ADVERTISEMENT

ಸಿದ್ದಾಪುರ: ಸ್ಥಳೀಯ ಪೊಲೀಸರ ವಿರುದ್ಧವೂ ತನಿಖೆಯಾಗಲಿ; ಬಿಜೆಪಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 3:07 IST
Last Updated 6 ಫೆಬ್ರುವರಿ 2026, 3:07 IST
ಬಿಜೆಪಿ ಚಿಹ್ನೆ
ಬಿಜೆಪಿ ಚಿಹ್ನೆ   

ಸಿದ್ದಾಪುರ: ತಾಲ್ಲೂಕಿನಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ನೆಮ್ಮದಿಯಿಂದ ಬದುಕು ಸಾಗಿಸುವುದು ಕಷ್ಟಕರವಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಂ.ಕೆ.ತಿಮ್ಮಪ್ಪ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷದಲ್ಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ 8 ಸಾವು ಸಂಭವಿಸಿವೆ. ಅವುಗಳಲ್ಲಿ ಕೆಲವು ಕೊಲೆಯಾದರೆ ಕೆಲವು ಅನುಮಾಸ್ಪದ ಸಾವುಗಳು ಇವೆ. ಆದರೆ ಇವರೆಗೂ ಯಾವುದೇ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆದಿಲ್ಲ. ಪೊಲೀಸ್ ಇಲಾಖೆ ಇದ್ದರೂ ನಿಷ್ಪ್ರಯೊಜಕವಾಗಿದೆ. ಫೆ.2ರಂದು ಅವರಗುಪ್ಪ ಕೊಲೆ ಪ್ರಕರಣವೂ ಸಹ ಪೊಲೀಸರ ನಿಷ್ಕಾಳಜಿಯಿಂದ ಸಂಭವಿಸಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಎಂದರು.

ಆರೋಪಿ ಸುಚಿತ್ರಾ ಎಂಬುವವಳ ಮಗಳು ಸುಮಶ್ರೀ ಫೆ.2ರಂದು ತಂದೆಯ ಜೊತೆ ಸಿದ್ದಾಪುರ ಠಾಣೆಗೆ ಬಂದು ಶಿವಮೊಗ್ಗದಲ್ಲಿ ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಕಮಲಾಕರ ಗುರೂಜಿ ಮತ್ತು ತಾಯಿ ಸುಚಿತ್ರಾಳ ಕುರಿತು ವಿವರಮಾದ ಮಾಹಿತಿ ನೀಡಿದ್ದಾಳೆ. ಅವಳು ಅಪ್ರಾಪ್ತೆಯಾದ ಕಾರಣ ಪೊಲೀಸರು ಅವಳನ್ನು ಮಕ್ಕಳ ಸಾತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಫೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿ ಕಮಲಾಕರ ಗುರೂಜಿ ಮತ್ತು ಸುಚಿತ್ರಾಳ ವಿಚಾರಣೆ ನಡೆಸಿದ್ದರೆ ನಡೆದ ಅನಾಹುತವನ್ನು ತಪ್ಪಿಸಬಹುದಿತ್ತು. ಇದಲ್ಲದೇ ಸುಮಶ್ರೀ ಠಾಣೆಗೆ ಹಾಜರಾಗಿ ಕಮಲಾಕರ ಗುರೂಜಿ ಮತ್ತು ಸುಚಿತ್ರಾಳ ವಿರುದ್ಧ ಹೇಳಿಕೆ ಕೊಟ್ಟಿರುವ ವಿಚಾರವನ್ನು ಇಲಾಖೆಯಿಂದಲೇ ಸುಚಿತ್ರಾಳಿಗೆ ತಲುಪಿಸಲಾಗಿದೆ ಎಂಬ ಅನುಮಾನವಿದೆ ಎಂದು ಹೇಳಿದರು.

ADVERTISEMENT

ಅಂತೆಯೇ ಅವರಗುಪ್ಪದಲ್ಲಿ ಗಲಾಟೆ ನಡೆಯುತ್ತಿರುವಾಗ ಸಾರ್ವಜನಿಕರು 112 ಗೆ ಕರೆ ಮಾಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಆಗಮಿಸಲು ವಿಳಂಬ ಮಾಡಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಹಿಂದೆ ತೌಡತ್ತಿಯ ಸಂತೋಷ ಎನ್ನುವ ಯುವಕ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಡಿಂದ್ದ. ವಿಡಿಯೋದಲ್ಲಿ ಹಲವು ಪ್ರಭಾವಿಗಳ ಹೆಸರನ್ನು ಉಲ್ಲೇಖಿಸಿ ಹೆಣ್ಣುಮಕ್ಕಳ ಅಶ್ಲೀಲ ವಿಡಿಯೋ ದಂಧೆ ನಡೆಯುತ್ತಿದೆ ಎನ್ನುವ ಆರೋಪ ಮಾಡಿದ್ದ. ಆದರೆ ಇವರೆಗೂ ಈ ಬಗ್ಗೆ ಸೂಕ್ತ ತನಿಖೆ ನಡೆದಿಲ್ಲ. ಇವೆಲ್ಲವುಗಳನ್ನು ಗಮನಿಸಿದಾಗ ಪೊಲೀಸರು ನ್ಯಾಯ ದೊರಕಿಸುವಲ್ಲಿ ವಿಫಲರಾಗುತ್ತಿದ್ದಾರೆ ಎನ್ನುವುದು ಸಾಬೀತಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಸಿದ್ದಾಪುರ ಠಾಣೆಯ ಸಿಪಿಐ ಮತ್ತು ಪಿಎಸ್ಐಗಳನ್ನು ವಿಚಾರಣೆಗೆ ಒಳಪಡಿಸಬೇಕು. ಅವರಗುಪ್ಪಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೂ ಶಾಮೀಲಾದ ಬಗ್ಗೆ ಮಾಹಿತಿ ಇರುವುದರಿಂದ ಪ್ರತ್ಯೇಕ ತನಿಖಾ ತಂಡವನ್ನು ರಚಿಸಿ 15ಗಳ ಒಳಗೆ ಇಲಾಖೆ ಸಿಬ್ಬಂದಿ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಪ್ರಕರಣ ಕೊಲೆ ಆರೋಪಿಗಳಿಗೂ ಕಠಿಣ ಶಿಕ್ಷೆ ಆಗಬೇಕು. ಇಲ್ಲದಿದ್ದರೆ ಠಾಣೆಯ ಎದುರು ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಕೆ ಜಿ ನಾಯ್ಕ ಹಣಜೀಬೈಲ್, ಮಂಡಲ ಉಪಾಧ್ಯಕ್ಷ ದಿವಾಕರ ನಾಯ್ಕ ಹೆಮ್ಮನಬೈಲ್, ಪ್ರಮುಖರಾದ ರಾಘವೇಂದ್ರ ಶಾಸ್ತ್ರಿ, ಗುರುರಾಜ ಶಾನಭಾಗ, ಸುರೇಶ ಬಾಲಿಕೊಪ್ಪ, ನಂದನ ಬೋರಕರ್, ಎಸ್ ಕೆ ಮೇಸ್ತ, ವಿಜೇತ ಗೌಡರ್, ತೋಟಪ್ಪ ನಾಯ್ಕ, ಮಂಜುನಾಥ ಭಟ್ಟ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.