ADVERTISEMENT

ಕಾರವಾರ | ಕಡಲಾಮೆಗೆ ಅಡ್ಡಿಯಾದ ಗಾಳಿ ಗಿಡ

ದೇವಬಾಗ:ಅರಣ್ಯ ಇಲಾಖೆಯ ಅವೈಜ್ಞಾನಿಕ ಕ್ರಮಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 4:47 IST
Last Updated 25 ಜನವರಿ 2024, 4:47 IST
ಕಾರವಾರದ ದೇವಬಾಗ ಕಡಲತೀರದಲ್ಲಿ ವಿಫುಲವಾಗಿ ಬೆಳೆದುಕೊಂಡಿರುವ ಕ್ಯಾಸುರಿನಾ (ಗಾಳಿ ಗಿಡ) ಗಿಡಗಳು. 
ಕಾರವಾರದ ದೇವಬಾಗ ಕಡಲತೀರದಲ್ಲಿ ವಿಫುಲವಾಗಿ ಬೆಳೆದುಕೊಂಡಿರುವ ಕ್ಯಾಸುರಿನಾ (ಗಾಳಿ ಗಿಡ) ಗಿಡಗಳು.    

ಕಾರವಾರ: ಅಳಿವಿನಂಚಿನಲ್ಲಿರುವ ಆಲೀವ್ ರಿಡ್ಲೆ ತಳಿಯ ಕಡಲಾಮೆಗಳ ಸಂತಾನೋತ್ಪತ್ತಿಯ ಕಾಲವಿದು. ತಾಲ್ಲೂಕಿನ ದೇವಬಾಗದ ಕಡಲತೀರ ಕೆಲ ವರ್ಷಗಳಿಂದಲೂ ಕಡಲಾಮೆಗಳು ಮೊಟ್ಟೆ ಇಡಲು ಸುರಕ್ಷಿತವಾಗಿದ್ದ ತಾಣ ಎನಿಸಿತ್ತು. ಆದರೆ, ಈಗ ಅಲ್ಲಿಗೆ ಕಡಲಾಮೆಗಳು ಬರಲು ಹಿಂದೇಟು ಹಾಕುತ್ತಿವೆ.

ಕಡಲಾಮೆಗಳು ಮೊಟ್ಟೆ ಇಟ್ಟು ಹೋಗಲು ಅನುಕೂಲವಿದ್ದ ಸ್ಥಳದಲ್ಲಿ ಅರಣ್ಯ ಇಲಾಖೆ ಸಾಲು ಸಾಲಾಗಿ ನೆಟ್ಟಿರುವ ಗಾಳಿ ಗಿಡಗಳು ಅಡ್ಡಿಯಾಗಿವೆ ಎಂಬುದು ಸ್ಥಳೀಯ ಕೆಲ ಮೀನುಗಾರರ ಆರೋಪ. ಗೋಪಶಿಟ್ಟಾ ಅರಣ್ಯ ವಲಯದಿಂದ ಕಳೆದ ವರ್ಷ ಕಡಲತೀರದಲ್ಲಿ ನೂರಾರು ಗಾಳಿಗಿಡಗಳನ್ನು ನೆಡಲಾಗಿದೆ. ಅವುಗಳಲ್ಲಿ ಬದುಕುಳಿದ ಕೆಲವು ಬೇರು ಚಾಚಿಕೊಂಡು ಎತ್ತರಕ್ಕೆ ಬೆಳೆಯಲಾರಂಭಿಸಿವೆ.

‘ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ದೇವಬಾಗ ಕಡಲತೀರದಲ್ಲೇ ನೂರಾರು ಕಡಲಾಮೆ ಮೊಟ್ಟೆಗಳು ಸಿಗುತ್ತಿದ್ದವು. ಹಿಂದಿನ ವರ್ಷವೂ ದೊಡ್ಡ ಸಂಖ್ಯೆಯಲ್ಲಿ ಮೊಟ್ಟೆ ಪತ್ತೆಯಾಗಿದ್ದವು. ಆದರೆ ಈ ಬಾರಿ ಮೊಟ್ಟೆಯನ್ನು ಇಡಲು ಅವಕಾಶವೇ ಆಗಿಲ್ಲ. ಅರಣ್ಯ ಇಲಾಖೆ ನೆಟ್ಟಿರುವ ಗಾಳಿಗಿಡಗಳು ಮೊಟ್ಟೆ ಇಡಲು ಅಡ್ಡಿಯಾಗಿವೆ. ಮೊಟ್ಟೆ ಇಡಬಹುದಾದ ತೀರದ ಸಮೀಪವೇ ಗಿಡಗಳನ್ನು ನೆಡಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದ್ದರೂ ಲೆಕ್ಕಿಸಿರಲಿಲ್ಲ. ಮೊಟ್ಟೆ ಇಡಲು ಸುರಕ್ಷಿತ ಜಾಗ ಹುಡುಕಾಡುವ ಕಡಲಾಮೆಗಳು ಈ ಬಾರಿ ದೇವಬಾಗ ಕಡಲತೀರಕ್ಕೆ ಹಾಯಲೂ ಇಲ್ಲ’ ಎಂದೂ ಬೇಸರಿಸಿದರು.

ADVERTISEMENT

‘ಆಲೀವ್ ರಿಡ್ಲೆ ಮೊಟ್ಟೆ ಇಡುವ ಜಾಗದಿಂದ ಅಂತರದಲ್ಲೇ ಗಿಡಗಳನ್ನು ನೆಡಲಾಗಿದೆ. ಅಲ್ಲದೆ ವಿಶೇಷ ತಳಿಯ ಗಾಳಿಗಿಡಗಳನ್ನು ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಜಾಗದಲ್ಲಿ ನೆಡಲಾಗಿದೆ. ಇವುಗಳಿಂದ ಕಡಲಾಮೆಗೆ ಯಾವುದೇ ಅಡ್ಡಿಯಾಗದು’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡರು.

ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗವು ದೇವಬಾಗದಲ್ಲಿ ಕಡಲಾಮೆ ಮೊಟ್ಟೆ ಸಂರಕ್ಷಣೆಗೆ ರಚಿಸಿರುವ ಮೊಟ್ಟೆ ಗೂಡಿನ ಅಕ್ಕಪಕ್ಕದಲ್ಲೇ ಗೋಪಶಿಟ್ಟಾ ಅರಣ್ಯ ವಲಯದಿಂದ ಕಳೆದ ವರ್ಷ ನೂರಾರು ಗಾಳಿಗಿಡಗಳನ್ನು ನೆಡಲಾಗಿದೆ.

ಕಾರವಾರದ ದೇವಬಾಗ ಕಡಲತೀರದಲ್ಲಿ ಆಲೀವ್ ರಿಡ್ಲೆ ಮೊಟ್ಟೆಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯ ಮರೈನ್ ವಿಭಾಗ ರಚಿಸಿರುವ ಮೊಟ್ಟೆ ಗೂಡು.
ದೇವಬಾಗದಲ್ಲಿ ಕಡಲು ಕೊರೆತದ ಸಮಸ್ಯೆಯಿಂದ ಈ ಬಾರಿ ಆಲೀವ್ ರಿಡ್ಲೆ ಮೊಟ್ಟೆ ಇಡುವುದು ಕಡಿಮೆಯಾಗಿರಬಹುದು. ಕಾರವಾರ ಅಂಕೋಲಾದ ಸುಮಾರು 13ಕ್ಕೂ ಹೆಚ್ಚು ಕಡೆಗಳಲ್ಲಿ ಅವು ಮೊಟ್ಟೆ ಇಟ್ಟಿವೆ.
ಕೆ.ಸಿ. ಪ್ರಶಾಂತಕುಮಾರ್ ಕಾರವಾರ ಡಿಸಿಎಫ್

ಗಾಳಿಗಿಡ ನೆಡುವುದೇ ಅವೈಜ್ಞಾನಿಕ ‘ಕ್ಯಾಸುರಿನಾ (ಗಾಳಿಗಿಡ) ದೇಸಿ ತಳಿಯೇ ಅಲ್ಲ. ವಿದೇಶದಿಂದ ಬಂದ ಈ ತಳಿಗಳನ್ನು ಪರಿಸರ ಸೌಂದರ್ಯದ ದೃಷ್ಟಿಯಿಂದ ಬೆಳೆಸಲಾಗುತ್ತಿದೆಯೇ ವಿನಃ ಅವುಗಳಿಂದ ಕಡಲಜೀವಿಗಳಿಗೆ ತೊಂದರೆಯೇ ಹೆಚ್ಚು. ಈ ತಳಿಯ ಸಸಿಗಳನ್ನು ನೆಟ್ಟು ಬೆಳೆಸುವ ಅರಣ್ಯ ಇಲಾಖೆಯ ಕ್ರಮವೇ ಅವೈಜ್ಞಾನಿಕ’ ಎನ್ನುತ್ತಾರೆ ಕಡಲಜೀವ ಶಾಸ್ತ್ರಜ್ಞ ಹೊನ್ನಾವರದ ಪ್ರಕಾಶ ಮೇಸ್ತ. ‘ಗಾಳಿಗಿಡಗಳ ಎಲೆಗಳಲ್ಲಿ ತೈಲದ ಅಂಶ ಹೆಚ್ಚಿರುತ್ತವೆ. ಅವು ಬೇಗನೆ ಕೊಳೆಯುವುದಿಲ್ಲ. ಸಮುದ್ರಕ್ಕೆ ಸೇರಿದರೆ ಜಲಚರಗಳಿಗೆ ತೊಂದರೆಯೇ ಹೆಚ್ಚು’ ಎನುತ್ತಾರೆ ಅವರು. ‘ಕಡಲತೀರದ ಅಂಚಿನ ಪ್ರದೇಶದಲ್ಲಿ ಗಾಳಿಗಿಡಗಳನ್ನು ನೆಟ್ಟರೆ ಅವುಗಳು ಬೆಳೆಯುತ್ತಿದ್ದಂತೆ ಬೇರುಗಳು ಸುತ್ತಮುತ್ತಲೂ ಚಾಚಿಕೊಳ್ಳಲಾರಂಭಿಸುತ್ತವೆ. ಅದರಿಂದ ಕಡಲಾಮೆ ಕಡಲತೀರಕ್ಕೆ ಬಂದು ಮೊಟ್ಟೆ ಇಡಲು ಅಡ್ಡಿಯಾಗುತ್ತವೆ. ಆಮೆಗಳು ಮೊಟ್ಟೆ ಇಡಲು ಮರಳು ಬಗೆದು ಹೊಂಡ ಮಾಡಿಕೊಳ್ಳಲು ಸಾಧ್ಯವಾಗದು. ದೇವಬಾಗದಲ್ಲಿ ಕಡಲು ಕೊರೆತ ತಡೆಯಲು ರಸ್ತೆ ನಿರ್ಮಿಸಲು ಈಗಾಗಲೆ ಬಂಡೆಕಲ್ಲಿನ ರಾಶಿ ಹಾಕಿ ಕಡಲಾಮೆ ಮೊಟ್ಟೆ ಇಡಲು ಜಾಗ ಸಿಗದಂತೆ ಮಾಡಲಾಗಿದೆ. ಇವುಗಳಿಂದ ಅಳಿವಿನಂಚಿನಲ್ಲಿರುವ ಜೀವಿಯೊಂದು ಸಂತಾನೋತ್ಪತ್ತಿ ಪ್ರಕ್ರಿಯೆಗೆ ಅಡ್ಡಿಪಡಿಸಿದಂತಾಗುತ್ತಿದೆ’ ಎಂದೂ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.