ADVERTISEMENT

ಲಕ್ಷ್ಮೀನರಸಿಂಹ ದೇವಸ್ಥಾನ ಪುನರ್ ನಿರ್ಮಾಣ

ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 15:02 IST
Last Updated 31 ಜನವರಿ 2022, 15:02 IST
ನಿರ್ಮಾಣ ಹಂತದಲ್ಲಿರುವ ಶಿರಸಿ ತಾಲ್ಲೂಕಿನ ಬರೂರು ಗ್ರಾಮದ ಶಿಲಾಮಯ ಲಕ್ಷ್ಮೀನರಸಿಂಹ ದೇವಸ್ಥಾನ
ನಿರ್ಮಾಣ ಹಂತದಲ್ಲಿರುವ ಶಿರಸಿ ತಾಲ್ಲೂಕಿನ ಬರೂರು ಗ್ರಾಮದ ಶಿಲಾಮಯ ಲಕ್ಷ್ಮೀನರಸಿಂಹ ದೇವಸ್ಥಾನ   

ಶಿರಸಿ: ಶಿಲಾಮಯವಾಗಿರುವ ತಾಲ್ಲೂಕಿನ ಬರೂರು ಗ್ರಾಮದ ಲಕ್ಷ್ಮೀನರಸಿಂಹ ದೇವಸ್ಥಾನದ ಪುನರ್ ನಿರ್ಮಾಣ ಒಂಬತ್ತು ತಿಂಗಳ ಅವಧಿಯೊಳಗೆ ಪೂರ್ಣಗೊಂಡಿದ್ದು, ಹೊಸ ದೇವಾಲಯದ ಸಮರ್ಪಣೆ ಮತ್ತು ದೇವರ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಫೆ.4 ರಿಂದ 7ರ ವರೆಗೆ ನಡೆಯಲಿದೆ ಎಂದು ದೇವಸ್ಥಾನ ಪುನರ್ ನಿರ್ಮಾಣ ಕಟ್ಟಡ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ದೇವಸ್ಥಾನಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ ಎಂಬುದು ಶಿಲ್ಪಕಲೆಗಳಿಂದ ಸಾಬೀತಾಗಿದೆ. ದ್ರಾವಿಡಶೈಲಿಯ ದೇವಸ್ಥಾನ ಇದಾಗಿದ್ದು ಹೊಯ್ಸಳ ಶೈಲಿಯ ಮೂರ್ತಿ ಇದೆ. ಆಗಮ ಶಾಸ್ತ್ರದ ಪ್ರಕಾರ ದೇವಸ್ಥಾನದ ನಿರ್ಮಾಣ ಕಾರ್ಯ ನಡೆದಿದೆ’ ಎಂದು ತಿಳಿಸಿದರು

‘ಕಳೆದ ಜುಲೈನಲ್ಲಿ ಶಿಲಾನ್ಯಾಸ ಕಾರ್ಯಕ್ರಮವೂ ನೆರವೇರಿತ್ತು. ಅಂದಾಜು ₹1.5 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ₹50 ಲಕ್ಷ ಹಣವನ್ನು ಭಕ್ತರು ಸಂಗ್ರಹಿಸಿದ್ದಾರೆ. ₹50 ಲಕ್ಷ ಸರ್ಕಾರ ನೀಡಿದೆ. ಭಕ್ತರು ದೇಣಿಗೆ ನೀಡಲು ಅವಕಾಶವಿದೆ’ ಎಂದರು.

ADVERTISEMENT

‘ಬರೂರು, ಪಡಗೆರೆ, ಕುಳವೆ, ಕಾಗೇರಿ, ತೆರಕನಳ್ಳಿ, ಗಡಿಹಳ್ಳಿ ಗ್ರಾಮಗಳ ಸುಮಾರು 850 ಮನೆಗಳ ಜನರು ಶ್ರಮಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ಜೋಳಿಗೆ ಭಿಕ್ಷೆ ಮೂಲಕ ದೇವರ ಮೂರ್ತಿಗೆ ದೇಣಿಗೆ ಸಂಗ್ರಹಿಸಲಾಗಿದೆ. ಮೂರ್ತಿ ಕೆತ್ತನೆ ವೆಚ್ಚಕ್ಕೆ ಗ್ರಾಮದ ಪ್ರತಿ ಮನೆಯ ಕೊಡುಗೆ ಇದೆ’ ಎಂದರು.

‘ಫೆ.1 ಮತ್ತು ಫೆ. 2ರಂದು ನಿಧಿ ಕುಂಬ ಸಮರ್ಪಣೆ ನಡೆಯಲಿದೆ. ಫೆ.4 ರಿಂದ ಫೆ.7ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 5 ರಂದು ಕಲಶ ಪ್ರತಿಷ್ಠೆ ನಡೆಯುವದು. ಸ್ವರ್ಣವಲ್ಲಿ ಸ್ವಾಮೀಜಿ ನಿಧಿಕುಂಬ ಪ್ರತಿಷ್ಠಾಪನೆ ನೆರವೇರಲಿದೆ. ಫೆ.6ರಂದು ಅಷ್ಟಬಂಧ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ಭಾಸ್ಕರ ಹೆಗಡೆ ಕಾಗೇರಿ, ಎಂ.ವಿ.ಜೋಶಿ, ಪರಮೇಶ್ವರ ಹೆಗಡೆ ಕಾಗೇರಿ, ಮಂಜುನಾಥ ಭಟ್ ಬೆಳಖಂಡ, ಬಿ.ಜಿ.ಹೆಗಡೆ, ವಿನಯ ಭಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.