ADVERTISEMENT

ಕಾರವಾರ: ಪ್ರಜಾಪ್ರಭುತ್ವಕ್ಕೆ ಬುನಾದಿಯಿಟ್ಟ ಬಸವಣ್ಣ

ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಮೇ 2022, 13:53 IST
Last Updated 3 ಮೇ 2022, 13:53 IST
ಕಾರವಾರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪುಷ್ಪ ನಮನ ಸಲ್ಲಿಸಿದರು. ಜಿ.ಪಂ ಸಿ.ಇ.ಒ ಪ್ರಿಯಾಂಗಾ.ಎಂ, ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಪತ್ರಕರ್ತ ನಾಗರಾಜ ಹರಪನಹಳ್ಳಿ ಇದ್ದಾರೆ.
ಕಾರವಾರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪುಷ್ಪ ನಮನ ಸಲ್ಲಿಸಿದರು. ಜಿ.ಪಂ ಸಿ.ಇ.ಒ ಪ್ರಿಯಾಂಗಾ.ಎಂ, ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಪತ್ರಕರ್ತ ನಾಗರಾಜ ಹರಪನಹಳ್ಳಿ ಇದ್ದಾರೆ.   

ಕಾರವಾರ: ‘ದೇಶದಲ್ಲಿ ಯಾವುದೇ ವಿಚಾರಗಳು, ಚಿಂತನೆಗಳು ಪ್ರಜಾಸತ್ತಾತ್ಮಕ ರೂಪದಲ್ಲೇ ಜಾರಿಯಾಗುತ್ತವೆ. ಇಂಥ ವ್ಯವಸ್ಥೆಯ ಮೂಲಕ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವರು ಬಸವಣ್ಣ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬಣ್ಣಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಮಾನವನ ಇತಿಹಾಸ ಆರಂಭವಾದ ದಿನದಿಂದಲೂ ಮೇಲು, ಕೀಳು ಬಂದಿದೆ. ಮಾನವನ ಇತಿಹಾಸವು ಸೈದ್ಧಾಂತಿಕ ಹಾಗೂ ತತ್ವಗಳ ಸಂಘರ್ಷದಲ್ಲೇ ಇದೆ. ಅಧಿಕಾರದಲ್ಲಿ ಇರುವವರಿಂದ ವ್ಯವಸ್ಥೆಯ ಬದಲಾವಣೆ ಮಾಡುವ ಪ್ರಯತ್ನವಾಗಿದೆ. ಬಸವಣ್ಣ, ಬುದ್ಧ ಮುಂತಾದವರು ಮೊದಲಿಗರು. ಅವರೆಲ್ಲ ಸಾರ್ವಕಾಲಿಕ ಸತ್ಯದ ದಾರಿಯಲ್ಲಿ ಸಾಗಿದರು’ ಎಂದು ಹೇಳಿದರು.

ADVERTISEMENT

ಉಪನ್ಯಾಸ ನೀಡಿದ ಪತ್ರಕರ್ತ ನಾಗರಾಜ ಹರಪನಹಳ್ಳಿ, ‘ಬಸವಣ್ಣ ಕಾಯಕ ಮತ್ತು ದಾಸೋಹ ತತ್ವಗಳನ್ನು ಸಮಾಜಕ್ಕೆ ಕೊಟ್ಟರು. ಅವರಿಂದಾಗಿ 12ನೇ ಶತಮಾನದಲ್ಲಿ ವಚನ ಕ್ರಾಂತಿಯೊಂದಿಗೇ ಅಕ್ಷರ ಕ್ರಾಂತಿಯಾಯಿತು. ಸಾಮಾನ್ಯರೂ ಬರೆಯಲು ಕಲಿತರು’ ಎಂದರು.

‘ಯುರೋಪ್‌ನಲ್ಲಿ ಸಂಸತ್ತಿನ ಪರಿಕಲ್ಪನೆ ಬರುವ ಮೊದಲೇ ಬಸವಣ್ಣ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿ ಮಾಡಿದ್ದರು. ಅವರ ನಿಜವಾದ ತತ್ವಗಳನ್ನು ಜಾರಿ ಮಾಡಲು ಪ್ರಯತ್ನಿಸಿದವರು ವಿರಳ. ರಾಜ್ಯದ ಕೆಲವೇ ಮಠಗಳು ಆ ಹಾದಿಯಲ್ಲಿ ಸಾಗಿವೆ’ ಎಂದು ಅಭಿಪ್ರಾಯ ಪಟ್ಟರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ವೇದಿಕೆಯಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ನರೇಂದ್ರ ನಾಯಕ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.