ADVERTISEMENT

ಬಾಲ್ಯದ ಒತ್ತಡದಿಂದ ಮಾನಸಿಕ ಅನಾರೋಗ್ಯ: ವಿಪುಲಾ ಎಂ.ಬಿ.ಪೂಜಾರಿ

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕಳವಳ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 12:42 IST
Last Updated 10 ಅಕ್ಟೋಬರ್ 2019, 12:42 IST
ಕಾರವಾರದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮನೋರೋಗ ತಜ್ಞ ಡಾ.ಸರ್ವೇಶಕುಮಾರ ಮಾತನಾಡಿದರು
ಕಾರವಾರದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮನೋರೋಗ ತಜ್ಞ ಡಾ.ಸರ್ವೇಶಕುಮಾರ ಮಾತನಾಡಿದರು   

ಕಾರವಾರ: ‘ಬಾಲ್ಯದ ಒತ್ತಡವೇ ಮಾನಸಿಕ ಅನಾರೋಗ್ಯಕ್ಕೆ ಪ್ರಮುಖ ಕಾರಣ’ ಎಂದು ಪ್ರಧಾನ ಜಿಲ್ಲಾ ಮತ್ತುಸೆಷನ್ಸ್ ನ್ಯಾಯಾಧೀಶರೂ ಆಗಿರುವಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ವಿಪುಲಾ ಎಂ.ಬಿ.ಪೂಜಾರಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈಚಿನ ದಿನಗಳಲ್ಲಿ ಬಾಲ್ಯದಲ್ಲೇಪೋಷಕರು ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ. ಇದುಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಇದನ್ನು ಪೋಷಕರು ಅರ್ಥಮಾಡಿಕೊಂಡು ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ಪರೀಕ್ಷೆಯಲ್ಲಿ ಇಷ್ಟುಅಂಕಗಳನ್ನು ತೆಗೆಯಲೇಬೇಕೆಂಬ ಒತ್ತಡ ಅಥವಾ ನೆರೆಮನೆಯ ಮತ್ತೊಬ್ಬ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ್ದಾನೆ, ನಿನಗೆ ಏಕೆ ಸಾಧ್ಯವಿಲ್ಲ ಎಂಬಿತ್ಯಾದಿ ಮಾತುಗಳು ಮಕ್ಕಳನ್ನು ಖಿನ್ನತೆಗೆ ದೂಡುತ್ತವೆ. ಸಮಾಜದಲ್ಲಿ ಯಾವುದು ಒಳಿತು, ಯಾವುದು ಕೆಡುಕು ಎಂಬುದನ್ನು ತಿಳಿಸದೆ ಅತ್ಯಾಧುನಿಕ ಸೌಲಭ್ಯಗಳುಸಿಗುವಂತೆ ಮಾಡುವುದೂ ಸಮಸ್ಯೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆ’ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಎಚ್.ಸರ್ವೇಶಕುಮಾರ,‘ಗಾಂಜಾ, ಸಿಗರೇಟ್,ಮದ್ಯ ಸೇವನೆಯಂತಹ ಚಟಗಳಿಗೆಅಂಟಿಕೊಂಡವರುಹಾಗೂ ಖಿನ್ನತೆಯಿಂದ ಬಳಲುವವರು ಆತ್ಮಹತ್ಯೆ ಮಾಡಿಕೊಳ್ಳುವ ಸಂಭವ ಜಾಸ್ತಿ’ ಎಂದರು.

‘ಆತ್ಮಸ್ಥೈರ್ಯ ಕಳೆದುಕೊಳ್ಳುವುದು, ನಕಾರಾತ್ಮಕ ಯೋಚನೆಗಳು ಪುನರಾವರ್ತನೆ ಆಗುವುದು ಎರಡು ವಾರಗಳಿಗಿಂತ ಜಾಸ್ತಿ ಇದ್ದಾಗ ಮಾತ್ರ ಅದು ಖಿನ್ನತೆಯ ಲಕ್ಷಣ.ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ 25 ಜನರು ಆತ್ಮಹತ್ಯೆಗೆ ಯತ್ನಿಸುವ ಸಾಧ್ಯತೆಗಳು ಜಾಸ್ತಿ. ಕ್ಯಾನ್ಸರ್, ಏಡ್ಸ್‌ನಂತಹಸಮಸ್ಯೆಗಳನ್ನು ಎದುರಿಸುತ್ತಿರುವವರುಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ’ಎಂದು ಅವರು ಹೇಳಿದರು.

‘ಪರಿಣಾಮಕಾರಿಯಾಗಲಿ‌’:‘ಮಾನಸಿಕ ಆರೋಗ್ಯ ಕಾಯ್ದೆ2017ನ್ನುಪರಿಣಾಮಕಾರಿಯಾಗಿಅನುಷ್ಠಾನ ಮಾಡಬೇಕು. ಈ ಮೂಲಕ ಮಾನಸಿಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು.ಇದರಕುರಿತು ಸಾರ್ವಜನಿಕರು ಪರಸ್ಪರ ವಿಷಯ ಹಂಚಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು’ ಎಂದುಹಿರಿಯ ನ್ಯಾಯವಾದಿ ಆರ್.ಎಸ್.ಹೆಗಡೆ ಗಾಳಿ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಎನ್.ಅಶೋಕಕುಮಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.