ADVERTISEMENT

ಶಿರಸಿ: ಕಣ್ಮುಚ್ಚಿ ಬಿಡುವುದರೊಳಗೆ ಜಾತ್ರೆಪೇಟೆ ಸ್ವಚ್ಛ

ನಸುಕಿನ ಜಾವದಿಂದಲೇ ಕೆಲಸ ಆರಂಭಿಸುವ ಪೌರಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 15:59 IST
Last Updated 18 ಮಾರ್ಚ್ 2022, 15:59 IST
ಶಿರಸಿಯ ಜಾತ್ರಾ ಗದ್ದುಗೆ ಸಮೀಪ ಸ್ವಚ್ಛತೆ ಕೆಲಸದಲ್ಲಿ ತೊಡಗಿರುವ ಪೌರಕಾರ್ಮಿಕರು.
ಶಿರಸಿಯ ಜಾತ್ರಾ ಗದ್ದುಗೆ ಸಮೀಪ ಸ್ವಚ್ಛತೆ ಕೆಲಸದಲ್ಲಿ ತೊಡಗಿರುವ ಪೌರಕಾರ್ಮಿಕರು.   

ಶಿರಸಿ: ದಿನವಿಡೀ ಜನರಿಂದ ಗಿಜಿಗುಡುವ ಜಾತ್ರೆ ಪೇಟೆ, ತಡರಾತ್ರಿಯವರೆಗೂ ಮೋಜು, ಮನರಂಜನೆಯಲ್ಲಿ ಮುಳುಗುವ ಜನರು ಎಸೆದು ಹೋದ ಕಸಕಡ್ಡಿಗಳೆಲ್ಲ ಬೆಳಕು ಹರಿಯುವಷ್ಟರಲ್ಲಿ ಕಣ್ಮರೆಯಾಗಿ ಬಿಡುತ್ತವೆ.

ಶಿರಸಿ ಜಾತ್ರೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು ಸವಾಲಿನ ಕೆಲಸದಲ್ಲೊಂದು. ಅದನ್ನು ನಿಭಾಯಿಸಲು ನಗರಸಭೆಯ ಸ್ವಚ್ಛತಾ ವಿಭಾಗದ ಸಿಬ್ಬಂದಿ ಅವಿರತ ದುಡಿಯುತ್ತಿದ್ದಾರೆ. ರಾತ್ರಿ 2 ಗಂಟೆ ಬಳಿಕ ಕೆಲಸಕ್ಕೆ ಇಳಿಯುವ 30ಕ್ಕೂ ಹೆಚ್ಚು ಪೌರಕಾರ್ಮಿಕರು ಕೆಲವೇ ತಾಸಿನಲ್ಲಿ ಪೇಟೆಯಲ್ಲಿ ಬಿದ್ದ ಕಸಕಡ್ಡಿಗಳನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದಾರೆ.

ನಗರಸಭೆಯಲ್ಲಿ ಕಾಯಂ ಇರುವ 90ಕ್ಕಿಂತ ಹೆಚ್ಚು ಕಾರ್ಮಿಕರು, ಜಾತ್ರಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ 30 ಕಾರ್ಮಿಕರು ಒಗ್ಗಟ್ಟಾಗಿ ಜಾತ್ರೆಪೆಟೆಯಲ್ಲಿ ಸ್ವಚ್ಛತೆ ಕಾಯುತ್ತಿದ್ದಾರೆ. ಬಿಡಕಿಬೈಲ್, ಶಿವಾಜಿಚೌಕ, ಕೋಟೆಕೆರೆ, ನಟರಾಜ ರಸ್ತೆ, ಸಿ.ಪಿ.ಬಝಾರ, ದೇವಿಕೆರೆ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಆದ್ಯತೆ ಮೇರೆಗೆ ಕೆಲಸ ನಿರ್ವಹಿಸಲಾಗುತ್ತಿದೆ.

ADVERTISEMENT

ಸಾರ್ವಜನಿಕ ಶೌಚಾಲಯಗಳನ್ನೂ ಪ್ರತಿ ನಾಲ್ಕು ತಾಸಿಗೊಮ್ಮೆ ಶುಚಿಗೊಳಿಸಲಾಗುತ್ತಿದೆ. ನಸುಕಿನ ಜಾವದಲ್ಲೂ ರಾಸಾಯನಿಕ ಸಿಂಪಡಿಸಿ ತೊಳೆಯುತ್ತಿದ್ದಾರೆ.

‘ಜಾತ್ರೆ ಆರಂಭಗೊಂಡ ನಾಲ್ಕು ದಿನದಲ್ಲಿ ಪೇಟೆಯಲ್ಲಿ 60 ಟನ್‍ಗೂ ಹೆಚ್ಚು ಕಸ ಸಂಗ್ರಹಗೊಂಡಿದೆ. ವಾರಾಂತ್ಯದಲ್ಲಿ ಈ ಪ್ರಮಾಣ ಹೆಚ್ಚಬಹುದು. ಸಮರೋಪಾದಿಯಲ್ಲಿ ಸ್ವಚ್ಛತಾ ಕೆಲಸ ಕೈಗೊಳ್ಳುತ್ತಿದ್ದೇವೆ’ ಎನ್ನುತ್ತಾರೆ ವಿಶೇಷ ಅಧಿಕಾರಿ ಆರ್.ಎಂ.ವೆರ್ಣೇಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.