ADVERTISEMENT

ಶಿರಸಿ ವಿಶೇಷ ‘ಬೇಡರ ವೇಷ’

ನಾಲ್ಕು ದಿನಗಳ ಪ್ರದರ್ಶನ ಹೋಳಿ ಹಬ್ಬದೊಂದಿಗೆ ಮುಕ್ತಾಯ

ಸಂಧ್ಯಾ ಹೆಗಡೆ
Published 17 ಮಾರ್ಚ್ 2019, 10:45 IST
Last Updated 17 ಮಾರ್ಚ್ 2019, 10:45 IST
ಶಿರಸಿಯ ಬೇಡರ ವೇಷದ ಸೊಬಗು (ಸಂಗ್ರಹ ಚಿತ್ರ)
ಶಿರಸಿಯ ಬೇಡರ ವೇಷದ ಸೊಬಗು (ಸಂಗ್ರಹ ಚಿತ್ರ)   

ಶಿರಸಿ: ದೇಶದಲ್ಲೇ ಅತ್ಯಂತ ವಿಶಿಷ್ಟವಾದ ಜನಪದ ಕಲೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿದೆ. ಅದುವೇ ‘ಬೇಡರ ವೇಷ’. ಹೋಳಿ ಹಬ್ಬಕ್ಕೆ ನಾಲ್ಕು ದಿನ ಮೊದಲು ಇಲ್ಲಿನ ನಿವಾಸಿಗಳು ಕತ್ತಲಿಗಾಗಿ ಕಾಯುತ್ತಾರೆ. ಕತ್ತಲೆಯ ಪರದೆ ಭುವಿಯ ಮೇಲೆ ಬೀಳುತ್ತಿದ್ದಂತೆ, ಇಡೀ ನಗರ ರಂಗನ್ನು ಮೆತ್ತಿಕೊಳ್ಳುತ್ತದೆ.

ಅಚ್ಚಕೆಂಪು ಬಣ್ಣದ ಉದ್ದ ತೋಳಿನ ಅಂಗಿ, ಮೊಣಕಾಲು ಮುಟ್ಟುವ ದೊಗಲೆ ಚಡ್ಡಿ, ಕಾಲಿಗೆ ಗೆಜ್ಜೆ, ಬೆನ್ನಿಗೆ ಉದ್ದುದ್ದ ನವಿಲು ಗರಿಗಳ ಪದರು, ಕುತ್ತಿಗೆಗೆ ನೋಟಿನ ಮಾಲೆ, ಕಿಡಿಕಾರುವ ಕಣ್ಣು, ಮೂಗಿನ ಮೇಲೊಂದು ಹತ್ತಿಯುಂಡೆ, ಕೆಂಡಕಾರುವ ಮುಖದ ಮೇಲೆ ಬಿಳಿ–ಹಳದಿ ಬಣ್ಣದ ಗೆರೆಗಳ ನಡುವೆ ಕಡುಗಪ್ಪಿನ ದಪ್ಪ ಮೀಸೆಯ ಬೇಡ ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ಗುರಾಣಿ ಝಳಪಿಸುತ್ತ ಬಂದರೆ, ಸುತ್ತುವರಿದು ನಿಂತ ಪ್ರೇಕ್ಷಕರ ಎದೆಯಲ್ಲಿ ನಡುಕ. ಜನಪದ ಶೈಲಿನ ರೌದ್ರ ನರ್ತನವೇ ಬೇಡ‌ರ ವೇಷದ ವಿಶೇಷತೆ.

ಶಿರಸಿಯಲ್ಲಿ ಎರಡು ವರ್ಷಕ್ಕೊಮ್ಮೆ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆ ನಡೆಯುತ್ತದೆ. ಜಾತ್ರೆ ಇಲ್ಲದ ವರ್ಷ ಇಲ್ಲಿ ಬೇಡರ ವೇಷದ ಬೆರಗು. ಈ ಬಾರಿ ಮಾ.17ರಿಂದ ಆರಂಭವಾಗುವ ಬೇಡರ ವೇಷ ಪ್ರದರ್ಶನ ಹೋಳಿಯ ರಂಗು ಎರಚಿಕೊಳ್ಳುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ.

ADVERTISEMENT

ಹೂಂಕರಿಸುತ್ತ, ಝೇಂಕರಿಸುತ್ತ ಬರುವ ಬೇಡ ವೇಷಧಾರಿಗೆ ನಗರವಿಡೀ ಸಂಚರಿಸಿ ಗಲ್ಲಿ ಗಲ್ಲಿಯಲ್ಲಿ ನೃತ್ಯ ಪ್ರದರ್ಶನ ನೀಡಲು ಒಮ್ಮೆಲೇ ಸಾಧ್ಯವಾಗದು. ಹೀಗಾಗಿ, ಒಂದು ತಿಂಗಳ ಹಿಂದೇ ಇದರ ತಾಲೀಮು ಆರಂಭವಾಗುತ್ತದೆ. ಬೇಡ ವೇಷಧಾರಿ, ಆತನಿಗೆ ಹಗ್ಗ ಕಟ್ಟಿ ನಿಯಂತ್ರಿಸುವ ಇಬ್ಬರು, ಎದುರು ಸ್ತ್ರೀ ವೇಷಧಾರಿ, ಸಿಳ್ಳೆ ಹೊಡೆಯುವವ, ಬದಿಯಲ್ಲಿ ನಿಂತು ಹಲಗೆ ಬಡಿಯುವ ನಾಲ್ವರ ತಂಡಕ್ಕೆ ನಿತ್ಯ ರಾತ್ರಿ ಕುಣಿತದ ಅಭ್ಯಾಸ ಮಾಡುವುದೇ ಕೆಲಸ. ರಾತ್ರಿ 10 ಗಂಟೆ ಸುಮಾರಿಗೆ ಶುರುವಾಗುವ ಹಲಗೆ ಬಡಿತದ ಅಬ್ಬರ ನಡುರಾತ್ರಿಗೆ ಶಾಂತವಾಗುತ್ತದೆ.

ಬೇಡರ ವೇಷದ ದಿನ ಎಲ್ಲರೂ ವೇಷಧಾರಿಗಳಾಗಿ ಪ್ರದರ್ಶನಕ್ಕೆ ಅಣಿಯಾಗುತ್ತಾರೆ. ಮುಸ್ಸಂಜೆ ಬಣ್ಣ ಹಚ್ಚಲು ಆರಂಭಿಸಿದರೆ, ವೇಷ ಸಿದ್ಧವಾಗುವ ವೇಳೆಗೆ ರಾತ್ರಿ 9 ದಾಟುತ್ತದೆ. ಅಪ್ಪಟ ಜನಪದ ಶೈಲಿಯ ಈ ವೇಷಕ್ಕೆ ಬಣ್ಣ ಹಚ್ಚುವುದು ಸಹ ಸುಲಭದ ಕೆಲಸವಲ್ಲ. ನುರಿತ ಕಲಾವಿದರು ಮಾತ್ರ ಈ ಕೆಲಸ ಮಾಡಬಲ್ಲರು.

ಈ ಬಾರಿ ವಿವಿಧ ಬಡಾವಣೆಗಳ 43 ತಂಡಗಳು ಬೇಡರ ವೇಷ ಪ್ರದರ್ಶಿಸಲಿವೆ. ನಗರದ ಪ್ರತಿ ವೃತ್ತದಲ್ಲಿ ಸಹಸ್ರಾರು ಜನರು ಬೇಡನ ಕುಣಿತಕ್ಕಾಗಿ ಕಾತರದಿಂದ ಕಾಯುತ್ತಾರೆ. ಬೇಡರ ವೇಷ ನೋಡಲು ಹೊರ ಜಿಲ್ಲೆಗಳ ಜನರು ಬರುತ್ತಾರೆ.

ತ್ಯಾಗದ ಪ‍್ರತೀಕ:ಅದು ವಿಜಯನಗರ ಅರಸರ ಆಳ್ವಿಕೆಯ ಕೊನೆಯ ಘಟ್ಟ. ಆಗ ಅಧಿಕಾರ ಹಿಡಿದ ಸಾಮಂತರು (ಸೋದೆ ಅರಸರು) ಅಂದಿನ ಕಲ್ಯಾಣ ಪಟ್ಟಣವಾಗಿದ್ದ ಇಂದಿನ ಶಿರಸಿಯ ಆಡಳಿತ ಹೊಣೆ ಹೊತ್ತು, ದಾಸಪ್ಪಶೆಟ್ಟಿ ಎಂಬುವವರಿಗೆ ಸಾರಥ್ಯ ವಹಿಸಿದರು. ಮುಸಲ್ಮಾನರ ದಾಳಿಯ ಭೀತಿಯಲ್ಲಿದ್ದ ಪಟ್ಟಣವನ್ನು ರಕ್ಷಿಸಲು ದಾಸಪ್ಪಶೆಟ್ಟಿ ಆಯ್ಕೆ ಮಾಡಿದ್ದು ವಿಶೇಷ ದೃಷ್ಟಿ ಶಕ್ತಿ ಹೊಂದಿದ್ದ ಮಲ್ಲೇಶಿಯನ್ನು. ಅಧಿಕಾರದಿಂದ ಅಹಂಕಾರಿಯಾದ ಮಲ್ಲೇಶಿ ಕ್ರಮೇಣ ಸ್ತ್ರೀ ಲಂಪಟನಾಗುತ್ತ ಹೋದ. ದಾಸಪ್ಪಶೆಟ್ಟಿಯ ಮಗಳು ರುದ್ರಾಂಬೆಯ ಮೇಲೆ ಆತನ ದೃಷ್ಟಿ ನೆಟ್ಟಿತು. ಮಲ್ಲೇಶಿಗೆ ಪಾಠ ಕಲಿಸಬೇಕೆಂದು ಹಟತೊಟ್ಟ ರುದ್ರಾಂಬೆ ಆತನನ್ನು ವರಿಸುತ್ತಾಳೆ.

ಸರಿಯಾದ ಸಂದರ್ಭಕ್ಕೆ ಕಾಯುತ್ತಿದ್ದ ರುದ್ರಾಂಬೆ, ಹೋಳಿ ಹಬ್ಬದ ದಿನ ಆತ ನರ್ತಿಸುವಾಗ, ಅವನ ಮುಖಕ್ಕೆ ಆ್ಯಸಿಡ್ ಎರಚಿದಳು. ದೃಷ್ಟಿ ಕಳೆದುಕೊಂಡ ಆತನನ್ನು ಊರಿನ ಜನರು ಮೆರವಣಿಗೆ ನಡೆಸುವಾಗ, ಆತ ರೌದ್ರವಾಗಿ ನರ್ತಿಸುತ್ತ, ರುದ್ರಾಂಬೆಯ ಮೇಲೆರಗಲು ಯತ್ನಿಸುತ್ತಿದ್ದ. ಜನರು ಆತನನ್ನು ಜೀವಂತ ದಹಿಸಿದರು. ಮಲ್ಲೇಶಿಯ ಚಿತೆಯಲ್ಲಿ ರುದ್ರಾಂಬೆ ಸತಿಸಹಗಮನ ಮಾಡಿಕೊಂಡಳು. ಇದು ಬೇಡರ ವೇಷದ ಹಿಂದಿರುವ ಜನಪದ ಕಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.