ADVERTISEMENT

ಬ್ಯಾಂಕ್ ಕೆಲಸ 5 ದಿನಕ್ಕೆ ಸೀಮಿತಗೊಳಿಸಿ: ಬ್ಯಾಂಕಿಂಗ್ ನೌಕರರಿಂದ ಪ್ರತಿಭಟನೆ

ಬ್ಯಾಂಕಿಂಗ್ ನೌಕರರಿಂದ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:18 IST
Last Updated 1 ಜನವರಿ 2026, 6:18 IST
ಕಾರವಾರದಲ್ಲಿ ನಡೆದ ಬ್ಯಾಂಕಿಂಗ್ ನೌಕರರ ಪ್ರತಿಭಟನೆಯಲ್ಲಿ ಬ್ಯಾಂಕ್ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಘಟಕ ವಾಸುದೇವ ಶೇಟ್ ಮಾತನಾಡಿದರು
ಕಾರವಾರದಲ್ಲಿ ನಡೆದ ಬ್ಯಾಂಕಿಂಗ್ ನೌಕರರ ಪ್ರತಿಭಟನೆಯಲ್ಲಿ ಬ್ಯಾಂಕ್ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಘಟಕ ವಾಸುದೇವ ಶೇಟ್ ಮಾತನಾಡಿದರು   

ಕಾರವಾರ: ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿಗೆ ಒತ್ತಾಯಿಸಿ ನಗರದಲ್ಲಿ ಬುಧವಾರ ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ಮತ ಪ್ರದರ್ಶನ ನಡೆಸಿದರು.

ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಹಾಗೂ ಅಧಿಕಾರಿಗಳ ಸಂಘಟನೆಗಳ ಒಕ್ಕೂಟ (ಯುಎಫ್‍ಬಿಯು) ನೀಡಿರುವ ಕರೆಯ ಮೇರೆಗೆ ಉತ್ತರ ಕನ್ನಡ ಜಿಲ್ಲಾ ಬ್ಯಾಂಕ್ ಉದ್ಯೋಗಿಗಳ ಸಂಘದ ನೇತೃತ್ವದಲ್ಲಿ ಮಂಗಳವಾರ ಇಲ್ಲಿನ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಜಮಾಯಿಸಿದ ಬ್ಯಾಂಕ್ ಉದ್ಯೋಗಿಗಳು ನಿರಂತರ ಒಂದು ಗಂಟೆಗಳ ಕಾಲ ಘೋಷಣೆಗಳನ್ನು ಕೂಗಿ ತೀವ್ರ ಹೋರಾಟದ ಎಚ್ಚರಿಕೆ ನೀಡಿದರು.

‘ಬ್ಯಾಂಕ್ ವಿಲೀನೀಕರಣ, ಅಗತ್ಯದಷ್ಟು ಸಿಬ್ಬಂದಿ ಕೊರತೆ, ದಿನ ನಿತ್ಯ ಹೊಸದಾಗಿ ಪರಿಚಯಿಸಲ್ಪಡುವ ತಂತ್ರಜ್ಞಾನದ ಬಳಕೆಯಲ್ಲಿನ ಗೊಂದಲಗಳ ಒತ್ತಡದಿಂದಾಗಿ ನಿಗದಿತ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಿ ಬಸವಳಿದಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮತ ಪ್ರದರ್ಶನಕಾರರನ್ನುದ್ದೇಶಿಸಿ ಮಾತನಾಡಿದ ಬ್ಯಾಂಕ್ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಘಟಕ ವಾಸುದೇವ ಶೇಟ್, ‘ಕೆಲಸದ ಒತ್ತಡದಿಂದ ಬಳಲುತ್ತಿರುವ ಬ್ಯಾಂಕ್ ಉದ್ಯೋಗಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಅವಶ್ಯಕತೆಯಾಗಿ ದೇಶದಾದ್ಯಂತ ಐದು ದಿನಗಳ ಬ್ಯಾಂಕಿಂಗ್ ಪದ್ಧತಿಯ ಜಾರಿಗೆ 2023 ರಲ್ಲಿಯೇ ಭಾರತೀಯ ಬ್ಯಾಂಕ್ ವ್ಯವಸ್ಥಾಪಕ ಮಂಡಳಿಗಳ ಒಕ್ಕೂಟ ಒಪ್ಪಿಕೊಂಡಿದೆ. ಆದರೆ, ಕೇಂದ್ರ ಹಣಕಾಸು ಇಲಾಖೆ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

ಜಿಲ್ಲಾ ಬ್ಯಾಂಕ್ ಉದ್ಯೋಗಿಗಳ ಸಂಘಟನೆಯ ಪದಾಧಿಕಾರಿಗಳಾದ ಸನ್ನಿ ನಾಯಕ, ಸಂದೀಪ ಹುಳಗೆಕರ್, ಸಮೀರ್ ಶೇಖ್, ಗಜಾನನ ನಾಯ್ಕ, ದಿಲೀಪ ಗುನಗಿ, ಅಧಿಕಾರಿಗಳ ಸಂಘದ ಎನ್.ಆರ್.ಪ್ರಭು, ಮಹೇಶ್, ಬೀನಾ ಜಿ., ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.