ADVERTISEMENT

ಭಟ್ಕಳ: ಎರಡು ವಾರ್ಡ್‌ಗೆ ಒಂದು ಕೇಂದ್ರ

ದಿನ ಬಿಟ್ಟು ದಿನ ‘ಫೀವರ್ ಕ್ಲಿನಿಕ್‌’ನಲ್ಲಿ ತಪಾಸಣೆ ಮಾಡಿಸುವುದು ಕಡ್ಡಾಯ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 12:15 IST
Last Updated 29 ಜೂನ್ 2020, 12:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ‘ಭಟ್ಕಳ ಪಟ್ಟಣದಲ್ಲಿ ಪ್ರತಿ ಎರಡು ವಾರ್ಡ್‌ಗಳಿಗೆ ಒಂದು ಜ್ವರ ತಪಾಸಣಾ ಕೇಂದ್ರ (ಫೀವರ್ ಕ್ಲಿನಿಕ್) ಆರಂಭಿಸಲಾಗುವುದು. ಆಯಾ ವಾರ್ಡ್‌ನ ಜನರುದಿನಬಿಟ್ಟು ದಿನ ಅಲ್ಲಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೊರೊನಾ ವೈರಸ್ ದಾಳಿಗೆ ಸುಲಭವಾಗಿ ತುತ್ತಾಗಬಹುದಾದ ವಯಸ್ಸಿನವರ ಸಮಗ್ರ ಮಾಹಿತಿ ಜಿಲ್ಲಾಡಳಿತಕ್ಕಿದೆ. ಒಂದುವೇಳೆ, ತಪಾಸಣಾ ಕೇಂದ್ರಗಳಿಗೆ ಬರಲು ಸಾಧ್ಯವೇ ಇಲ್ಲ ಎಂಬಂಥವರ ಮನೆಯ ಬಳಿಗೆ ಸಂಚಾರಿ ಕೇಂದ್ರಗಳನ್ನು ಕಳುಹಿಸಲಾಗುತ್ತದೆ. ಈ ಕೇಂದ್ರಗಳಿಗೆ ಬಾರದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಭಟ್ಕಳ ಪಟ್ಟಣದಲ್ಲಿ ಜನಸಾಂದ್ರತೆ ಹೆಚ್ಚಿರುವ ಕಾರಣ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 10 ವರ್ಷದ ಒಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲಿನ ಹಿರಿಯರು ಆರೋಗ್ಯದ ಕಾರಣವನ್ನು ಹೊರತುಪಡಿಸಿ ಮನೆಯಿಂದ ಹೊರಗೆ ಬರಬಾರದು. ಜನರು ಗುಂಪಾಗಿ ಸೇರುವುದಕ್ಕೆ ನಿರ್ಬಂಧ ಹೇರಲಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆಪ್ರಕರಣ ದಾಖಲಿಸಲಾಗುತ್ತದೆ. ಅಲ್ಲದೇ ಹೊರಗಿನಿಂದ ಬಂದಿರುವ ಜನರು ತಮ್ಮ ಪ್ರಯಾಣದ ಬಗ್ಗೆಸತ್ಯ ಹೇಳಬೇಕು. ಇದರಿಂದ ಕೊರೊನಾ ಹರಡುವುದನ್ನು ತಡೆಯಬಹುದು’ ಎಂದರು.

ADVERTISEMENT

ಜಿಲ್ಲೆಯ ಕೋವಿಡ್ ಪೀಡಿತ ಎಲ್ಲರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗಿದೆ. ಹಾಗಾಗಿ ಸಮುದಾಯಕ್ಕೆ ಹಬ್ಬಿಲ್ಲ ಎಂಬುದು ದೃಢವಾಗಿ ಹೇಳಬಹುದು ಎಂದೂ ಹೇಳಿದರು.

‘ಜಿಲ್ಲೆಯಲ್ಲಿ ಕೊರೊನಾ ಯೋಧರಾಗಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಒಂದುವೇಳೆ ಕೋವಿಡ್ ದೃಢಪಟ್ಟರೆ ಅವರ ಚಿಕಿತ್ಸೆಗೆಂದೇ ಕಾರವಾರದಲ್ಲಿ ಪ್ರತ್ಯೇಕ ವಾರ್ಡ್ ಮೀಸಲಿಡಲಾಗುತ್ತದೆ. ಅವರ ಸೇವೆಯನ್ನು ಸ್ಮರಿಸಲು ಹಾಗೂ ಮಾನಸಿಕ ಸ್ಥೈರ್ಯ ತುಂಬಲು ಇದು ಸಹಕಾರಿ’ ಎಂದು ಹೇಳಿದರು.

ಪ್ರತಿವಿಧಾನ‌ಸಭಾ ಕ್ಷೇತ್ರದಲ್ಲಿ ವಿವಿಧ ಆರೋಗ್ಯ ಸಮಸ್ಯೆ ಇರುವವರನ್ನು ಬೂತ್ ಮಟ್ಟದ ಅಧಿಕಾರಿಗಳು ಸಮೀಕ್ಷೆ ಮೂಲಕಪಟ್ಟಿ ಮಾಡಿದ್ದಾರೆ. ಅವುಗಳನ್ನು ‘ಹೆಲ್ತ್ ವಾಚ್’ ಆ್ಯಪ್‌ಗೆ ಅಪ್‌ಲೋಡ್ ಮಾಡಲಾಗಿದೆ. ಇದರಿಂದ ರೋಗಿಗಳ ಮಾಹಿತಿಯನ್ನು ಸಮಗ್ರವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ:‘ಕೋವಿಡ್ ರೋಗಿಗಳ ಚಿಕಿತ್ಸೆಗೆಂದು ಕುಮಟಾ ತಾಲ್ಲೂಕು ಆಸ್ಪತ್ರೆಯಲ್ಲಿ ವಾರ್ಡ್ ಆರಂಭಿಸಲಾಗಿದೆ. ಹೊನ್ನಾವರ ಆಸ್ಪತ್ರೆಯಲ್ಲಿ ಕೂಡ ಆರಂಭಿಸಲಾಗಿದ್ದು, ಜೂನ್ 30ಕ್ಕೆ ಕಾರ್ಯಾರಂಭ ಮಾಡಲಿದೆ.ಇವುಗಳು ತಲಾ 40 ಹಾಸಿಗೆ ಹೊಂದಿವೆ. ಶಿರಸಿಯಲ್ಲಿ ಇನ್ನೆರಡು ದಿನಗಳಲ್ಲಿ ಶುರುವಾಗಲಿದೆ. ಕಾರವಾರದಲ್ಲಿ ಮತ್ತೊಂದು ವಾರ್ಡ್ ಶೀಘ್ರವೇ ಆರಂಭವಾಗಲಿದೆ’ ಎಂದುಡಾ.ಕೆ.ಹರೀಶಕುಮಾರ್ ತಿಳಿಸಿದರು.

‘ಇನ್ನುಮುಂದೆ ರೋಗ ಲಕ್ಷಣ ರಹಿತವಾದ ಸೋಂಕಿತರಿಗೆ ಈ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ತೀವ್ರ ನಿಗಾ ಅಗತ್ಯ ಇರುವವರನ್ನು ಮಾತ್ರ ಬೇರೆ ವಾರ್ಡ್‌ಗಳಿಗೆ ದಾಖಲಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.