ADVERTISEMENT

ಅರಣ್ಯಾಧಿಕಾರಿಯಿಂದ ಸುಳ್ಳು ವರದಿ: ಆರೋಪ

ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿದ್ದಾಗಿ ಸರ್ಕಾರಕ್ಕೆ ಮಾಹಿತಿ: ರವೀಂದ್ರ ನಾಯ್ಕ

​ಪ್ರಜಾವಾಣಿ ವಾರ್ತೆ
Published 2 ಮೇ 2019, 19:30 IST
Last Updated 2 ಮೇ 2019, 19:30 IST
ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನೇತೃತ್ವದಲ್ಲಿ ಅರಣ್ಯವಾಸಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದರು
ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನೇತೃತ್ವದಲ್ಲಿ ಅರಣ್ಯವಾಸಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದರು   

ಕಾರವಾರ:ಜಿಲ್ಲೆಯಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿ ಅರಣ್ಯ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸತ್ಯಕ್ಕೆ ದೂರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಮುಖರು ಆಗ್ರಹಿಸಿದ್ದಾರೆ.

ಈ ಸಂಬಂಧ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರಿಗೆಮನವಿ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ರವೀಂದ್ರ ನಾಯ್ಕ, ‘ಸರ್ಕಾರಕ್ಕೆ ಕಳುಹಿಸಿದ ವರದಿಯಂತೆ ಜಿಲ್ಲೆಯಲ್ಲಿ ಜನವರಿ ಅಂತ್ಯದವರೆಗೆ ಒಟ್ಟು 5,621 ಕುಟುಂಬದವರನ್ನು ಒಕ್ಕಲೆಬ್ಬಿಸಲಾಗಿದೆ. ಅವರಿಂದ 3,159.35 ಹೆಕ್ಟೇರ್ ಅರಣ್ಯ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಇದು ವಾಸ್ತವಕ್ಕೆ ವಿರುದ್ಧವಾಗಿದೆ. ಈ ವರದಿಯಿಂದ ಅರಣ್ಯವಾಸಿಗಳಿಗೆ ಸಮಸ್ಯೆಯಾಗಲಿದೆ’ ಎಂದು ದೂರಿದರು.

ವರದಿಯ ಪ್ರಕಾರ, ಹೊನ್ನಾವರ ವಲಯದಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು 2,765 ಕುಟುಂಬಗಳಿಂದ905.58 ಹೆಕ್ಟೇರ್ ಅರಣ್ಯ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಿದೆ. ಶಿರಸಿ ವಲಯದಲ್ಲಿ 1,573 ಕುಟುಂಬಗಳ614.41 ಹೆಕ್ಟೇರ್, ಯಲ್ಲಾಪುರ ವಲಯದಲ್ಲಿ 733 ಕುಟುಂಬಗಳ 1,309.18 ಹೆಕ್ಟೇರ್, ಹಳಿಯಾಳದಲ್ಲಿ 366 ಕುಟುಂಬಗಳ 313.12 ಹೆಕ್ಟೇರ್, ಕಾರವಾರದಲ್ಲಿ 179 ಕುಟುಂಬಗಳ 16.95 ಹೆಕ್ಟೇರ್ ಹಾಗೂ ದಾಂಡೇಲಿ ವನ್ಯಜೀವಿ ವಲಯದ ಐದು ಕುಟುಂಬಗಳಿಗೆ ಸಂಬಂಧಿಸಿದ 0.11 ಹೆಕ್ಟೇರ್ ಜಮೀನು ವಶಪಡಿಸಿಕೊಂಡಿದ್ದಾಗಿ ತಿಳಿಸಲಾಗಿದೆ.

ADVERTISEMENT

ಇದು ಕಾಲ್ಪನಿಕ ವರದಿಯಾಗಿದೆ.ಈ ಸಂಬಂಧ ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದ್ದರೂ ಅರಣ್ಯಾಧಿಕಾರಿಗಳು ಪ್ರತಿ ತಿಂಗಳು ಇದೇ ರೀತಿಯ ಸುಳ್ಳು ವರದಿಯನ್ನು ಕಳುಹಿಸುತ್ತಿದ್ದಾರೆ. ಆದ್ದರಿಂದ ವರದಿಯಲ್ಲಿರುವ ಸತ್ಯಾಸತ್ಯತೆಯನ್ನು ಅರಿಯಲು ಪೂರ್ಣ ಪ್ರಮಾಣದ ವಿಚಾರಣೆ ನಡೆಸಬೇಕು ಎಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ವರದಿಯ ಕುರಿತು ಸಮಗ್ರವಾಗಿ ವಿಚಾರಿಸುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಬಂದಿದ್ದ ಅರಣ್ಯ ಅತಿಕ್ರಮಣಕಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.