ADVERTISEMENT

ಕಾಳಿ ನದಿಯಿಂದ ನಾಲ್ವರ ಶವ ಹೊರಕ್ಕೆ: ಶೋಕ ಸಾಗರದಲ್ಲಿ ಮುಳುಗಿದ ಬೊಮ್ಮನಹಳ್ಳಿ

ಬಟ್ಟೆ ಶುಭ್ರಗೊಳಿಸಲು ಕಾಳಿ ನದಿಗೆ ಹೋದವರು ನೀರುಪಾಲು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 13:34 IST
Last Updated 18 ಡಿಸೆಂಬರ್ 2018, 13:34 IST
ಹಳಿಯಾಳ ತಾಲ್ಲೂಕಿನ ಬೊಮ್ಮನಹಳ್ಳಿಯ ಕಾಳಿ ನದಿಯಲ್ಲಿ ಮುಳುಗಿದ ಮೃತಪಟ್ಟ ಧೂಳು ದುಂಡು ಗಾವಡೆ ಅವರ ಮನೆ.
ಹಳಿಯಾಳ ತಾಲ್ಲೂಕಿನ ಬೊಮ್ಮನಹಳ್ಳಿಯ ಕಾಳಿ ನದಿಯಲ್ಲಿ ಮುಳುಗಿದ ಮೃತಪಟ್ಟ ಧೂಳು ದುಂಡು ಗಾವಡೆ ಅವರ ಮನೆ.   

ಹಳಿಯಾಳ:ವೈಕುಂಠ ಏಕಾದಶಿಗೆಕುಟುಂಬದ ಆರಾಧ್ಯ ದೇವರ ಪೂಜೆಮಾಡಬೇಕು... ಅದಕ್ಕೆ ಬಟ್ಟೆ ಶುಭ್ರಗೊಳಿಸಬೇಕು ಎಂದು ಮನೆಮಂದಿ ಒಟ್ಟಾಗಿ ಕಾಳಿ ನದಿ ದಡಕ್ಕೆ ಹೋಗಿದ್ದರು. ಆದರೆ, ನೀರಿಗೆ ಬಿದ್ದ ಪುಟ್ಟ ಮಗಳನ್ನು ರಕ್ಷಿಸಲು ಮುಂದಾಗಿ ನಾಲ್ವರು ಮೃತಪಟ್ಟರು.

ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ದುರಂತವಿದು. ಧೂಳು ದುಂಡು ಗಾವಡೆ (45), ಅವರ ಮಕ್ಕಳಾದಗಾಯತ್ರಿ ದೂಳು ಗಾವಡೆ (9),ಕೃಷ್ಣಾ ಧೂಳು ಗಾವಡೆ(6) ಹಾಗೂಸತೀಶ ಬೀರು ಗಾವಡೆ (7) ಸಾವಿಗೆ ಇಡೀ ಗ್ರಾಮ ರೋದಿಸುತ್ತಿದೆ. ಗೌಳಿ ಸಮುದಾಯದ, ಕಡುಬಡತನದಿಂದ ಕೂಡಿದ ಕುಟುಂಬಕ್ಕೆ ಎರಗಿದ ಆಘಾತ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಧೂಳು ದುಂಡು ಗಾವಡೆ ಅವರ ಪತ್ನಿ ರಾಮಿಬಾಯಿ ಧೂಳು ಗಾವಡೆ ಸೋಮವಾರ ಮಧ್ಯಾಹ್ನ ನದಿಯ ತಟದಲ್ಲಿ ಬಟ್ಟೆ ತೊಳೆಯುತ್ತಿದ್ದರು. ಅಲ್ಲೇಆಟವಾಡುತ್ತಿದ್ದಅವರ ಮಗಳು ಗಾಯತ್ರಿ ಕಾಲುಜಾರಿ ನೀರಿನಲ್ಲಿ ಬಿದ್ದಳು. ಅವಳನ್ನು ರಕ್ಷಿಸಲು ರಾಮಿಬಾಯಿ ನೀರಿಗೆ ಹಾರಿದರು. ನದಿಯಲ್ಲಿದ್ದ ಸುಮಾರು 20 ಅಡಿಗಳಷ್ಟು ಆಳದನೀರಿನಲ್ಲಿ ಅವರೂ ಮುಳುಗಿದರು.

ADVERTISEMENT

ನೀರಿನಲ್ಲಿ ಮುಳುಗುತ್ತಿದ್ದ ಮಗಳು, ಪತ್ನಿಯನ್ನು ರಕ್ಷಿಸಲೆಂದುಧೂಳು ಗಾವಡೆ ನೀರಿಗೆ ಹಾರಿದರು. ಅದನ್ನು ಕಂಡು ಮಕ್ಕಳಾದ ಕೃಷ್ಣ ಮತ್ತು ಸತೀಶ ಜೋರಾಗಿ ಚೀರಾಡಿದರು. ತಿರುಗಿ ನೋಡುವಷ್ಟರಲ್ಲಿ ಅವರೂ ನೀರಿಗೆಧುಮುಕಿದ್ದರು ಎಂದು ಪ್ರತ್ಯಕ್ಷದರ್ಶಿ ಡುಮಿಂಗ್ ಜುಜೆ ಸಿದ್ದಿ ವಿವರಿಸಿದರು.

ಸುದ್ದಿ ತಿಳಿಯುತ್ತಿದ್ದಂತೆ ಹಳಿಯಾಳ, ದಾಂಡೇಲಿ ಠಾಣೆಗಳ ಪೋಲಿಸರು, ದಾಂಡೇಲಿಯಿಂದಅಗ್ನಿಶಾಮಕ ದಳ, ಈಜುಪಟುಗಳು ಹಾಗೂ ಗ್ರಾಮಸ್ಥರು ಕಾರ್ಯಾಚರಣೆಗಿಳಿದರು. ಮಧ್ಯರಾತ್ರಿ 1.30ರ ಸುಮಾರಿಗೆ ನಾಲ್ವರ ಶವಗಳನ್ನು ನದಿಯಿಂದ ಹೊರ ತಂದರು.

ಜೀವದ ಹಂಗು ತೊರೆದು ರಕ್ಷಣೆ:ಡುಮಿಂಗ್ ಜುಜೆ ಸಿದ್ದಿ ನದಿಯ ಆಚೆ ದಡದಲ್ಲಿ ಉರುವಲು ಸಂಗ್ರಹಿಸುತ್ತಿದ್ದರು. ನಾಲ್ವರು ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡು ತಮ್ಮ ಜೀವದ ಹಂಗು ತೊರೆದು ಅವರೂ ನದಿಗೆ ಧುಮುಕಿದರು. ಸುಮಾರು 150 ಮೀಟರ್‌ಗಳಷ್ಟು ದೂರ ಈಜಿ ರಾಮಿಬಾಯಿಯನ್ನು ರಕ್ಷಿಸಿದರು.

‘ಧೂಳು ಗಾವಡೆ ಉತ್ತಮ ಈಜುಪಟುವಾಗಿದ್ದ. ಒಂದೆರಡು ವರ್ಷಗಳ ಹಿಂದೆ ಇದೇ ಜಾಗದಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿದ್ದ. ಆದರೆ, ಈ ಬಾರಿ ತನ್ನದೇ ಪತ್ನಿ ಮತ್ತು ಮಗಳು ಜೀವನ್ಮರಣದ ನಡುವೆ ನಡೆಸುತ್ತಿದ್ದ ಹೋರಾಟದಿಂದ ಗಾಬರಿಯಾಗಿದ್ದ ಎಂದು ಕಾಣುತ್ತದೆ. ಅವರನ್ನೂ ರಕ್ಷಿಸಲಾಗಲಿಲ್ಲ, ತಾನೂ ಬದುಕುಳಿಯಲಿಲ್ಲ’ ಎಂದು ಡುಮಿಂಗ್ ಕಣ್ಣೀರಿಟ್ಟರು.

ಪರಿಹಾರದ ಭರವಸೆ:ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದರು. ಮೃತರ ಕುಟುಂಬದವರಿಗೆ ಸಮಾಧಾನ ಹೇಳಿ, ಸರ್ಕಾರದಿಂದಪರಿಹಾರ ನೀಡುವ ಭರವಸೆ ನೀಡಿದರು. ಕೂಡಲೇ ಪ್ರಸ್ತಾವ ಕಳುಹಿಸುವಂತೆ ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ಗೆತಿಳಿಸಿದರು. ಜೊತೆಗೇ ವೈಯಕ್ತಿಕ ಪರಿಹಾರವನ್ನೂನೀಡಿದರು. ಇನ್ನು ಮುಂದೆ ಇಂತಹ ದುರ್ಘಟನೆಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗೆ ತಿಳಿಸಿದರು.

ಡುಮಿಂಗ್ ಅವರ ಕಾರ್ಯಕ್ಕೆ ಸಚಿವ ದೇಶಪಾಂಡೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಬಗ್ಗೆ ಸರ್ಕಾರದಿಂದ ಪ್ರಶಂಸಾ ಪತ್ರ ಕಳುಹಿಸುವುದಾಗಿಯೂ ತಿಳಿಸಿದರು.

ಇದೇ ಮೊದಲಲ್ಲ...:ಬೊಮ್ಮನಹಳ್ಳಿಯ ಕಾಳಿ ನದಿ ತಟದ ಇದೇ ಜಾಗದಲ್ಲಿ ಈ ಹಿಂದೆಯೂ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಮದುವೆಯ ಅರಶಿನ ಶಾಸ್ತ್ರದ ಸಂದರ್ಭ ಸ್ನಾನಕ್ಕೆಂದು ಬಂದಿದ್ದ ವರ ನೀರುಪಾಲಾಗಿದ್ದರು. ಇದೇರೀತಿ, ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಧೂಳು ಗಾವಡೆ ಕೂಡ ಒಂದಿಬ್ಬರನ್ನು ರಕ್ಷಿಸಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.