ADVERTISEMENT

ಮಂಗಳೂರು ಗೋಲಿಬಾರ್‌: 66 ಮಂದಿ ವಿರುದ್ಧ ಸಿಐಡಿ ಆರೋಪಪಟ್ಟಿ

ಡಿ.19ರ ಗಲಭೆ ಸೃಷ್ಟಿಸಿ, ಗೋಲಿಬಾರ್‌ಗೆ ಕಾರಣವಾದ ಆರೋಪ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 15:19 IST
Last Updated 21 ಮಾರ್ಚ್ 2020, 15:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಡಿಸೆಂಬರ್‌ 19ರಂದು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆಗೆ ಯತ್ನಿಸಿ, ಗಲಭೆ ನಡೆಸಿದ ಆರೋಪದ ಮೇಲೆ ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಐಡಿ ಪೊಲೀಸರು 66 ಜನರ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಗ್ಷು ಗಿರಿ ಅವರು ಸಲ್ಲಿಸಿದ್ದ ದೂರನ್ನು ಆಧರಿಸಿ ಮೊಹಮ್ಮದ್ ಅಝರ್‌ ಹಾಗೂ 19 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಈ ಆರೋಪಿಗಳು ಅಕ್ರಮ ಕೂಟ ಸೇರಿರುವುದು, ಗಲಭೆ ನಡೆಸಿರುವುದು, ಮಾರಕಾಸ್ತ್ರಗಳೊಂದಿಗೆ ಗಲಭೆಯಲ್ಲಿ ಭಾಗಿಯಾಗಿರುವುದು, ಸರ್ಕಾರಿ ಅಧಿಕಾರಿಯ ಆದೇಶವನ್ನು ಉಲ್ಲಂಘಿಸಿರುವುದು, ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿರುವುದು, ವಂಚನೆ, ಕೊಲೆಯತ್ನ, ಕ್ರಿಮಿನಲ್‌ ಒಳಸಂಚಿನಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಸಿಐಡಿ ಡಿವೈಎಸ್‌ಪಿ ಅವರು ಮಾರ್ಚ್‌ 16ರಂದು ನಗರದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಪೂರ್ವ (ಕದ್ರಿ) ಪೊಲೀಸ್‌ ಠಾಣೆಯ ಆಗಿನ ಇನ್‌ಸ್ಪೆಕ್ಟರ್‌ ಶಾಂತಾರಾಮ ಅವರು ಸಲ್ಲಿಸಿದ್ದ ದೂರಿನಡಿ ಬಂದರು ಠಾಣೆಯಲ್ಲಿ ಮೊಹಮ್ಮದ್ ಮರ್ವಾನ್‌ ಮತ್ತು 45 ಇತರರ ವಿರುದ್ಧವೂ ಮಾರ್ಚ್‌ 16ರಂದೇ ಸಿಐಡಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.

ADVERTISEMENT

ಈ ಪ್ರಕರಣದಲ್ಲೂ ಆರೋಪಿಗಳು ಗಲಭೆ ನಡೆಸಿರುವುದು, ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವುದು, ಅಕ್ರಮ ಕೂಟ ಸೇರಿರುವುದು, ಪೊಲೀಸರ ಮೇಲೆ ಕಲ್ಲು ಮತ್ತು ಬಾಟಲಿಗಳನ್ನು ತೂರಿ ಹಲ್ಲೆ ನಡೆಸಿರುವುದು ತನಿಖೆಯಲ್ಲಿ ಖಚಿತವಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಬಂದರು ಠಾಣೆಯಲ್ಲಿ ದಾಖಲಾಗಿದ್ದ ಈ ಎರಡೂ ಪ್ರಕರಣಗಳ ತನಿಖೆಯನ್ನು ಸಿಐಡಿಯ ವಿಶೇಷ ತನಿಖಾ ಘಟಕದ ಪೊಲೀಸರಿಗೆ ನೀಡಲಾಗಿತ್ತು. ಪ್ರಾಥಮಿಕ ಹಂತದ ಆರೋಪಪಟ್ಟಿ ಮಾತ್ರ ಸಲ್ಲಿಕೆಯಾಗಿದೆ. ತನಿಖೆ ಮುಂದುವರಿದಿದ್ದು, ಹೆಚ್ಚುವರಿ ಆರೋಪಪಟ್ಟಿಗಳನ್ನು ಸಲ್ಲಿಸಲಾಗುವುದು ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

2,000 ಪುಟಗಳಷ್ಟು ದಾಖಲೆ

ಎರಡೂ ಪ್ರಕರಣಗಳಲ್ಲಿ ಸಿಐಡಿ ಪೊಲೀಸರು, ಐದು ಸಂಪುಟಗಳಲ್ಲಿ 2,000 ಪುಟಗಳಷ್ಟು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆರೋಪಿಗಳ ದೂರವಾಣಿ ಕರೆಗಳ ವಿವರ, ಮೊಬೈಲ್‌ ಲೊಕೇಷನ್‌ ಮಾಹಿತಿ, ಆರೋಪಿಗಳ ಚಲನವಲನಕ್ಕೆ ಸಂಬಂಧಿಸಿದ ದಾಖಲೆಗಳು ಅದರಲ್ಲಿ ಇವೆ ಎಂಬ ಮಾಹಿತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.