ADVERTISEMENT

ಶಿರಸಿ: ಬೇಡ್ತಿ-ವರದಾ ನದಿ ಜೊಡಣೆ ಯೋಜನೆಗೆ ಪರಿಸರ ಕಾರ್ಯಕರ್ತರ ವಿರೋಧ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 3:13 IST
Last Updated 31 ಆಗಸ್ಟ್ 2025, 3:13 IST
ವೃಕ್ಷಲಕ್ಷ ಆಂದೋಲನದ ವತಿಯಿಂದ ತಜ್ಞರು ಬೇಡ್ತಿ–ವರದಾ ನದಿ ಜೋಡಣೆ ಪರಿಣಾಮಗಳ ಕುರಿತು ಚರ್ಚಿಸುತ್ತಿರುವುದು
ವೃಕ್ಷಲಕ್ಷ ಆಂದೋಲನದ ವತಿಯಿಂದ ತಜ್ಞರು ಬೇಡ್ತಿ–ವರದಾ ನದಿ ಜೋಡಣೆ ಪರಿಣಾಮಗಳ ಕುರಿತು ಚರ್ಚಿಸುತ್ತಿರುವುದು   

ಶಿರಸಿ: ಬೇಡ್ತಿ-ವರದಾ ನದಿ ಜೊಡಣೆ ಯೋಜನೆ ಅನುಷ್ಠಾನದ ಕುರಿತು ಪ್ರಯತ್ನಗಳು ನಡೆಯುತ್ತಿದ್ದು, ರಾಷ್ಟ್ರೀಯ ಜಲ ಅಭಿವೃಧ್ದಿ ಸಂಸ್ಥೆ ಸಮಗ್ರ ಯೋಜನಾ ವರದಿ ಸಿದ್ದಪಡಿಸುವ ತಯಾರಿಯಲ್ಲಿ ಇದೆ. ಈ ಹಿನ್ನಲೆಯಲ್ಲಿ ವೃಕ್ಷಲಕ್ಷ ಆಂದೋಲನ ಸಂಘಟನೆಯು ಸ್ವತಂತ್ರ ಪರಿಸರ ಪರಿಣಾಮ ವರದಿ ಪ್ರಕಟಿಸಿದೆ. 

ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸೇರಿ ಹಲವು ಪರಿಸರ, ಜೀವ ವಿಜ್ಞಾನಿಗಳು ಸ್ವತಂತ್ರ ಪರಿಸರ ಪರಿಣಾಮ ವರದಿಗೆ ತಮ್ಮ ಅಭಿಪ್ರಾಯ ನೀಡುವ ಜತೆ, ಬೇಡ್ತಿ-ವರದಾ ಯೋಜನೆ ಅವೈಜ್ಞಾನಿಕ ಪರಿಸರ ನಾಶಿ ಯೋಜನೆ, ಅವ್ಯವಹಾರಿಕ, ಪಶ್ಚಿಮ ಘಟ್ಟಕ್ಕೆ ಕಂಟಕ ತರಲಿದೆ. ನೀರಿಲ್ಲದ ನೀರಾವರಿ ಯೋಜನೆ ಪ್ರಸ್ತಾಪ ಇದು’ ಎಂದು ಕಟುವಾಗಿ ವಿರೋಧಿಸಿದ್ದಾರೆ. 

‘ಬೇಡ್ತಿ ನದಿ ನೀರಿನ ಮೇಲೆ ಯಲ್ಲಾಪುರ, ಶಿರಸಿ, ಅಂಕೋಲಾ ತಾಲ್ಲೂಕುಗಳ 1.5 ಲಕ್ಷ ರೈತರು ತಮ್ಮ ಕೃಷಿ ಬದುಕಿಗಾಗಿ ಅವಲಂಬಿಸಿದ್ದಾರೆ. ಶಿರಸಿ ನಗರಕ್ಕೆ ಬೇಡ್ತಿ ಉಪನದಿ ಶಾಲ್ಮಲಾದಿಂದ ಕುಡಿಯುವ ನೀರು ಯೋಜನೆ 40 ವರ್ಷಗಳಿಂದ ಇದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಗಳೂ ಬೇಡ್ತಿ ಕಣಿವೆಯ ಉಪನದಿಗಳನ್ನೇ ಅವಲಂಬಿಸಿವೆ. ಯಲ್ಲಾಪುರ ಪಟ್ಟಣಕ್ಕೆ ಸಹ ನೀರು ಪೂರೈಸುವ ಯೋಜನೆ ಜಾರಿ ಆಗಿದೆ. ಬೇಡ್ತಿ ಕಣಿವೆಯ ಹಳ್ಳಗಳಿಗೆ 15 ಸ್ಥಳಗಳಲ್ಲಿ ಕಿರು ನೀರಾವರಿ ಯೋಜನೆ ನಿರ್ಮಾಣ ಮಾಡಿದೆ. ಕಾರವಾರದ ನೌಕಾನೆಲೆಗೆ ಮತ್ತು ನಗರಕ್ಕೆ 20 ವರ್ಷಗಳಿಂದ ಬೇಡ್ತಿ(ಗಂಗಾವಳಿ) ನದಿಯಿಂದ ಬೃಹತ್ ಪೈಪ್‍ಲೈನ್ ಮೂಲಕ ನೀರು ಸರಬರಾಜಾಗುತ್ತಿದೆ. ಈ ಎಲ್ಲ ಅಂಶಗಳ ಮೂಲಕ ಬೇಡ್ತಿ ನದಿಯಿಂದ ನೀರನ್ನು ಸಾಗಿಸಲು ಸಾಧ್ಯವಿಲ್ಲ, ಮುಖ್ಯವಾಗಿ ಬೇಡ್ತಿಯಲ್ಲಿ ನೀರೆ ಇರುವುದಿಲ್ಲ ಎಂಬ ಸಂಗತಿ ಸ್ಪಷ್ಟವಾಗುತ್ತದೆ’ ಎಂದು ವರದಿಯಲ್ಲಿ ತಿಳಿಸಿದ್ದಾರೆ.  

ADVERTISEMENT

‘ಯೋಜನೆ ಜಾರಿಯಿಂದ ನೀರಾವರಿ ಕಾಲುವೆ-ಚಾನೆಲ್, ರಸ್ತೆ ಕಾಮಗಾರಿ, ವಿದ್ಯುತ್ ಮಾರ್ಗಗಳಿಂದ ಬೆಟ್ಟ-ಅರಣ್ಯ, ಗುಡ್ಡ,ಕಣಿವೆ ತುಂಡು ತುಂಡಾಗುತ್ತವೆ. ನಾಶವಾಗುತ್ತವೆ. ಭೂಕುಸಿತ ವ್ಯಾಪಕವಾಗುತ್ತದೆ. ವನ್ಯ ಜೀವಿಗಳು ಅತಂತ್ರವಾಗಲಿವೆ. ವನ್ಯಜೀವಿಗಳ ಹಾವಳಿ ಮಲೆನಾಡಿಗರಿಗೆ ಇನ್ನೂ ಗಂಭಿರ ಸ್ಥಿತಿ ತರಲಿದೆ’ ಎಂದು ಎಚ್ಚರಿಸಿರುವ ತಜ್ಞರು, ‘ಅಂಕೋಲಾ-ಕುಮಟಾ ಭಾಗದ ರೈತರು ಬೇಸಿಗೆಯಲ್ಲಿ ನೀರಿಲ್ಲದೆ ಅತಂತ್ರರಾಗುತ್ತಾರೆ. ಉಪ್ಪುನೀರು ಗಂಗಾವಳಿ ನದಿಯಲ್ಲಿ ಮೇಲಕ್ಕೆ ಏರುತ್ತ ಹೋಗುತ್ತದೆ. ಸಮುದ್ರಕ್ಕೆ ಸಿಹಿ ನೀರು, ಫಲವತ್ತಾದ ನೀರು ಬರಬೇಕು. ಅದಿಲ್ಲವಾದರೆ ಮೀನು ಉತ್ಪಾದನೆ ಇರುವುದಿಲ್ಲ’ ಎಂದು ವರದಿಯಲ್ಲಿ ತಿಳಿಸಿದ್ದಾರೆ. 

‘ರಾಜ್ಯ ನೀರಾವರಿ ಇಲಾಖೆ ಹಾಗೂ ರಾಷ್ಟ್ರೀಯ ಜಲ ಅಭಿವೃದ್ದಿ ಸಂಸ್ಥೆಯವರು ನೀಡಿರುವ ಬೇಡ್ತಿ ನದಿ ನೀರಿನ ಲಭ್ಯತೆ ಅಂಕಿಸಂಖ್ಯೆ ತಪ್ಪಿದೆ. 20 ಟಿ.ಎಂ.ಸಿ ನೀರು ಬೇಡ್ತಿ ವರದಾ ಯೋಜನೆಗೆ ಲಭ್ಯವಾಗಲಿದೆ ಎಂಬ ಮಾಹಿತಿ ವಾಸ್ತವಕ್ಕೆ ದೂರವಾದ ತಪ್ಪು ಮಾಹಿತಿ ಆಗಿದೆ’ ಎಂದಿರುವ ಸಂಸ್ಥೆಯು, ‘ಬೇಡ್ತಿ-ವರದಾ ಯೋಜನೆವ್ಯಾಪ್ತಿ ಇರುವದೇ ಬೇಡ್ತಿ ಮತ್ತು ಶಾಲ್ಮಲಾ ಕಣಿವೆ ವನ್ಯ ಜೀವಿ ಸಂರಕ್ಷಿತ ಪ್ರದೇಶದಲ್ಲಿ ಹೀಗಾಗಿ ಈ ಯೋಜನೆ ಅನುಷ್ಠಾನ ತರವಲ್ಲ’ ಎಂದಿದ್ದಾರೆ. 

2021ರಲ್ಲಿ ಭೂಕುಸಿತ ಅಧ್ಯಯನ ಸಮೀತಿ ಜಿಲ್ಲೆಯ ಬೇಡ್ತಿ ಶಾಲ್ಮಲಾ ಕಣಿವೆಗಳನ್ನು ಸೂಕ್ಷ್ಮ ಭೂಕುಸಿತ ಸಂಭಾವ್ಯ ಪ್ರದೇಶ ಎಂದು ಗುರುತಿಸಿದೆ. ಈ ನಾಲ್ಕು ವರ್ಷಗಳಲ್ಲಿ ಇಲ್ಲಿ ಭಾರೀ ಭೂಕುಸಿತಗಳು ಘಟಿಸಿವೆ ಎಂಬುದನ್ನು ಸರ್ಕಾರ ಪರಿಗಣಿಸಬೇಕು
ಅನಂತ ಅಶೀಸರ ವೃಕ್ಷಲಕ್ಷ ಆಂದೋಲನದ ಮುಖ್ಯಸ್ಥ

ಮುಗಿದ ಧಾರಣಾ ಸಾಮರ್ಥ್ಯ:

2014ರಲ್ಲಿ ಪಶ್ಚಿಮಘಟ್ಟದ ಕಾರ್ಯಪಡೆ ಜೀವವೈವಿಧ್ಯ ಮಂಡಳಿ ಪ್ರಾಯೋಜನೆ ಮಾಡಿರುವ ಭಾರತೀಯ ವಿಜ್ಞಾನ ಸಂಸ್ಥೆ ನೀಡಿರುವ ವರದಿ ಈಗಾಗಲೇ ಪ್ರಕಟವಾಗಿದೆ. ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯ ಮುಗಿದಿದೆ. ಹೊಸ ಬೃಹತ್ ಅರಣ್ಯ ನಾಶ ಯೋಜನೆಗಳು ಬೇಡ ಎಂದು ಐ.ಐ.ಎಸ್.ಸಿ ವರದಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಬೇಡ್ತಿ-ವರದಾ ನದೀ ಜೋಡಣೆಯ ಬೃಹತ್ ಯೋಜನೆಗೆ ಜಿಲ್ಲೆಯಲ್ಲಿ ಅವಕಾಶ ಬೇಡವೇ ಬೇಡ ಎಂದು ವಿಜ್ಞಾನಿಗಳು ವರದಿಯಲ್ಲಿ ಅಭಿಪ್ರಾಯ  ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.