ADVERTISEMENT

ಯಲ್ಲಾಪುರ: ಕಂದಕಕ್ಕೆ ಬಿದ್ದ ಟ್ಯಾಂಕರ್‌ ಮೇಲೆತ್ತಲು ಆರು ತಾಸು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 14:23 IST
Last Updated 4 ಜುಲೈ 2022, 14:23 IST
ಯಲ್ಲಾಪುರ ತಾಲ್ಲೂಕಿನ ಆರತಿ ಬೈಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿ ಕಂದಕಕ್ಕೆ ಉರುಳಿದ್ದ ಟ್ಯಾಂಕರ್ ಅನ್ನು ಕ್ರೇನ್ ಮೂಲಕ ಸೋಮವಾರ ಮೇಲಕ್ಕೆತ್ತಲಾಯಿತು
ಯಲ್ಲಾಪುರ ತಾಲ್ಲೂಕಿನ ಆರತಿ ಬೈಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿ ಕಂದಕಕ್ಕೆ ಉರುಳಿದ್ದ ಟ್ಯಾಂಕರ್ ಅನ್ನು ಕ್ರೇನ್ ಮೂಲಕ ಸೋಮವಾರ ಮೇಲಕ್ಕೆತ್ತಲಾಯಿತು   

ಯಲ್ಲಾಪುರ: ತಾಲ್ಲೂಕಿನ ಆರತಿ ಬೈಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿ ಕಂದಕಕ್ಕೆ ಮೂರು ದಿನಗಳ ಹಿಂದೆ ಉರುಳಿದ್ದ ಟ್ಯಾಂಕರ್ ಅನ್ನು ಸೋಮವಾರ ಹರಸಾಹಸದಿಂದ ಮೇಲಕ್ಕೆತ್ತಲಾಯಿತು. ಆರು ತಾಸುಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ಹೆದ್ದಾರಿಯ ಎರಡೂ ಬದಿಗಳಲ್ಲಿ ದೊಡ್ಡ ವಾಹನಗಳು, ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ಬೈಕ್ ಸವಾರರು ಮತ್ತು ಕಾರುಗಳು ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದ ರಸ್ತೆಯ ಮೂಲಕ ಸ್ನೇಹಸಾಗರ ವಸತಿ ಶಾಲೆಯ ರಸ್ತೆಯಲ್ಲಿ ಸುತ್ತಿ ಬಳಸಿ ಹೆದ್ದಾರಿ ಸೇರುವಂತೆ ಮಾಡಲಾಗಿತ್ತು.

ಸಾಬೂನು ತಯಾರಿಕೆಗೆ ಬಳಸುವ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಶನಿವಾರ ಬಿದ್ದಿತ್ತು. ಅದನ್ನು ಮೇಲಕ್ಕೆತ್ತಲು ಸಾಧ್ಯವಾಗಿರಲಿಲ್ಲ. ಹೊರ ಜಿಲ್ಲೆಗಳಿಂದ ಒಟ್ಟು ಆರು ಕ್ರೇನ್‌ಗಳನ್ನು ತರಿಸಿ ಕಾರ್ಯಾಚರಣೆ ಮಾಡಲಾಯಿತು.

ADVERTISEMENT

ಸೋಮವಾರ ಮಧ್ಯಾಹ್ನ 1.30ಕ್ಕೆ ಆರಂಭವಾದ ಕಾರ್ಯಾಚರಣೆಯು ಸಂಜೆ 7.30ರವೆರೆಗೂ ಮುಂದುವರಿಯಿತು. ಎರಡು ಕ್ರೇನ್‌ಗಳ ರೋಪ್ ತುಂಡಾಗಿದ್ದರಿಂದ ವಿಳಂಬವಾಯಿತು. ಹೊಸ ರೋಪ್ ತಂದು ಅಳವಡಿಸಿದ ನಂತರ ಕಾರ್ಯಾಚರಣೆಯನ್ನು ಮುಂದುವರಿಸಲಾಯಿತು. ಈ ರಾಸಾಯನಿಕ ಅಪಾಯಕಾರಿ ಅಲ್ಲದ ಕಾರಣ ಯಾವುದೇ ಅವಘಡವಾಗಲಿಲ್ಲ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಹೆದ್ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದವು. ಪ್ರಯಾಣಿಕರು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.