ 20ರಿಂದ 30 ಟ್ರಿಪ್‌ಗಳಷ್ಟು ಬಾಳೆಕಾಯಿ ಸಾಗಾಟವಾಗುತ್ತಿತ್ತು. ಅಲ್ಲಿ ದರವೂ ಉತ್ತಮವಾಗಿದ್ದರಿಂದ ಇಲ್ಲಿನ ಬೆಳೆಗಾರರಿಗೂ ಲಾಭವಾಗುತ್ತಿತ್ತು. ಆದರೆ, ಬೇಡಿಕೆ ಕುಸಿದ ಕಾರಣ ಬಾಳೆಕಾಯಿಯನ್ನು ಕೆ.ಜಿ.ಗೆ ₹3, ₹4ರಂತೆಯೂ ಕೇಳುವವರಿಲ್ಲವಾಗಿದೆ.

₹ 5ಕ್ಕೆ ಖರೀದಿ, ₹ 40ಕ್ಕೆ ಮಾರಾಟ!:

ಲಾಕ್‌ಡೌನ್ ಸಡಿಲಿಕೆಯ ವೇಳೆಯಲ್ಲಿ ಸ್ವಲ್ಪಮಟ್ಟಿನ ವ್ಯಾಪಾರವಾದರೂ ಅದರ ಲಾಭ ರೈತನಿಗೆ ಸಿಗದೇ ಮಧ್ಯವರ್ತಿಗಳ ಪಾಲಾಗುತ್ತಿದೆ. ಪ್ರತಿ ಕೆ.ಜಿ.ಗೆ ₹ 5ಯಂತೆ ಖರೀದಿಸಿದ ಬಾಳೆಕಾಯಿ ಹಣ್ಣಾಗಿ ಮಾರಾಟವಾಗುವಷ್ಟರಲ್ಲಿ ₹ 30ರಿಂದ ₹ 40ಕ್ಕೆ ಏರಿಕೆಯಾಗಿರುತ್ತಿದೆ ಎಂದು ಬಾಳೆ ಬೆಳೆಗಾರ ಗಣಪತಿ ಅಡಿಕೆಸರ್ ಬೇಸರ ವ್ಯಕ್ತಪಡಿಸುತ್ತಾರೆ.

ಸಹಸ್ರಳ್ಳಿ ಗ್ರಾಮದ ಅವರು ಕೂಡ ತಮ್ಮ ತೋಟದಲ್ಲಿ ಬೆಳೆದ ಬಾಳೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಇದೇ ರೀತಿ ಸಾಕಷ್ಟು ರೈತರು ಗಿಡಗಳನ್ನು ಕಡಿದು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.