ADVERTISEMENT

ಬೇಡರ ವೇಷದ ಸಂಭ್ರಮ ಆರಂಭ

ಎರಡು ವರ್ಷಕ್ಕೊಮ್ಮೆ ನಡೆಯುವ ಸಾಂಪ್ರದಾಯಿಕ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 16:10 IST
Last Updated 25 ಮಾರ್ಚ್ 2021, 16:10 IST
ಶಿರಸಿಯ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಬೇಡರ ವೇಷ ವೀಕ್ಷೀಸಲು ಬುಧವಾರ ರಾತ್ರಿ ಸೇರಿದ್ದ ಜನಸ್ತೋಮ
ಶಿರಸಿಯ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಬೇಡರ ವೇಷ ವೀಕ್ಷೀಸಲು ಬುಧವಾರ ರಾತ್ರಿ ಸೇರಿದ್ದ ಜನಸ್ತೋಮ   

ಶಿರಸಿ: ನಗರದಲ್ಲಿ ಪ್ರತಿ ಎರಡು ವರ್ಷಕ್ಕೆ ಒಂದು ಬಾರಿ ನಡೆಯುವ ಬೇಡರ ವೇಷದ ಆಚರಣೆಗೆ ಬುಧವಾರ ರಾತ್ರಿ ಚಾಲನೆ ಸಿಕ್ಕಿದ್ದು, ಮೊದಲ ದಿನ ನೂರಾರು ಪ್ರೇಕ್ಷಕರು ಗತ್ತಿನ ನರ್ತನವನ್ನು ಕಣ್ತುಂಬಿಕೊಂಡರು.

ನವಿಲುಗರಿಯ ಪರದೆ ಬೆನ್ನಿಗೆ ಕಟ್ಟಿಕೊಂಡು, ರೌದ್ರಾವತಾರದ ವೇಷದೊಂದಿಗೆ ನರ್ತಿಸುತ್ತಿದ್ದ ಬೇಡವೇಷಧಾರಿ, ಆತನನ್ನು ನಿಯಂತ್ರಿಸುವ ಹಿಂಬಾಲಕರ ನರ್ತನ, ತಮಟೆ ಸದ್ದು ಪ್ರೇಕ್ಷಕರನ್ನೂ ಹೆಜ್ಜೆ ಹಾಕುವಂತೆ ಮಾಡಿತು. ಕಿಕ್ಕಿರಿದು ಸೇರಿದ್ದ ಜನರ ಕೇಕೆ, ಕುಣಿತ, ಸೀಟಿಯ ಸದ್ದು ಬೇಡ ವೇಷಧಾರಿಗಳ ಉತ್ಸಾಹ ಇಮ್ಮಡಿಗೊಳ್ಳುವಂತೆ ಮಾಡಿತು.

ಸುಮಾರು ಆರಕ್ಕೂ ಹೆಚ್ಚು ತಂಡಗಳು ಮೊದಲ ದಿನ ಬೇಡರ ವೇಷ ಪ್ರದರ್ಶನ ನೀಡಿದವು. ದೇವಿಕೆರೆ ವೃತ್ತ, ಹಳೆ ಬಸ್ ನಿಲ್ದಾಣ ವೃತ್ತ, ಮಾರಿಕಾಂಬಾ ದೇವಾಲಯದ ಎದುರು ಹೆಚ್ಚು ಜನ ದಟ್ಟಣೆ ಇತ್ತು. ಕೆಲವು ಬೇಡರ ವೇಷ ಸಮಿತಿಯವರು ಸಣ್ಣ ಪ್ರಮಾಣದಲ್ಲಿ ಸ್ತಬ್ಧಚಿತ್ರ ಮೆರವಣಿಗೆ ನಡೆಸಿದರು.

ADVERTISEMENT

ಕೊರೊನಾ ಹಿನ್ನೆಲೆಯಲ್ಲಿ ಹಲವು ನಿಬಂಧನೆಗಳನ್ನು ವಿಧಿಸಿದ್ದರ ನಡುವೆಯೂ ಜನರು ಉತ್ಸುಕರಾಗಿ ಕಾರ್ಯಕ್ರಮ ವೀಕ್ಷಣೆಗೆ ಜಮಾಯಿಸಿದ್ದರು. ಮಾಸ್ಕ್ ಧರಿಸಲು ಸ್ಥಳದಲ್ಲಿದ್ದ ಪೊಲೀಸರು ಸೂಚಿಸುತ್ತಿದ್ದರು. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

‘ಕೊರೊನಾ ಕಾರಣಕ್ಕೆ ವರ್ಷದಿಂದಲೂ ಮನರಂಜನೆ ಇಲ್ಲದೆ ಸೊರಗಿದ್ದವರಿಗೆ ಈ ಕಾರ್ಯಕ್ರಮ ಸಂತಸ ತಂದಿದೆ. ದೂರದ ಊರುಗಳಿಂದಲೂ ಪ್ರೇಕ್ಷಕರು ಆಗಮಿಸುತ್ತಿದ್ದು, ಕಲೆಗೆ ಪ್ರೋತ್ಸಾಹಿಸುತ್ತಿರುವುದು ಖುಷಿಯ ವಿಚಾರ’ ಎಂದು ಪೂರ್ಣಿಮಾ ಚಂದ್ರಪಟ್ಟಣ ಹೇಳಿದರು.

ಮಾ.27ರ ವರೆಗೂ ಪ್ರದರ್ಶನ ನಡೆಯಲಿದ್ದು 60ಕ್ಕಿಂತ ಹೆಚ್ಚು ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.