ADVERTISEMENT

‘ಶರ್ಯತ್’ನಲ್ಲಿ ಎತ್ತುಗಳ ಓಟದ ಗಮ್ಮತ್ತು

ತೇರಗಾಂವ ಗ್ರಾಮದಲ್ಲಿ ನಡೆದ ಸ್ಪರ್ಧೆಯಲ್ಲಿ ಕಲಘಟಗಿ ಎತ್ತುಗಳ ಪರಾಕ್ರಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 16:02 IST
Last Updated 27 ಜನವರಿ 2021, 16:02 IST
ಹಳಿಯಾಳ ತಾಲ್ಲೂಕಿನ ತೇರಗಾಂವ ಗ್ರಾಮದಲ್ಲಿ ಬುಧವಾರ ನಡೆದ ‘ಶರ್ಯತ್’ನಲ್ಲಿ ಜಯಶಾಲಿಯಾದ ಕಲಘಟಗಿ ನೆಲ್ಲರಗಿ ಗ್ರಾಮದೇವಿ ಪ್ರಸನ್ನ ಎತ್ತುಗಳ ಜೋಡಿಯ ಓಟ ಹೀಗಿತ್ತು
ಹಳಿಯಾಳ ತಾಲ್ಲೂಕಿನ ತೇರಗಾಂವ ಗ್ರಾಮದಲ್ಲಿ ಬುಧವಾರ ನಡೆದ ‘ಶರ್ಯತ್’ನಲ್ಲಿ ಜಯಶಾಲಿಯಾದ ಕಲಘಟಗಿ ನೆಲ್ಲರಗಿ ಗ್ರಾಮದೇವಿ ಪ್ರಸನ್ನ ಎತ್ತುಗಳ ಜೋಡಿಯ ಓಟ ಹೀಗಿತ್ತು   

ಹಳಿಯಾಳ:‌ ತಾಲ್ಲೂಕಿನ ತೇರಗಾಂವ ಗ್ರಾಮದಲ್ಲಿ ಬುಧವಾರ ಆಯೋಜಿಸಲಾದ ಖಾಲಿ ಎತ್ತಿನ ಬಂಡಿಯ ಓಟದ ‘ಶರ್ಯತ್’ (ಸ್ಪರ್ಧೆ) ಭಾರಿ ಕುತೂಹಲದಿಂದ ಕೂಡಿತ್ತು. ಕಲಘಟಗಿ ತಾಲ್ಲೂಕಿನ ‘ನೆಲ್ಲರಗಿ ಗ್ರಾಮದೇವಿ ಪ್ರಸನ್ನ’ ಎತ್ತುಗಳ ಜೋಡಿಯು ಬಹುಮಾನ ತನ್ನದಾಗಿಸಿಕೊಂಡಿತು.

ಈ ಸ್ಪರ್ಧೆಯಲ್ಲಿ ಒಂದು ನಿಮಿಷದಲ್ಲಿ ಅತಿ ಹೆಚ್ಚು ದೂರ ಕ್ರಮಿಸುವ ಎತ್ತುಗಳು ಜಯಶಾಲಿಗಳಾದವು. ಅವುಗಳ ಮಾಲೀಕರಿಗೆ ₹91 ಸಾವಿರ ನಗದು ಹಾಗೂ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಯಿತು. ಕಲಘಟಗಿಯ ಎತ್ತುಗಳು ಒಂದು ನಿಮಿಷದಲ್ಲಿ 1,982.03 ಮೀಟರ್ ದೂರವನ್ನು ಕ್ರಮಿಸಿದವು.

ಹೀರೆ ಹೊನ್ನಳ್ಳಿಯ ‘ಉಳವಿ ಚನ್ನಬಸವೇಶ್ವರ ಪ್ರಸನ್ನ’ ಜೋಡಿ ಎತ್ತುಗಳು 1,970.7 ಮೀಟರ್ ಕ್ರಮಿಸಿದವು. ಅವುಗಳ ಮಾಲೀಕರು ₹71 ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡರು. ‘ವಾಘೋಡೆ ಚವಾಟಪ್ಪಾ ಪ್ರಸನ್ನ’ ಜೋಡಿ ಎತ್ತುಗಳು 1,967.11 ಮೀ. ದೂರ ತಲುಪಿದವು. ಅವುಗಳ ಮಾಲೀಕರು ₹55 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಪಡೆದರು.

ADVERTISEMENT

1,960 ಮೀಟರ್ ಕ್ರಮಿಸಿದಬೆಳಗಾವಿಯ ‘ಲಕ್ಷ್ಮೀದೇವಿ ಪ್ರಸನ್ನ ಮುತಗಾ’ ಜೋಡಿ ಎತ್ತುಗಳ ಮಾಲೀಕರಿಗೆ ₹41 ಸಾವಿರ ನಗದು, ಕುಪ್ಪಟಗೇರಿಯ ‘ಶ್ರೀ ಭಾವೇಶ್ವರ ಪ್ರಸನ್ನ’ ಜೋಡಿ ಎತ್ತುಗಳು 1,958.11 ಮೀಟರ್ ಕ್ರಮಿಸಿ ₹35 ಸಾವಿರ ನಗದು ಬಹುಮಾನವನ್ನು ಅವುಗಳನ್ನು ಸಾಕಣೆದಾರರು ಪಡೆದುಕೊಂಡರು.

ಹಳಿಯಾಳ, ಕಲಘಟಗಿ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಹಾವೇರಿ,ಕೊಲ್ಲಾಪುರ ಮುಂತಾದ ಭಾಗಗಳಿಂದ 46 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ₹ 6 ಲಕ್ಷಕ್ಕೂ ಅಧಿಕ ನಗದು ಬಹುಮಾನ ಹಾಗೂ ಟ್ರೋಫಿಯನ್ನು ವಿಜೇತರಿಗೆ ಪ್ರದಾನ ಮಾಡಲಾಯಿತು.

ಸ್ಪರ್ಧೆ ಹೀಗಿರುತ್ತದೆ

ಎತ್ತಿನ ಬಂಡಿಯಲ್ಲಿ ಒಂದು ಕ್ವಿಂಟಲ್‌ ಮರಳು ತುಂಬಿದ ಚೀಲವನ್ನು ಹೇರಿ ಓಡಿಸಲಾಗುತ್ತದೆ. ಬಂಡಿಯಲ್ಲಿ ಟೈಮ್ ಕೀಪರ್ ಕೂಡ ಕುಳಿತಿದ್ದು, ಒಂದು ನಿಮಿಷ ಆದ ಬಳಿಕ ಮರಳಿನ ಚೀಲವನ್ನು ಕೆಳಕ್ಕೆ ಎಸೆಯುತ್ತಾನೆ. ಬಳಿಕ ಎತ್ತುಗಳು ಕ್ರಮಿಸಿದ ದೂರವನ್ನು ಅಳೆದು ವಿಜೇತರನ್ನು ನಿರ್ಧರಿಸಲಾಗುತ್ತದೆ. ತೇರಗಾಂವ, ಮಾಗವಾಡ ಹಾಗೂ ಅಂತ್ರೋಳಿ ಗ್ರಾಮಸ್ಥರು ಒಟ್ಟಾಗಿ ಈ ಸ್ಪರ್ಧೆಯನ್ನು ಆಯೋಜಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.