ADVERTISEMENT

ಕಾರವಾರ: ‘ನಿಶ್ಶಕ್ತ’ ಸ್ಥಿತಿಯಲ್ಲಿ ಬಸ್ ತಂಗುದಾಣ

‘ಶಕ್ತಿ’ ಜಾರಿ ಬಳಿಕ ಹೆಚ್ಚಿದ ಪ್ರಯಾಣಿಕರು: ಮರದ ನೆರಳು, ಅಂಗಡಿ ಕಟ್ಟೆಯೇ ಆಸರೆ

ಗಣಪತಿ ಹೆಗಡೆ
Published 28 ಸೆಪ್ಟೆಂಬರ್ 2025, 4:18 IST
Last Updated 28 ಸೆಪ್ಟೆಂಬರ್ 2025, 4:18 IST
ಚಾವಣಿ ಇಲ್ಲದೆ ಶಿಥಿಲಾವಸ್ಥೆಯಲ್ಲಿರುವ ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಗ್ರಾಮದ ಬಸ್ ತಂಗುದಾಣ
ಚಾವಣಿ ಇಲ್ಲದೆ ಶಿಥಿಲಾವಸ್ಥೆಯಲ್ಲಿರುವ ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಗ್ರಾಮದ ಬಸ್ ತಂಗುದಾಣ   

ಕಾರವಾರ: ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡುವ ‘ಶಕ್ತಿ’ ಯೋಜನೆ ಜಾರಿಗೆ ಬಂದ ಬಳಿಕ ಪ್ರಯಾಣಿಕರ ಸಂಖ್ಯೆ ವೃದ್ಧಿಸಿದೆ. ಆದರೆ, ಬಸ್‌ಗೆ ಕಾಯಲು ಸುಸಜ್ಜಿತ ತಂಗುದಾಣಗಳೇ ಇಲ್ಲದ ಸ್ಥಿತಿ ಎದುರಾಗಿದೆ.

ಗ್ರಾಮೀಣ ಭಾಗದ ಬಹತೇಕ ಕಡೆಗಳಲ್ಲಿ ಸ್ವಚ್ಛ, ಸುರಕ್ಷಿತ ತಂಗುದಾಣವೇ ಇಲ್ಲದ ಪರಿಣಾಮ ಅಂಗಡಿಗಳ ಕಟ್ಟೆ, ಮರದ ನೆರಳು, ಖಾಲಿ ಉಳಿದ ಕಟ್ಟಡಗಳ ಆವರಣದಲ್ಲೇ ಕುಳಿತು ಬಸ್‌ಗೆ ಕಾಯುವ ಸ್ಥಿತಿ ಪ್ರಯಾಣಿಕರಿಗೆ ಬಂದೊದಗಿದೆ. ಮಳೆಗಾಲದಲ್ಲಂತೂ ವಿದ್ಯಾರ್ಥಿಗಳು, ಮಹಿಳೆಯರು ಮಳೆಯಲ್ಲಿ ನೆನೆಯುತ್ತ ಬಸ್‌ಗೆ ಕಾಯುವ ಸ್ಥಿತಿ ಉಂಟಾಗಿತ್ತು.

ತಾಲ್ಲೂಕಿನಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆಗೆ ಚೆಂಡಿಯಾ, ಅಮದಳ್ಳಿ ಸೇರಿ ಹಲವೆಡೆ ತಂಗುದಾಣ ತೆರವುಗೊಳಿಸಿ ಏಳೆಂಟು ವರ್ಷ ಕಳೆದಿದೆ. ಈವರೆಗೆ ತಂಗುದಾಣ ಹಲವೆಡೆ ನಿರ್ಮಾಣ ಆಗಿಲ್ಲ. ಕೆಲವೆಡೆ ಆಗಿದ್ದರೂ ಪ್ರಯಾಣಿಕರು ಕುಳಿತುಕೊಳ್ಳಲು ಆಗದ ಕಿರಿದಾದ ತಂಗುದಾಣ ನಿರ್ಮಿಸಲಾಗಿದೆ ಎಂಬುದು ಜನರ ಆರೋಪ.

ADVERTISEMENT

ಶಿರಸಿ ತಾಲ್ಲೂಕಿನಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರ ತಂಗುದಾಣಗಳು ದುರವಸ್ಥೆಯಲ್ಲಿವೆ. ತಣ್ಣೀರಹೊಳೆ ತಂಗುದಾಣದ ಚಾವಣಿ ಸಂಪೂರ್ಣ ಕುಸಿದಿದೆ. ಕೆಂಗ್ರೆಹೊಳೆ, ದೇವರಕೊಪ್ಪ, ಶಿಂಗನಳ್ಳಿ ಸೇರಿ ಹಲವು ತಂಗುದಾಣಗಳು ಶಿಥಿಲವಾಗಿವೆ. ಶಿರಸಿ–ಕುಮಟಾ ರಸ್ತೆ ವಿಸ್ತರಣೆಗೆ ತೆರವುಗೊಳಿಸಿದ 9 ತಂಗುದಾಣಗಳ ಮರುನಿರ್ಮಾಣ ಕೆಲಸ ನಡೆದಿಲ್ಲ ಎಂಬ ಆರೋಪಗಳಿವೆ.

ಗೋಕರ್ಣ ಸಮೀಪ ಬಂಕಿಕೊಡ್ಲದ ತಿರುವು, ಹನೇಹಳ್ಳಿ ತಿರುವು ಸೇರಿದಂತೆ ಹಲವೆಡೆ ಬಸ್ ತಂಗುದಾಣ ನಿರ್ಮಾಣ ಅಗತ್ಯವಿದೆ ಎಂಬ ಬೇಡಿಕೆ ಜನರದ್ದು. ಸಾಣೆಕಟ್ಟಾ ತಿರುವಿನಲ್ಲಿಯೂ ಪ್ರಯಣಿಕರಿಗೆ ನಿಲ್ಲಲು ಸರಿಯಾದ ವ್ಯವಸ್ಥೆಯಿಲ್ಲ ಎಂಬುದು ಅವರ ದೂರು.

ಕುಮಟಾ ತಾಲ್ಲೂಕಿನಲ್ಲಿ ಹೆಚ್ಚಿನ ಬಸ್ ತಂಗುದಾಣಗಳನ್ನು ಗ್ರಾಮ ಪಂಚಾಯಿತಿ ಅನುದಾನದಲ್ಲಿ ನಿರ್ಮಾಣಗೊಂಡರೆ ಉಳಿದವುಗಳನ್ನು ದಾನಿಗಳು, ರೋಟರಿ, ಲಯನ್ಸ್ ಕ್ಲಬ್‌ನಂತಹ ಸೇವಾ ಸಂಸ್ಥೆಗಳು ಕೊಡುಗೆಯಾಗಿ ನೀಡಿವೆ.

ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಗೊರ್ಟೆ ಗಡಿಭಾಗದಿಂದ ಬೈಲೂರು ಗಡಿ ತನಕ ತೆರವು ಮಾಡಿದ ಬಸ್‌ ತಂಗುದಾಣಗಳನ್ನು ಹೆದ್ದಾರಿ ಪ್ರಾಧಿಕಾರ ಮರುನಿರ್ಮಣ ಮಾಡಿಲ್ಲ. ಇದರಿಂದಾಗಿ ಬಸ್‌ ಗಾಗಿ ಕಾಯುವ ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು ಬಿಸಿಲಿನಲ್ಲಿ ಕಾಯಬೇಕಾದ ಸ್ಥಿತಿ ಇದೆ. ಕೋಣಾರ, ಹಾಡುವಳ್ಳಿ, ಕೊಪ್ಪ ಗ್ರಾಮ ಪಂಚಾಯಿತಿಗಳ ಬಸ್‌ ತಂಗುದಾಣಗಳು ಶಿಥಿಲಾವಸ್ಥೆಯಲ್ಲಿವೆ.

ಮುಂಡಗೋಡ ತಾಲ್ಲೂಕಿನ ಕಾವಲಕೊಪ್ಪ, ಇಂದಿರಾನಗರ, ಹುನಗುಂದ ಸೇರಿದಂತೆ ಕೆಲವೆಡೆ ಬಸ್‌ ನಿಲ್ದಾಣಗಳಿದ್ದರೂ, ನಿರ್ವಹಣೆಯಿಲ್ಲದೇ ಪ್ರಯಾಣಿಕರಿಂದ ದೂರವಾಗಿವೆ.

ಅಂಕೋಲಾ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ತಂಗುದಾಣಗಳ ನಿರ್ವಹಣೆ ಸರಿಯಾಗಿಲ್ಲ. ಪ್ರಯಾಣಿಕರು ಮರದ ನೆರಳಿಗೆ, ಇಲ್ಲವೇ ರಸ್ತೆ ಬದಿಯಲ್ಲಿ ಯಾವುದಾದರು ಅಂಗಡಿ ಮುಂದೆ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಅಡ್ಲೂರು, ಬಡಗೇರಿ, ಕುಂಟಗಣಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸುಸಜ್ಜಿತ ಬಸ್ ತಂಗುದಾಣಗಳಿದ್ದರೂ ಸರಿಯಾಗಿ ನಿರ್ವಹಣೆ ಇಲ್ಲದೇ ಗಿಡಗಂಟಿಗಳು ಬೆಳೆದು ಗುರುತೆ ಸಿಗದಂತಾಗಿದೆ ಎಂಬುದು ಜನರ ದೂರು.

ಯಲ್ಲಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಪಕ್ಕ ಕೆನರಾ ಬ್ಯಾಂಕ್‌ ಎದುರುಗಡೆ ಇರುವ ಬಸ್‌ ತಂಗುದಾಣ ಸಾರ್ವಜನಿಕರ ಬಳಕೆ ಇಲ್ಲದೆ ನಿರ್ಲಕ್ಷಕ್ಕೆ ಒಳಗಾಗಿದೆ. ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣೆಮನೆ ಬಸ್‌ ತಂಗುದಾಣ ಮುರಿದು ಬಿದ್ದಿದೆ. ಕಂಚನಮನೆ ಬಸ್‌ ತಂಗುದಾಣದ ಸಮೀಪದ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಬಳಕೆಯೇ ನಿಂತಿದೆ.

‘ತಂಗುದಾಣಗಳು ರಾತ್ರಿಯ ವೇಳೆ ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗುತ್ತಿವೆ. ಸುತ್ತ ಮುತ್ತ ಒಡೆದ ಮದ್ಯದ ಬಾಟಲಿ, ಪ್ಲಾಸ್ಟಿಕ್‌ ತ್ಯಾಜ್ಯಗಳು ರಾಶಿಯಾಗಿ ಸಿಗುತ್ತಿವೆ’ ಎಂಬುದು ಜನರ ದೂರು.

ಬಸ್ ತಂಗುದಾಣಗಳ ನಿರ್ವಹಣೆಗೆ ಗ್ರಾಮ ಪಂಚಾಯಿತಿಗಳು ಕಾಳಜಿ ವಹಿಸಬೇಕು. ಪ್ರಯಾಣಿಕರು ಮರದ ನೆರಳಿನಲ್ಲೋ ಅಂಗಡಿ ಕಟ್ಟೆಯ ಮೇಲೊ ಕುಳಿತು ಬಸ್‌ಗೆ ಕಾಯಬೇಕಾಗುತ್ತಿದೆ
ಸುಬ್ರಾಯ ನಾಯ್ಕ ಕೆಂಗ್ರೆ ಗ್ರಾಮಸ್ಥ (ಶಿರಸಿ)
ಗ್ರಾಮ ಪಂಚಾಯಿತಿ ನಿರ್ಮಿಸಿದ್ದ ತಂಗುದಾಣಗಳನ್ನು ಪಂಚಾಯಿತಿ ಅನುದಾನ ಅವಲಂಬಿಸಿ ನಿರ್ವಹಣೆ ಮಾಡಲಾಗುತ್ತದೆ
ಆರ್.ಎಲ್.ಭಟ್ಟ ಕುಮಟಾ ತಾ.ಪಂ.ಇಒ
ಬಸ್‌ಗಳು ನಿಲ್ಲುವ ಸ್ಥಳ ಬಿಟ್ಟು ತಂಗುದಾಣ ನಿರ್ಮಿಸಿರುವುದು ಒಂದೆಡೆಯಾದರೇ ನಿರ್ವಹಣೆ ಇಲ್ಲದೇ ಇರುವ ತಂಗುದಾಣಗಳು ಪ್ರಯಾಣಿಕರ ಬಳಕೆಗೆ ಬರುತ್ತಿಲ್ಲ
ಪರಶುರಾಮ ಟಿಕ್ಕೋಜಿ ಹುನಗುಂದ ಗ್ರಾ.ಪಂ ಸದಸ್ಯ (ಮುಂಡಗೋಡ)

ಬಹುತೇಕ ಕಡೆ ಕಸದ ಕೊಂಪೆ

ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಹೊನ್ನಾವರ ತಾಲ್ಲೂಕಿನಲ್ಲಿ ಬಸ್ ತಂಗುದಾಣ ಉಪಯೋಗಿಸುವವರ ಸಂಖ್ಯೆ ಹೆಚ್ಚಾಗಿದೆ. ಬಹುತೇಕ ಗ್ರಾಮಗಳಲ್ಲಿ ತಂಗುದಾಣಗಳಿವೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ನಂತರದಲ್ಲಿ ಕರ್ಕಿ ಮತ್ತಿತರೆಡೆ ಬಸ್ ತಂಗುದಾಣಗಳ ಕೊರತೆ ಉಂಟಾಗಿದೆ ಎಂಬುದಾಗಿ ಸಾರ್ವಜನಿಕರಿಂದ ದೂರುಗಳಿವೆ. ಹಡಿನಬಾಳ ಸೇರಿದಂತೆ ಕೆಲವೆಡೆಗಳಲ್ಲಿ ಅಗತ್ಯವಿಲ್ಲದೆಡೆ ಗುತ್ತಿಗೆದಾರರ ಅಗತ್ಯ ಪೂರೈಸಲು ಬಸ್ ತಂಗುದಾಣ ನಿರ್ಮಿಸಲಾಗಿದೆ ಎಂಬ ಆರೋಪವೂ ಇದೆ. ‘ಬೆರೆಳೆಣಿಕೆಯ ಬಸ್ ತಂಗುದಾಣಗಳನ್ನು ಬಿಟ್ಟರೆ ಹೆಚ್ಚಿನವುಗಳು ಕಸದ ಕೊಂಪೆಯಾಗಿವೆ. ಕೆಲವು ಸೋರುತ್ತಿವೆ ಕೆಲವಕ್ಕೆ ಚಾವಣಿಯೇ ಇಲ್ಲದ ದುಃಸ್ಥಿತಿ ಇದೆ. ಶೇಡಿಬಾಳ ಹಾಗೂ ಪಕ್ಕದಲ್ಲೇ ಖಾಸಗಿ ಕಟ್ಟಡಗಳಿರುವ ಕೆಲವೆಡೆ ಮಾತ್ರ ಸ್ವಲ್ಪ ಮಟ್ಟಿಗೆ ಬಸ್ ತಂಗುದಾಣಗಳನ್ನು ಶುಚಿಯಾಗಿಡಲಾಗಿದೆ. ಆರೊಳ್ಳಿ ತಂಗುದಾಣ ಸೇರಿದಂತೆ ಬಹುತೇಕ ತಂಗುದಾಣಗಳು ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಿತಿಯಲ್ಲಿಲ್ಲ’ ಎನ್ನುತ್ತಾರೆ ಆರೊಳ್ಳಿಯ ಸಂದೀಪ ನಾಯ್ಕ.

ಪೋಸ್ಟರ್ ಅಂಟಿಸಲು ಸೀಮಿತ

ಹಳಿಯಾಳ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಬಸ್ ತಂಗುದಾಣಗಳು ಕಸ ಕಡ್ಡಿಗಳಿಂದ ತುಂಬಿವೆ. ಹಲವೆಡೆ ನೆಪ ಮಾತ್ರಕ್ಕೆ ತಂಗುದಾಣಗಳಿದ್ದು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸ್ವಚ್ಛತೆ ಇಲ್ಲದ ಸ್ಥಿತಿ ಇದೆ. ಕೆಲ ತಂಗುದಾಣಗಳು ದ್ವಿಚಕ್ರ ವಾಹನ ಸವಾರರಿಗೆ ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿವೆ. ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿ ಶಾಸಕ ಆರ್.ವಿ.ದೇಶಪಾಂಡೆ ಬಹುತೇಕ ಗ್ರಾಮಗಳಲ್ಲಿ ವಿವಿಧ ಕಂಪನಿಗಳ ಮುಖಾಂತರ ಬಸ್‌ ತಂಗುದಾಣ ನಿರ್ಮಿಸಿದ್ದರು. ಅಂತಹ ತಂಗುದಾಣಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಆಸನಗಳು ಕಿತ್ತುಹೋಗಿವೆ ಗೋಡೆ ಬರಹ ಪೋಸ್ಟರ್ ಅಂಟಿಸಲು ತಂಗುದಾಣ ಬಳಕೆ ಆಗುತ್ತಿವೆ. ‘ಬಾಣಸಗೇರಿ ಗ್ರಾಮದ ತಂಗುದಾಣ ಬಿದ್ದು ವರ್ಷ ಕಳೆದರೂ ಹೊಸ ತಂಗುದಾಣ ನಿರ್ಮಾಣ ಆಗಿಲ್ಲ’ ಎಂದು ಗ್ರಾಮಸ್ಥ ಜಯವಂತ ಬರ್ಜೆ ಮಾರುತಿ ಗೋಡಿಮನಿ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.