ADVERTISEMENT

ನಗರಸಭೆ ದರ್ಜೆಗೇರಲಿದೆ ಭಟ್ಕಳ: ಸಚಿವ ಸಂಪುಟ ಅನುಮೋದನೆ

ಸಾರ್ವಜನಿಕ ವಲಯದಲ್ಲಿ ಪರ–ವಿರೋಧ ಅಭಿಪ್ರಾಯ

ಮೋಹನ ನಾಯ್ಕ
Published 8 ಆಗಸ್ಟ್ 2025, 4:50 IST
Last Updated 8 ಆಗಸ್ಟ್ 2025, 4:50 IST
ಭಟ್ಕಳ ಪುರಸಭೆ ಕಚೇರಿ
ಭಟ್ಕಳ ಪುರಸಭೆ ಕಚೇರಿ   

ಭಟ್ಕಳ: ಪುರಸಭೆ ಸ್ಥಾನಮಾನದಿಂದ ನಗರಸಭೆ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

‘ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯಿತಿ ಹಾಗೂ ಹೆಬಳೆ ಗ್ರಾಮ ಪಂಚಾಯಿತಿಯನ್ನು ವಿಲೀನಗೊಳಿಸಿ ನಗರಸಭೆಯಾಗಿ ಮೇಲ್ದರ್ಜೇಗೇರಿಸಲು ಸಚಿವ ಸಂಪುಟ ನಿರ್ಣಯಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪುರಸಭೆಯಿಂದ ನಗರಸಭೆಯಾಗಿ ಪರಿವರ್ತನೆಗೊಂಡರೆ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಲಭ್ಯತೆ ಹೆಚ್ಚಲಿದೆ ಎಂಬುದು ಭಟ್ಕಳ ಪಟ್ಟಣದ ಬಹುಪಾಲು ನಿವಾಸಿಗಳ ಅಭಿಪ್ರಾಯ. ಆದರೆ, ಪ್ರತಿಯೊಂದೂ ಕೆಲಸಕ್ಕೆ ಭಟ್ಕಳ ಪಟ್ಟಣಕ್ಕೆ ಸಾಗಬೇಕು. ಅಲ್ಲಿನ ಪುರಸಭೆ ಕಚೇರಿ ಅವಲಂಭಿಸಬೇಕು ಎಂಬುದು ಜಾಲಿ, ಹೆಬಳೆ ವ್ಯಾಪ್ತಿಯ ಜನರ ಅಳಲು.

ADVERTISEMENT

‘ಭಟ್ಕಳ ಪುರಸಭೆಯನ್ನು ನಗರಸಭೆ ಮೇಲ್ದರ್ಜೇಗೇರಿಸಿದರೆ ಅನುದಾನ ಐದು ಪಟ್ಟು ಹೆಚ್ಚಾಗಲಿದೆ. ನಗರಸಭೆಗೆ ತಕ್ಕಂತೆ ಸಿಬ್ಬಂದಿ ಸಂಖ್ಯೆಯೂ ಹೆಚ್ಚುತ್ತದೆ. ಪೌರಾಯುಕ್ತರು, ಸಹಾಯಕ ಎಂಜಿನಿಯರ್‌ ಹುದ್ದೆಗಳಿರುವ ಕಾರಣದಿಂದ ₹40 ಲಕ್ಷದವರೆಗಿನ ಕಾಮಗಾರಿ ಅನುಮದೋದನೆಗಾಗಿ ಜಿಲ್ಲಾ ನಗರಾಭಿವೃದ್ದಿಕೋಶಕ್ಕೆ ಅಲೆದಾಡಬೇಕಾದ ಸಮಯ ಉಳಿಯುತ್ತದೆ’ ಎನ್ನುತ್ತಾರೆ ಪುರಸಭೆಯ ಅಧಿಕಾರಿಗಳು.

‘ನಗರಸಭೆಗೆ ತಕ್ಕಂತೆ ಸಿಬ್ಬಂದಿ ನೇಮಕವಾದರೆ ಮಾತ್ರ ಸ್ವಚ್ಚತಾ ಕಾರ್ಯ, ಕಚೇರಿ ಕೆಲಸ ಸುಲಲಿತವಾಗಿ ಆಗುತ್ತದೆ. ಇಲ್ಲವಾದಲ್ಲಿ ನೈರ್ಮಲೀಕರಣವೇ ನಗರಸಭೆಗೆ ದೊಡ್ಗ ಸಮಸ್ಯೆಯಾಗಿ ಕಾಡಲಿದೆ’ ಎಂದು ಪುರಸಭೆ ಸದಸ್ಯ ಫಾಸ್ಕಲ್‌ ಗೋಮ್ಸ ಹೇಳುತ್ತಾರೆ.

ಪಟ್ಟಣದ ಸಮಗ್ರ ಅಭಿವೃದ್ದಿಗೆ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೇಗೇರಿಸಲು ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಚಿವ ಸಂಪುಟ ಅನುಮೋದಿಸಿದೆ
ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ
ನಗರಸಭೆ ವ್ಯಾಪ್ತಿಗೆ ಪಟ್ಟಣಕ್ಕೆ ಹೊಂದಿಕೊಂಡ ಪ್ರದೇಶಗಳನ್ನು ಸೇರಿಸುವ ಬದಲು ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನು ಮಾತ್ರ ಸೇರಿಸುವ ಮೂಲಕ ಅಭಿವೃದ್ಧಿಗಿಂತ ಓಲೈಕೆಗೆ ಸಚಿವರು ಆದ್ಯತೆ ನೀಡಿದಂತಿದೆ
ಗೋವಿಂದ ನಾಯ್ಕ ಬಿಜೆಪಿ ಮುಖಂಡ

ಚರ್ಚೆಗೆ ಗ್ರಾಸವಾಗಿದ್ದ ಪತ್ರ:

ಭಟ್ಕಳ ಪಟ್ಟಣವನ್ನು ನಗರಸಭೆ ಮೇಲ್ದರ್ಜೆಗೇರಿಸಲು 2015ರಲ್ಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಭಟ್ಕಳ ಪುರಸಭೆಯಲ್ಲಿ ಮುಸ್ಲಿಂಮರ ಪರಮೋಚ್ಛ ಸಂಸ್ಥೆ ತಂಜೀಮ್ ಆಡಳಿತ ನಡೆಸಯುತ್ತಿದೆ. ಇದನ್ನು ನಿಯಂತ್ರಿಸಲು ಮುಟ್ಟಳ್ಳಿ ಮುಂಡಳ್ಳಿ ಹಾಗೂ ಮಾವಿನಕುರ್ವೆ ಗ್ರಾಮ ಪಂಚಾಯಿತಿಯನ್ನು ಪುರಸಭೆಯೊಂದಿಗೆ ಸೇರಿಸಿ ನಗರಸಭೆ ಮೇಲ್ದರ್ಜೆಗೇರಿಸಲು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದರು. 2024ರ ಜ.12 ರಂದು ಸಚಿವ ಮಂಕಾಳ ವೈದ್ಯ ಅವರು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಬರೆದ ಪತ್ರವೂ ಚರ್ಚೆಗೆ ಕಾರಣವಾಗಿತ್ತು. ಪತ್ರದಲ್ಲಿ ಭಟ್ಕಳ ಜಾಲಿ ಮತ್ತು ಹೆಬಳೆ ಪ್ರದೇಶ ಒಳಗೊಂಡು ನಗರಸಭೆ ರಚಿಸಲು ಸಚಿವರು ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.