ADVERTISEMENT

Cast census | ಸಮೀಕ್ಷೆ ವೇಳೆ ‘ಬಾಂದಿ’ ನಮೂದಿಸಲು ಜಾಗೃತಿ: ಕೃಷ್ಣಾನಂದ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:09 IST
Last Updated 18 ಸೆಪ್ಟೆಂಬರ್ 2025, 4:09 IST
ಕೃಷ್ಣಾನಂದ ಬಾಂದೇಕರ
ಕೃಷ್ಣಾನಂದ ಬಾಂದೇಕರ   

ಕಾರವಾರ: ‘ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಸಮೀಕ್ಷೆ ವೇಳೆ ಬಾಂದಿ ಸಮುದಾಯದ ಜನರು ಬಾಂಧಿ ಅಥವಾ ಬಂಡಿ ಎಂದು ನಮೂದಿಸದೆ ಬಾಂದಿ ಎಂದೇ ನಮೂದಿಸಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಉತ್ತರ ಕನ್ನಡ ಜಿಲ್ಲಾ ಬಾಂದಿ ಸಮಾಜೋನ್ನತಿ ಸಂಘದ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ ಹೇಳಿದರು.

‘ರಾಜ್ಯದಲ್ಲಿ ಉತ್ತರ ಕನ್ನಡ, ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಮಾತ್ರವೇ ಹೆಚ್ಚಿನ ಸಂಖ್ಯೆಯಲ್ಲಿರುವ ಬಾಂದಿ ಸಮುದಾಯಕ್ಕೆ ಹಿಂದುಳಿದ ಜಾತಿ ಪ್ರಮಾಣಪತ್ರ ಸಿಗುತ್ತಿಲ್ಲ. ಅಧಿಕಾರಿಗಳ ಕಣ್ತಪ್ಪಿನಿಂದಾಗಿ ಈ ಹಿಂದೆ ಬಂಡಿ ಎಂದು ನಮೂದಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿದ್ದರು. ಬಳಿಕ ಸುಳ್ಳು ಪ್ರಮಾಣಪತ್ರ ಪಡೆದ ಪ್ರಕರಣ ದಾಖಲಿಸಿದ್ದರು. ಇಂತಹ ಶೋಷಣೆಯನ್ನು ಸಮುದಾಯ ನಿರಂತರವಾಗಿ ಅನುಭವಿಸಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಬಾಂದಿ ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದ್ದು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಬೇಕಿದೆ. ಆದರೆ, ಹಿಂದುಳಿದ ವರ್ಗಗಳ ಆಯೋಗದ ಜಾತಿ ಪಟ್ಟಿಯಲ್ಲಿ ಬಾಂದಿ ಸಮುದಾಯ ಬಿಟ್ಟುಹೋಗಿದೆ. ಈ ಹಿಂದೆ ಜಯಪ್ರಕಾಶ ಹೆಗ್ಡೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಯೋಗಕ್ಕೆ ಈ ಬಗ್ಗೆ ದೂರು ನೀಡಲಾಗಿತ್ತು. ಈವರೆಗೂ ಆಯೋಗವು ತಪ್ಪು ಸರಿಪಡಿಸಿಲ್ಲ’ ಎಂದರು.

ADVERTISEMENT

ರಾಮಕೃಷ್ಣ ಲೋಲೇಕರ, ನಾಗೇಶ ಯಲ್ಲಾಪುರ, ಪ್ರಮೋದ ಬಾಂದೇಕರ, ಚಂದ್ರಕಾಂತ ಬಾಂದೇಕರ, ಬಾಬು ಬಾಂದೇಕರ, ದತ್ತಾನಂದ ಬಾಂದೇಕರ, ಮನೋಜ ಬಾಂದೇಕರ, ರಾಜಾ ಬಾಂದೇಕರ, ಸಂಧ್ಯಾ ಬಾಡಕರ, ಸಂಜಯ ಬಾಡಕರ, ಸದಾನಂದ ಬಾಂದೇಕರ ಇದ್ದರು.

ದಾಖಲೆ ಇಲ್ಲದ ಜಾತಿಗೆ ಸೇರ್ಪಡೆ
‘ಕರ್ನಾಟಕ ಸರ್ಕಾರ 1976ರಲ್ಲಿ ಹೊರಡಿಸಿದ ರಾಜ್ಯಪತ್ರದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದ ಬಾಂದಿ ಸಮುದಾಯ ಸೇರಿಸಲಾಗಿತ್ತು. ಆದರೆ 1977ರಲ್ಲಿ ಹೊರಡಿಸಿದ ರಾಜ್ಯಪತ್ರದಲ್ಲಿ ಪರಿಶಿಷ್ಟ ಮತ್ತು ಹಿಂದುಳಿದ ಜಾತಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. 2002ರಲ್ಲಿ ಸಮಾಜ ಕಲ್ಯಾಣ ಇಲಾಖೆ ಬಾಂಧಿ ಎನ್ನುವ ಯಾವುದೇ ಪೂರ್ವಪರ ದಾಖಲೆಯೇ ಇಲ್ಲದೆ ಜಾತಿಯೊಂದನ್ನು ಹುಟ್ಟಿಹಾಕಿದೆ. ಇದನ್ನೇ ಬಾಂದಿ ಸಮುದಾಯದ ಮೇಲೆ ಹೇರುವ ಪ್ರಯತ್ನ ನಡೆದಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುತ್ತಿದೆ’ ಎಂದು ಕೃಷ್ಣಾನಂದ ಬಾಂದೇಕರ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.