ADVERTISEMENT

ಮನೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿ: ಸ್ಕೌಟ್ಸ್ ಮತ್ತು ಗೈಡ್ಸ್‌ ಮಕ್ಕಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 13:15 IST
Last Updated 12 ಆಗಸ್ಟ್ 2020, 13:15 IST
ಎಂ.ಎಂ.ಭಟ್ಟ
ಎಂ.ಎಂ.ಭಟ್ಟ   

ಶಿರಸಿ: ಕೋವಿಡ್ 19 ಇರುವ ಕಾರಣಕ್ಕೆ ಆಗಸ್ಟ್ 15, ಸ್ವಾತಂತ್ರ್ಯೋತ್ಸವದಂದು ಸ್ಕೌಟ್ಸ್ ಮತ್ತು ಗೈಡ್ಸ್‌ನ ಎಲ್ಲ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ತಮ್ಮ ಮನೆಯಲ್ಲೇ ಧ್ವಜಾರೋಹಣ ಮಾಡಿ, ಧ್ವಜವಂದನೆ ಸಲ್ಲಿಸಬೇಕು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಸ್ಕೌಟ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಎಂ.ಎಂ.ಭಟ್ಟ ವಿನಂತಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯೋತ್ಸವದ ದಿನ, ಅಕ್ಕಪಕ್ಕದ ಜನರೊಂದಿಗೆ ಸೇರಿ ರಾಷ್ಟ್ರ ಭಕ್ತರ ಕುರಿತು ಮಾತನಾಡಬೇಕು. ಮನೆಯ ಕಿಟಕಿ, ಗೇಟಿಗೆ ರಾಷ್ಟ್ರಧ್ವಜ ಕಟ್ಟಿ ಗೌರವ ಸಲ್ಲಿಸಬೇಕು. ಪ್ಲಾಸ್ಟಿಕ್ ಧ್ವಜ ಬಳಕೆ ಮಾಡದಂತೆ ನಿರ್ಧಾರ ಕೈಗೊಳ್ಳಬೇಕು’ ಎಂದರು.

ಗಣೇಶೋತ್ಸವ ಸರಳವಾಗಿ ಆಚರಣೆಯಾಗಲಿದೆ. ಬಣ್ಣದ ಗಣಪತಿ ಬದಲಾಗಿ ಅರಿಸಿನದಿಂದ ತಯಾರಿಸಿದ ಮೂರ್ತಿ ತಯಾರಿಸಿದರೆ ಅನುಕೂಲ. ಭಾರತ ಸ್ಕೌಟ್ ಮತ್ತು ಗೈಡ್ಸ್‌ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಇದನ್ನು ಉತ್ತೇಜಿಸಲಾಗುತ್ತದೆ ಎಂದು ಹೇಳಿದರು.

ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ 130 ಸ್ವಯಂ ಸೇವಕರು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೆಲಸ ಮಾಡಿದ್ದಾರೆ. 11,500ರಷ್ಟು ಮುಖಗವಸುಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಮುಖರಾದ ಜ್ಯೋತಿ ಭಟ್, ವಿ.ಎಚ್.ಭಟ್ಕಳ, ಸುಮನಾ ಹೆಗಡೆ, ವಿರೇಶ ಮಾದರ, ಜ್ಞಾನೇಶ ವೆರ್ಣೇಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.