ADVERTISEMENT

ವಿಧಾನಪರಿಷತ್ ಚುನಾವಣೆ: ಬಂಡಾಯ ಸ್ಪರ್ಧೆಯಿಂದ ಹಿಂದೆ ಸರಿದ ಭಾಸ್ಕರ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 15:26 IST
Last Updated 22 ನವೆಂಬರ್ 2021, 15:26 IST
ಬಂಡಾಯವಾಗಿ ಸ್ಪರ್ಧೆಗೆ ಮುಂದಾಗಿದ್ದ ಭಾಸ್ಕರ ನಾರ್ವೇಕರ್ ಅವರೊಂದಿಗೆ ಸೋಮವಾರ ಸಂಧಾನ ಸಭೆ ಯಶಸ್ವಿಯಾದ ಬಳಿಕ ಬಿ.ಜೆ.ಪಿ ಮುಖಂಡರು ವಿಜಯದ ಚಿಹ್ನೆ ತೋರಿಸಿದರು. ಸಚಿವ ಶಿವರಾಮ ಹೆಬ್ಬಾರ, ಕಾರವಾರ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ವಿಧಾನಪರಿಷತ್ ಚುನಾವಣೆ ಅಭ್ಯರ್ಥಿ ಗಣಪತಿ ಉಳ್ವೇಕರ್ ಇದ್ದಾರೆ.
ಬಂಡಾಯವಾಗಿ ಸ್ಪರ್ಧೆಗೆ ಮುಂದಾಗಿದ್ದ ಭಾಸ್ಕರ ನಾರ್ವೇಕರ್ ಅವರೊಂದಿಗೆ ಸೋಮವಾರ ಸಂಧಾನ ಸಭೆ ಯಶಸ್ವಿಯಾದ ಬಳಿಕ ಬಿ.ಜೆ.ಪಿ ಮುಖಂಡರು ವಿಜಯದ ಚಿಹ್ನೆ ತೋರಿಸಿದರು. ಸಚಿವ ಶಿವರಾಮ ಹೆಬ್ಬಾರ, ಕಾರವಾರ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ವಿಧಾನಪರಿಷತ್ ಚುನಾವಣೆ ಅಭ್ಯರ್ಥಿ ಗಣಪತಿ ಉಳ್ವೇಕರ್ ಇದ್ದಾರೆ.   

ಕಾರವಾರ: ವಿಧಾನಪರಿಷತ್ ಚುನಾವಣೆಗೆ ಬಿ.ಜೆ.ಪಿ ಟಿಕೆಟ್ ಸಿಗದೇ ನಿರಾಸೆಗೊಂಡು ಬಂಡಾಯ ಸ್ಪರ್ಧೆಗೆ ಮನಸ್ಸು ಮಾಡಿದ್ದ ಉದ್ಯಮಿ ಭಾಸ್ಕರ್ ನಾರ್ವೇಕರ್ ಕೊನೆಗೂ ಮನಸ್ಸು ಬದಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಶಿವರಾಮ ಹೆಬ್ಬಾರ ಅವರು ಸೋಮವಾರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ.

ಭಾಸ್ಕರ್, ಪಕ್ಷದ ಅಭ್ಯರ್ಥಿ ಗಣಪತಿ ಉಳ್ವೇಕರ್, ಕಾರವಾರ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಹಾಗೂ ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯಕ ಅವರು ಸಚಿವ ಹೆಬ್ಬಾರ್ ಅವರನ್ನು ಯಲ್ಲಾಪುರದಲ್ಲಿ ಭೇಟಿ ಮಾಡಿದರು.

ಅವರೊಂದಿಗೆ ಮಾತುಕತೆ ನಡೆಸಿದ ಸಚಿವರು, ‘ಬಿ.ಜೆ.ಪಿ.ಯು ಸಂಘಟನೆ ಹಾಗೂ ಶಿಸ್ತಿನಿಂದ ಗುರುತಿಸಿಕೊಂಡಿದೆ. ಬಂಡಾಯ ಸ್ಪರ್ಧೆಯಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಎಲ್ಲರೂ ಒಂದಾಗಿ ಚುನಾವಣೆಯನ್ನು ಎದುರಿಸಬೇಕಿದೆ. ಪಕ್ಷದ ಅಭ್ಯರ್ಥಿ ಗಣಪತಿ ಉಳ್ವೇಕರ್ ಜಯಿಸುವಂತೆ ಶ್ರಮಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದು ಹೇಳಿದರು. ಬಹಳ ಹೊತ್ತು ಚರ್ಚೆಯ ಬಳಿಕ ಭಾಸ್ಕರ್ ನಾರ್ವೇಕರ್ ಬಂಡಾಯ ಸ್ಪರ್ಧೆಯ ತಮ್ಮ ನಿರ್ಧಾರಿಂದ ಹಿಂದೆ ಸರಿದರು ಎಂದು ಪ‍ಕ್ಷದ ಮುಖಂಡರು ತಿಳಿಸಿದ್ದಾರೆ.

ADVERTISEMENT

ಸಂಧಾನದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಪಕ್ಷದ ತೀರ್ಮಾನಕ್ಕೆ ಬದ್ಧನಿದ್ದು, ಗಣಪತಿ ಉಳ್ವೇಕರ್ ಅವರ ಗೆಲುವಿಗಾಗಿ ದುಡಿಯುತ್ತೇನೆ. ಅಂಕೋಲಾ ತಾಲ್ಲೂಕಿನಲ್ಲಿ ಪಕ್ಷದ ಹೊಣೆ ವಹಿಸಿಕೊಳ್ಳುತ್ತೇನೆ. ನ.23ರಂದು ಕಾರವಾರದಲ್ಲಿ ಗಣಪತಿ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಜೊತೆಗಿರುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.