ADVERTISEMENT

ಭೈರುಂಬೆ, ನಂದೊಳ್ಳಿ ಪ್ರಥಮ

ಪ್ರಾಥಮಿಕ, ಪ್ರೌಢಶಾಲಾ ಮಕ್ಕಳ ತಾಳಮದ್ದಲೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 14:04 IST
Last Updated 9 ಸೆಪ್ಟೆಂಬರ್ 2019, 14:04 IST
ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ನಂದೊಳ್ಳಿಯ ಮಕ್ಕಳು
ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ನಂದೊಳ್ಳಿಯ ಮಕ್ಕಳು   

ಶಿರಸಿ: ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದ ಅಂಗ ಸಂಸ್ಥೆಯಾಗಿರುವ ಯಕ್ಷ ಶಾಲ್ಮಲಾ ಇತ್ತೀಚೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಆಯೋಜಿಸಿದ್ದ ತಾಳಮದ್ದಲೆ ಸ್ಪರ್ಧೆಯಲ್ಲಿ ಭೈರುಂಬೆ, ನಂದೊಳ್ಳಿ ಶಾಲೆ ಮಕ್ಕಳು ಪ್ರಥಮ ಬಹುಮಾನ ಪಡೆದರು.

ಪ್ರಾಥಮಿಕ ವಿಭಾಗದಲ್ಲಿ ಕೃಷ್ಣಮೂರ್ತಿ ಹೆಗಡೆ ನಿರ್ದೇಶನದಲ್ಲಿ ಭೈರುಂಬೆ ಪ್ರಾಥಮಿಕ ಶಾಲೆ ಮಕ್ಕಳು ಪ್ರಸ್ತುತಪಡಿಸಿದ ‘ದ್ರೋಣ ಶಪಥ’ ತಾಳಮದ್ದಲೆ ಪ್ರಥಮ ಸ್ಥಾನ ಪಡೆಯಿತು. ನಿರ್ಮಲಾ ಹೆಗಡೆ ನಿರ್ದೇಶನದಲ್ಲಿ ಯಕ್ಷಗೆಜ್ಜೆ ತಂಡ ಪ್ರಸ್ತುತಪಡಿಸಿದ ‘ಗಜಾನನ ಜನನ’ ದ್ವಿತೀಯ, ನರಸಿಂಹ ಭಟ್ಟ ಕುಂಕಿಮನೆ ನಿರ್ದೇಶನದಲ್ಲಿ ಜೊಯಿಡಾ ಗುಂದದ ಮಕ್ಕಳ ‘ವಾಲಿಮೋಕ್ಷ’ ತೃತೀಯ ಸ್ಥಾನ ಪಡೆಯಿತು.

ಪ್ರೌಢಶಾಲಾ ವಿಭಾಗದಲ್ಲಿ ನರಸಿಂಹ ಭಟ್ಟ ನಿರ್ದೇಶನದ ನಂದೊಳ್ಳಿ ಶಾಲೆ ಮಕ್ಕಳ ‘ಶ್ರೀಕೃಷ್ಣ ಸಂಧಾನ’ ಪ್ರಥಮ, ಅನ್ನಪೂರ್ಣಾ ಭಟ್ಟ ನಿರ್ದೇಶನ ಭೈರುಂಬೆ ಶಾರದಾಂಬಾ ಪ್ರೌಢಶಾಲೆಯ ಮಕ್ಕಳ ‘ರಾಮ ನಿರ್ಯಾಣ’ ದ್ವಿತೀಯ, ಅರುಣಕುಮಾರ ಭಟ್ಟ ನಿರ್ದೇಶನದ ಜಡ್ಡಿಗದ್ದೆ ಸರ್ಕಾರಿ ಪ್ರೌಢಶಾಲೆ ಮಕ್ಕಳ ‘ಗುರು ದಕ್ಷಿಣೆ‘ ತಾಳಮದ್ದಲೆ ತೃತೀಯ ಸ್ಥಾನ ಪಡೆದುಕೊಂಡಿತು. 16 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರಶಸ್ತಿಪತ್ರ ವಿತರಿಸಿದರು.

ADVERTISEMENT

ಯಕ್ಷೋತ್ಸವದ ನಿರ್ದೇಶಕ ಪ್ರೊ.ಎಂ.ಎ.ಹೆಗಡೆ ದಂಟ್ಕಲ್ ಮಾತನಾಡಿ,‘ಯಕ್ಷಗಾನ ಆಖ್ಯಾನ ಪ್ರಸ್ತುತಗೊಳಿಸುವಾಗ ಅದರ ಕವಿಯ ಹೆಸರು ಉಲ್ಲೇಖ ಮಾಡಬೇಕು. ಪೌರಾಣಿಕ ಕತೆಗಳ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಬೆಳೆಯುತ್ತದೆ ಎಂಬ ಕಾರಣಕ್ಕೆ, ಪೌರಾಣಿಕ ಪ್ರಸಂಗಗಳಿಗೆ ಒತ್ತು ನೀಡಲಾಗಿದೆ. ಕಲಾ ತಂಡಗಳು ಉಳಿದವರ ಪ್ರದರ್ಶನ ಕೂಡ ವೀಕ್ಷಿಸಬೇಕು. ಸ್ಪರ್ಧೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚು ಭಾಗವಹಿಸುತ್ತಿರುವುದು ಸಂತಸದ ವಿಷಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.