ADVERTISEMENT

ಶಿರಸಿ: ಜಲಾನಯನ ಅಭಿವೃದ್ಧಿಗೆ ಸಲಹೆ

ನಗರಸಭೆ ಬಜೆಟ್ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 12:37 IST
Last Updated 4 ಫೆಬ್ರುವರಿ 2020, 12:37 IST
ಶಿರಸಿ ನಗರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಜಿ.ಜಿ.ಹೆಗಡೆ ಕಡೆಕೋಡಿ ಮಾತನಾಡಿದರು
ಶಿರಸಿ ನಗರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಜಿ.ಜಿ.ಹೆಗಡೆ ಕಡೆಕೋಡಿ ಮಾತನಾಡಿದರು   

ಶಿರಸಿ: ದೂರದೃಷ್ಟಿಯ ಕಲ್ಪನೆ ಇಟ್ಟುಕೊಂಡು ನಗರಕ್ಕೆ ನೀರು ಪೂರೈಕೆ ಮಾಡುವ ಜಲಮೂಲಗಳ ಜಲಾನಯನ ಪ್ರದೇಶ ಅಭಿವೃದ್ಧಿಗೆ ನಗರಸಭೆ ಒತ್ತು ನೀಡಬೇಕು ಎಂದು ನಿವೃತ್ತ ವಿಜ್ಞಾನಿ ಪ್ರಭಾಕರ ಭಟ್ಟ ಸಲಹೆ ಮಾಡಿದರು.

ಬಜೆಟ್‌ ಪೂರ್ವಭಾವಿಯಾಗಿ ನಗರಸಭೆ ಮಂಗಳವಾರ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು. ‘ಜನಸಂಖ್ಯೆಗನುಗುಣವಾಗಿ ನೀರಿನ ಬೇಡಿಕೆ ಹೆಚ್ಚುತ್ತಿದೆ. ಆರಂಭದಲ್ಲಿ ಕೆಂಗ್ರೆಹೊಳೆಯನ್ನು ಮಾತ್ರ ಅವಲಂಬಿಸಿದ್ದ ನಗರಸಭೆ, ನಂತರ ಅಗತ್ಯಕ್ಕೆ ತಕ್ಕಂತೆ ಅಘನಾಶಿನಿ ನದಿಯಿಂದ ನಗರಕ್ಕೆ ನೀರು ತರುತ್ತಿದೆ. ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಉಲ್ಬಣಿಸುತ್ತಿರುವ ಕಾರಣ, ಜಲಮೂಲಗಳನ್ನು ಭದ್ರಗೊಳಿಸಿಕೊಳ್ಳಬೇಕಾಗಿದ. ಈ ನಿಟ್ಟಿನಲ್ಲಿ ನಗರಸಭೆ, ಜನರಿಂದ ಸಂಗ್ರಹಿಸುವ ನೀರಿನ ಕರದಲ್ಲಿ ನಿರ್ದಿಷ್ಟ ಮೊತ್ತವನ್ನು ಇವೆರಡು ಜಲಮೂಲಗಳ ಜಲಾನಯನ ಪ್ರದೇಶದ ಅಭಿವೃದ್ಧಿಗೆ ಮೀಸಲಿಡಬೇಕು’ ಎಂದರು.

‘ನಗರಸಭೆ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಸದ್ಬಳಕೆ ಆಗಬೇಕು. ವಾಣಿಜ್ಯ ಮಳಿಗೆಗಳಿಂದ ನಿರೀಕ್ಷಿತ ಮಟ್ಟದ ಆದಾಯ ಬರುತ್ತಿಲ್ಲ. ಕೆಲ ಮಳಿಗೆಗಳು ಇನ್ನೂ ಖಾಲಿ ಇವೆ. ಮಳಿಗೆಗಳಿಂದ ನಿರಂತರವಾಗಿ ಬಾಡಿಗೆ ಸಂಗ್ರಹಿಸಬೇಕು. ಅತಿಕ್ರಮಣವಾಗಿರುವ ನಗರಸಭೆ ಆಸ್ತಿಯನ್ನು ವಶಕ್ಕೆ ಪಡೆಯಬೇಕು. ಸರ್ಕಾರಿ ಕಟ್ಟಡಗಳಿಂದ ತೆರಿಗೆ ವಸೂಲು ಸಮರ್ಪಕವಾಗಿ ನಡೆಯುತ್ತಿಲ್ಲ. ನಗರಸಭೆ ಕಟ್ಟಡಗಳಿಗೆ ಸೋಲಾರ್ ದೀಪ ಅಳವಡಿಸಿದರೆ ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ’ ಎಂದು ಸಾಮಾಜಿಕ ಮುಖಂಡ ಜಿ.ಜಿ.ಹೆಗಡೆ ಕಡೆಕೋಡಿ ಸಲಹೆ ಮಾಡಿದರು.

ADVERTISEMENT

ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಮಾತನಾಡಿ,’₹ 8 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕೊಂಡವಾಡೆ, ₹ 40 ಲಕ್ಷ ವೆಚ್ಚದ ಉದ್ಯಾನ ಇಂತಹ ಅನೇಕ ಅನುತ್ಪಾದಕ ಆಸ್ತಿಗಳು ನಗರಸಭೆಯಲ್ಲಿವೆ. ಇಂತಹ ಅವ್ಯವಸ್ಥೆ ಸರಿಪಡಿಸಬೇಕು’ ಎಂದರು.

ಪತ್ರಕರ್ತ ನರಸಿಂಹ ಅಡಿ ಮಾತನಾಡಿ, ‘ಮನೆ–ಮನೆ ಕಸ ಸಂಗ್ರಹದ ವಾಹನಗಳು ಸಮರ್ಪಕವಾಗಿಲ್ಲ. ವಾಹನದಲ್ಲಿ ಹೆಚ್ಚುವರಿ ಕಸ ಕೊಂಡೊಯ್ಯದ ಪರಿಣಾಮ ಖಾಲಿ ನಿವೇಶನಗಳು ತ್ಯಾಜ್ಯದ ತಾಣವಾಗಿವೆ. ಈ ಬಗ್ಗೆ ವಿಶೇಷ ಯೋಜನೆ ರೂಪಿಸಬೇಕು’ ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.