ADVERTISEMENT

ಶಿರಸಿ: ಮುಂಡಿಗೆಕೆರೆಯಲ್ಲಿ ಬಾನಾಡಿಗಳ ಬಾಣಂತನದ ಸಡಗರ

ಪುಟ್ಟ ಮರಿಗಳ ಚಿಲಿಪಿಲಿ ಕಲರವ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 12:22 IST
Last Updated 29 ಜುಲೈ 2020, 12:22 IST
ಶಿರಸಿ ತಾಲ್ಲೂಕಿನ ಬಾಡಲಕೊಪ್ಪದ ಮುಂಡಿಗೆಕೆರೆಯಲ್ಲಿ ಬೆಳ್ಳಕ್ಕಿಗಳ ಕಲರವ
ಶಿರಸಿ ತಾಲ್ಲೂಕಿನ ಬಾಡಲಕೊಪ್ಪದ ಮುಂಡಿಗೆಕೆರೆಯಲ್ಲಿ ಬೆಳ್ಳಕ್ಕಿಗಳ ಕಲರವ   

ಶಿರಸಿ: ತಾಲ್ಲೂಕಿನ ಸೋಂದಾದ ಬಾಡಲಕೊಪ್ಪ ಮಜಿರೆಯಲ್ಲಿರುವ ಮುಂಡಿಗೆಕೆರೆಯಲ್ಲಿ ಈಗ ಬಾಣಂತನದ ಸಡಗರ. ಆಗತಾನೇ ಕಣ್ಣು ಬಿಟ್ಟು ಜಗತ್ತನ್ನು ನೋಡುತ್ತಿರುವ ಪುಟ್ಟ ಮರಿಗಳು ಚಿಲಿಪಿಲಿ ಕಲರವ ಆರಂಭಿಸಿದರೆ, ತಾಯಿ ಹಕ್ಕಿ ಮರಿಗೆ ಗುಟುಕು ನೀಡುವ ದೃಶ್ಯಗಳು ನೋಡುಗರನ್ನು ಸೆಳೆಯುತ್ತಿವೆ.

ಬಾಡಲಕೊಪ್ಪದಲ್ಲಿರುವ ಕೆರೆಯ ನಡುವೆ ಮುಂಡಿಗೆ ಸಸ್ಯಗಳು ಇವೆ. ಪ್ರತಿ ವರ್ಷ ಮಳೆಗಾಲದ ಪೂರ್ವದಲ್ಲಿ ಬರುವ ವಲಸೆ ಪಕ್ಷಿಗಳು ಈ ಮುಂಡಿಗೆ ಗಿಡಗಳ ಮೇಲೆ ಗೂಡುಕಟ್ಟಿ, ಸಂತಾನಾಭಿವೃದ್ಧಿ ಮಾಡಿಕೊಂಡು, ಮರಿಗಳೊಂದಿಗೆ ಮರಳಿ ಮನೆಗೆ ಸಾಗುತ್ತವೆ. ಈ ವರ್ಷ ಮೇ ಕೊನೆಯಲ್ಲಿ ಕೆರೆ ಸಮೀಕ್ಷೆ ನಡೆಸಿದ್ದ ಬಾನಾಡಿಗಳು, ಜೂನ್ ಮೊದಲ ವಾರದಲ್ಲಿ ಕೆರೆಗೆ ಇಳಿದಿದ್ದವು. 300ಕ್ಕೂ ಹೆಚ್ಚು ಬೆಳ್ಳಕ್ಕಿಗಳ ತಂಡವೇ ಬಂದು ಸೇರಿತ್ತು. ಅವು ಬಂದು ಗೂಡುಕಟ್ಟಲು ಆರಂಭಿಸಿದ, ಐದಾರು ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಿದೆ.

ಸಮೀಪದ ಕಾಡಿನಿಂದ ಕಡ್ಡಿಗಳನ್ನು ಹೆಕ್ಕಿ ತಂದು, ಬುಟ್ಟಿಯಾಕಾರದ ಗೂಡುಗಳನ್ನು ಕಟ್ಟಿದ್ದವು. ಅಲ್ಲಿ ಮೊಟ್ಟೆಯಿಟ್ಟು, ಕಾವು ನೀಡಿ, ಈಗ ಮರಿಗಳು ಹೊರಬಂದಿವೆ. ಇವು ಹೊರಜಗತ್ತನ್ನು ಬೆರಗುಗಣ್ಣಿನಿಂದ ನೋಡುವ ದೃಶ್ಯವನ್ನು ಹವ್ಯಾಸಿ ಛಾಯಾಗ್ರಾಹಕರಾದ ಗೋಪಾಲ ಬಾರಕೂರ, ಶಶಾಂಕ ಹೆಗಡೆ ಸುಗಾವಿ ಸೆರೆ ಹಿಡಿದಿದ್ದಾರೆ. ಜುಲೈ 26ರಂದು ಗಮನಿಸಿದಂತೆ, ಮುಂಡಿಗೆ ಗಿಡಗಳ ಮೇಲೆ 160ರಿಂದ 175ರಷ್ಟು ಗೂಡುಗಳು ಇರುವುದು ದೂರದಿಂದ ಗೋಚರಿಸುತ್ತದೆ. ಈಗಲೂ ಸಹ ಹಕ್ಕಿಗಳು ಕಡ್ಡಿಗಳನ್ನು ಹೆಕ್ಕಿ, ಒಯ್ಯುತ್ತಿರುವುದರಿಂದ ಗೂಡುಗಳ ಸಂಖ್ಯೆ ಹೆಚ್ಚಾಗಬಹುದು ಎನ್ನುತ್ತಾರೆ ಸ್ಥಳೀಯ ಜಾಗೃತ ವೇದಿಕೆ ಪ್ರಮುಖ ರತ್ನಾಕರ ಹೆಗಡೆ.

ADVERTISEMENT

‘2019ರಲ್ಲಿ ಈ ಪ್ರದೇಶದಲ್ಲಿ ಜೂನ್‌ನಿಂದ ಜುಲೈವರೆಗೆ 1189 ಮಿ.ಮೀ ಮಳೆಯಾಗಿದ್ದರೆ, 2020ರಲ್ಲಿ ಜುಲೈ 27ರವರೆಗೆ 1373 ಮಿ.ಮೀ ಮಳೆಯಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಪಾರಂಪರಿಕ ಜೀವವೈವಿಧ್ಯ ತಾಣವೆಂದು ಘೋಷಣೆಯಾಗಿರುವ ಮುಂಡಿಗೆಕೆರೆಗೆ ಸಂತಾನಾಭಿವೃಧ್ಧಿಗೆ ಬರುವ ಬೆಳ್ಳಕ್ಕಿಗಳಿಗೆ ರಕ್ಷಣೆ ನೀಡುವುದು ಅಗತ್ಯವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಂಡು, ಕಾವಲುಗಾರರನ್ನು ನೇಮಿಸಿ, ಪಕ್ಷಿಗಳಿಗೆ ರಕ್ಷಣೆ ನೀಡಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ನರಸಿಂಹ ಹೆಗಡೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.