ADVERTISEMENT

ಭಟ್ಕಳ: ಸಾರ್ವಜನಿಕರ ಮೇಲೆ ಮೊಟ್ಟೆ ಎಸೆತ, ಕಲ್ಲು ತೂರಾಟ, ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 18:49 IST
Last Updated 8 ಏಪ್ರಿಲ್ 2022, 18:49 IST
ಮೊಟ್ಟೆ ಎಸೆದ ಆರೋಪಿಯನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಬರುತ್ತಿರುವುದು – ಪ್ರಜಾವಾಣಿ ಚಿತ್ರ
ಮೊಟ್ಟೆ ಎಸೆದ ಆರೋಪಿಯನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಬರುತ್ತಿರುವುದು – ಪ್ರಜಾವಾಣಿ ಚಿತ್ರ   

ಭಟ್ಕಳ: ಭಟ್ಕಳದಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳು ವಿನಾಕಾರಣ ಕೆಲವು ಕಡೆ ಸಾರ್ವಜನಿಕರ ಮೇಲೆ ಮೊಟ್ಟೆ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ. ಸಾರ್ವಜನಿಕರು ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೆಬಳೆ ಗ್ರಾಮ ಪಂಚಾಯಿತಿಯ ಗಾಂಧಿನಗರ, ಹೆಬಳೆಯಲ್ಲಿ ಮೊಟ್ಟೆ ಎಸೆದ ಕಿಡಿಗೇಡಿಗಳು ಹನುಮಾನ್ ನಗರದಲ್ಲಿ ಆಟೊರಿಕ್ಷಾ ಚಾಲಕ ಕೃಷ್ಣ ಮಾಸ್ತಪ್ಪ ನಾಯ್ಕ ಎಂಬುವವರ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಪುರವರ್ಗ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೇಲೆ ಮೊಟ್ಟೆ ಎಸೆದಿದ್ದಾರೆ. ಆಗ ಅವನ ಸಹೋದರ ಕಿಡಿಗೇಡಿಗಳನ್ನು ಬೆನ್ನಟ್ಟಿ ಬಂದು ಪಟ್ಟಣದ ರಾಘವೇಂದ್ರ ಮಠದ ಬಳಿ ಒಬ್ಬನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ.

ರಾಘವೇಂದ್ರ ಮಠದ ಹತ್ತಿರ ಒಬ್ಬ ಕಿಡಿಗೇಡಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುವ ಸಮಯದಲ್ಲೇ ಮತ್ತೆ ಕೆಲವರು, ಅವನು ಬಳಸಿದ್ದ ಬೈಕ್‌ನ ಎರಡೂ ನಂಬರ್ ಪ್ಲೇಟ್‌ಗಳನ್ನು ಕಳಚಿ ಪರಾರಿಯಾಗಿದ್ದಾರೆ. ಬೈಕನ್ನು ಪೊಲೀಸರು ಠಾಣೆಗೆ ತೆಗೆದುಕೊಂಡು ಬಂದಿದ್ದಾರೆ.

ADVERTISEMENT

ವಿಷಯ ತಿಳಿಯುತ್ತಿದ್ದಂತಯೇ ನೂರಾರು ಜನರು ಶಹರ ಪೊಲೀಸ್ ಠಾಣೆ ಎದುರು ಜಮಾಯಿಸಿದರು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಲಾಠಿ ಬೀಸಿ ಗುಂಪನ್ನು ಚದುರಿಸಿದರು. ಭಟ್ಕಳದಲ್ಲಿ ಭಾನುವಾರ ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ‌ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.