ಗೋಕರ್ಣ: ‘100 ಜನ ಬಲಿಷ್ಠವಾದ ಯುವ ಪಡೆಯನ್ನು ನನಗೆ ಕೊಡಿ. ಈ ದೇಶದ ಭವಿಷ್ಯವನ್ನೇ ಬದಲಿಸುತ್ತೇನೆ ಎಂದು ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ್ದರು. ಶಿವಾ ಮಲ್ಟಿ ಜಿಮ್ ಮಾಲೀಕ ಶಿವ ಅವರು ಇಂತಹ ನೂರಾರು ಯುವಕರನ್ನು ಶಿವನ ನಾಡಿನಲ್ಲಿ ಸೃಷ್ಟಿ ಮಾಡುತ್ತಿದ್ದಾರೆ’ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಶನಿವಾರ ರಾತ್ರಿ ಗೋಕರ್ಣದ ಶಿವಾ ಮಲ್ಟಿ ಜಿಮ್ ಆಯೋಜಿಸಿದ್ದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ‘ಮಿಸ್ಟರ್ ಮಹಾಬಲ - 2025’ ಉದ್ಘಾಟಿಸಿ ಮಾತನಾಡಿದರು.
‘ಯುವ ಜನಾಂಗ ಸದೃಢವಾಗಿದ್ದರೆ, ದೇಶವೂ ಬಲಿಷ್ಠವಾಗಿರುತ್ತದೆ. ದೇಶದ ಅಭಿವೃದ್ಧಿಗೂ ಇದರಿಂದ ಸಹಾಯವಾಗುತ್ತದೆ. ಯುವಜನಾಂಗ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚು ಮುಂದೆ ಬರಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಬಾವಿ ಮಾತನಾಡಿ, ರಾಜ್ಯ ಮಟ್ಟದ ಇಂತಹ ಕಾರ್ಯಕ್ರಮ ಆಯೋಜಿಸುವುದು ಸುಲಭದ ಕೆಲಸವಲ್ಲ. ಶಿವ ಅವರು ಕಳೆದ ಕೆಲವು ವರ್ಷಗಳಿಂದ ಇಂತಹ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದ್ದಾರೆ. ಅವರಿಗೆ ಮುಂದೆಯೂ ನಮ್ಮ ಸಹಕಾರ, ಸಹಾಯ ಇರಲಿದೆ’ ಎಂದರು.
ಕರ್ಣದ ಆನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿ, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ, ಲಯನ್ಸ್ ಕ್ಲಬ್ ಸದಸ್ಯ ಅನಿಲ್ ಶೇಟ್, ತದಡಿ ಮೀನುಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಮಹೇಶ ಮೂಡಂಗಿ ಮಾತನಾಡಿದರು.
ವೇದಿಕೆಯ ಮೇಲೆ ಬಿಜೆಪಿ ತಾಲ್ಲೂಕು ಘಟಕದ ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಕುಮಾರ ಮಾರ್ಕಾಂಡೆ, ರಾಜ್ಯ ದೇಹದಾರ್ಢ್ಯ ಸಂಸ್ಥೆಯ ಅಧ್ಯಕ್ಷ ಎಸ್.ಡಿ. ನಾಯ್ಕ, ಕಾರ್ಯದರ್ಶಿ ಜಿ.ಡಿ. ಭಟ್, ಉಧ್ಯಮಿ ವಿನಾಯಕ ನಾಯಕ, ಕಾರ್ಯಕ್ರಮದ ಆಯೋಜಕರಾದ ಜಿಮ್ ಶಿವಾ ಇದ್ದರು. ರಾಜ್ಯದ ಬೇರೆ ಬೇರೆ ಕಡೆಗಳಿಂದ 40ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಉಡುಪಿಯ ಚರಣರಾಜ್ ‘ಮಿಸ್ಟರ್ ಮಹಾಬಲ-2025’ ವಿಜೇತರಾಗಿ ಆಯ್ಕೆಯಾದರು. ರನ್ನರ್ ಅಪ್ ಆಗಿ ಬೆಂಗಳೂರಿನ ರಾಮ್ ಸೋಮಶೇಖರ್, ಅತ್ಯುತ್ತಮ ಪೋಸರ್ ಆಗಿ ಬೆಳಗಾವಿಯ ಮಂಜುನಾಥ ಕೊಲ್ಲಾಪುರಿ ಆಯ್ಕೆಯಾದರು.
ಶಿವಾ ಮಲ್ಟಿ ಜಿಮ್ಮಿನ ಮಾಲೀಕ ಶಿವಾ ಸ್ವಾಗತ ಮತ್ತು ಪ್ರಸ್ತಾವಿಕವಾಗಿ ಮಾತನಾಡಿದರು. ಸುಭಾಸ್ ಕಾರೇಬೈಲ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.