ADVERTISEMENT

ನೈಸರ್ಗಿಕ ಸಂಪತ್ತು ಕ್ರೋಡೀಕರಣ ಅಗತ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉದ್ಯೋಗ ಖಾತ್ರಿ ಯೋಜನೆಯಡಿ ಉತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 14:22 IST
Last Updated 11 ಫೆಬ್ರುವರಿ 2022, 14:22 IST
ಉದ್ಯೋಗ ಖಾತ್ರಿ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಯೊಂದಕ್ಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ ಕಾರವಾರದಲ್ಲಿ ಶುಕ್ರವಾರ ಪ್ರಶಸ್ತಿ ಪ್ರದಾನ ಮಾಡಿದರು. ವಿಧಾಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಎಸ್.ವಿ.ಸಂಕನೂರ, ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ ಇದ್ದಾರೆ
ಉದ್ಯೋಗ ಖಾತ್ರಿ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಯೊಂದಕ್ಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ ಕಾರವಾರದಲ್ಲಿ ಶುಕ್ರವಾರ ಪ್ರಶಸ್ತಿ ಪ್ರದಾನ ಮಾಡಿದರು. ವಿಧಾಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಎಸ್.ವಿ.ಸಂಕನೂರ, ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ ಇದ್ದಾರೆ   

ಕಾರವಾರ: ‘ಅತಿ ಹೆಚ್ಚು ಉದ್ದದ ಸಮುದ್ರ ಕಿನಾರೆ ಇರುವ ಉತ್ತರ ಕನ್ನಡದಲ್ಲಿ ನೈಸರ್ಗಿಕ ಸಂಪತ್ತು ಕ್ರೋಡೀಕರಿಸುವ ಕೆಲಸ ಮತ್ತಷ್ಟು ಆಗಬೇಕಿದೆ. ಇದಕ್ಕೆ ಉದ್ಯೋಗ ಖಾತ್ರಿಯಂಥ ಯೋಜನೆಗಳು ಸಹಕಾರಿಯಾಗಲಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉತ್ತರ ಕನ್ನಡದ ಸಾಧನೆಯು ರಾಜ್ಯಕ್ಕೇ ಮಾದರಿಯಾಗಿದೆ. ಇದು ಯೋಜನೆಗೆ, ಯೋಚನೆಗೆ ಹಾಗೂ ವಿವೇಚನೆಗೆ ಹೆಚ್ಚು ಶಕ್ತಿ ಕೊಡುತ್ತಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ 60 ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಅಗತ್ಯ ಸಹಕಾರ ನೀಡಲಾಗುವುದು’ ಎಂದರು.

ADVERTISEMENT

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ‘ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಮತ್ತಷ್ಟು ಕಾಮಗಾರಿಗಳಿಗೆ ಬಳಕೆ ಮಾಡಲು ಅವಕಾಶವಿದೆ. ಹಾಗಾಗಿ ಈಗ ಮಾಡುತ್ತಿರುವ ಕೆಲಸಗಳ ಜೊತೆಗೇ ಹೊಸ ಕಾರ್ಯಕ್ರಮಗಳತ್ತ ಗಮನ ಹರಿಸಿ’ ಎಂದು ಸಲಹೆ ನೀಡಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಉದ್ಯೋಗ ಖಾತ್ರಿ ಯೋಜನೆಯಡಿ ಬಾವಿಗಳನ್ನು ಸಂಪೂರ್ಣವಾಗಿ ಮಾನವ ಶ್ರಮದಿಂದ ಕೊರೆಯಲಾಗುತ್ತಿದೆ. ಆದರೆ, ಆಳದಿಂದ ಕಲ್ಲನ್ನು ತೆಗೆದು ಹೊರ ಹಾಕುವುದು ಕಷ್ಟವಾಗುತ್ತಿದೆ. ಯೋಜನೆಯಡಿ ಯಂತ್ರಗಳ ಬಳಕೆಯನ್ನು ಶೇ 60ಕ್ಕೆ ಹೆಚ್ಚಿಸಲು ಅವಕಾಶ ಸಿಕ್ಕಿದರೆ ಕೆಲಸ ಮತ್ತಷ್ಟು ಸುಲಭವಾಗುತ್ತದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಮನಕ್ಕೆ ತರಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ಸ್ವಚ್ಛ ಭಾರತ ಅಭಿಯಾನದ ಮಾನವ ಸಂಪನ್ಮೂಲ ಸಮಾಲೋಚಕ ಸೂರ್ಯನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಳೆದ ವರ್ಷ 15 ಲಕ್ಷ ಮಾನವ ದಿನಗಳ ಗುರಿಯಲ್ಲಿ 17 ಲಕ್ಷದ ಸಾಧನೆ ಮಾಡಲಾಗಿದೆ. ಈ ವರ್ಷ 17 ಲಕ್ಷದ ಗುರಿಯಲ್ಲಿ ಶೇ 98.47ರಷ್ಟು ಈಗಾಗಲೇ ಸಾಧನೆಯಾಗಿದೆ. ಮುಂದೆ ಎರಡು ತಿಂಗಳಲ್ಲಿ 2 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಒಟ್ಟು 85 ಸಾವಿರ ಜಾಬ್ ಕಾರ್ಡ್ ಇವೆ’ ಎಂದು ತಿಳಿಸಿದರು.

‘ಸರ್ವೋತ್ತಮ’ ಗ್ರಾ.ಪಂ:

ಉದ್ಯೋಗ ಖಾತ್ರಿಯಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ‘ಸರ್ವೋತ್ತಮ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಅಂಕೋಲಾ ತಾಲ್ಲೂಕಿನ ಹಿಲ್ಲೂರು, ಭಟ್ಕಳದ ಹೆಬಳೆ, ದಾಂಡೇಲಿಯ ಕೋಗಿಲಬನ, ಹಳಿಯಾಳದ ನಾಗಶೆಟ್ಟಿ ಕೊಪ್ಪ, ಹೊನ್ನಾವರದ ಮಂಕಿ ಬಿ, ಕಾರವಾರದ ಅಮದಳ್ಳಿ, ಕುಮಟಾದ ದೇವಗಿರಿ, ಮುಂಡಗೋಡದ ಚಿಗಳ್ಳಿ, ಸಿದ್ದಾಪುರದ ನಿಲ್ಕುಂದ, ಶಿರಸಿಯ ಇಟಗುಳಿ, ಜೊಯಿಡಾದ ಶಿಂಗರಗಾವ್, ಯಲ್ಲಾಪುರದ ಕಣ್ಣಿಗೇರಿ ಗ್ರಾಮ ಪಂಚಾಯಿತಿಗಳು ಪ್ರಶಸ್ತಿ ಪಡೆದವು. ಇದೇರೀತಿ, 17 ವಿಭಾಗಗಳಲ್ಲಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು.

ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಎಸ್.ವಿ.ಸಂಕನೂರ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ಜಿಲ್ಲಾ ‍ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.