ಕಾರವಾರ: ಅಬ್ಬರದ ಮುಂಗಾರು ಮುಗಿದ ಬೆನ್ನಲ್ಲೆ ಕಲ್ಲಂಗಡಿ ಬೆಳೆದ ತಾಲ್ಲೂಕಿನ ನೂರಾರು ರೈತರು ಈಗ ನಷ್ಟ ಎದುರಿಸುವ ಆತಂಕದಲ್ಲಿದ್ದಾರೆ. ಲಕ್ಷಾಂತರ ವ್ಯಯಿಸಿ ಬೆಳೆಸಿದರೂ ನಿರೀಕ್ಷೆಯಷ್ಟು ಫಸಲು ಸಿಗುವ ಶಂಕೆ ಅವರನ್ನು ಕಾಡಲಾರಂಭಿಸಿದೆ.
ಮಳೆಗಾಲ ಮುಗಿಯುತ್ತಿದ್ದಂತೆ ತಾಲ್ಲೂಕಿನ ಗೋಟೆಗಾಳಿ, ಬಾಳ್ನಿ, ಭೈರೆ, ಉಳಗಾ, ಮುಡಗೇರಿ, ಹೀಗೆ ಹಲವು ಗ್ರಾಮಗಳಲ್ಲಿ ಕಲ್ಲಂಗಡಿ ಕೃಷಿ ಆರಂಭಗೊಂಡಿದೆ. ವರ್ಷದಿಂದ ವರ್ಷಕ್ಕೆ ಹಿಂಗಾರು ಆರಂಭದಲ್ಲಿ ಕಲ್ಲಂಗಡಿ ಬೆಳೆ ಪ್ರದೇಶ ವಿಸ್ತರಣೆಯೂ ಆಗುತ್ತಿದೆ.
ಫೆಬ್ರವರಿ ಬಳಿಕ ಕಲ್ಲಂಗಡಿ ಬೆಳೆಯುವ ಪ್ರದೇಶ ತಾಲ್ಲೂಕಿನಲ್ಲಿ ಸುಮಾರು 25 ಹೆಕ್ಟೇರ್ ಗಿಂತಲೂ ಹೆಚ್ಚಿದೆ. ಹಿಂಗಾರು ಆರಂಭದಲ್ಲಿ ಈಚಿನ ವರ್ಷದಲ್ಲಿ ಕಲ್ಲಂಗಡಿ ಬೆಳೆಯುವ ಪ್ರಮಾಣ ಹೆಚ್ಚಿದೆ. ಎರಡು ಬೆಳೆ ಪಡೆದು ಲಾಭ ಹೆಚ್ಚಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಿಂದ ಗೇಣಿದಾರರು ಭೂಮಾಲೀಕರಿಂದ ಜಾಗ ಪಡೆದು ಕೃಷಿಯಲ್ಲಿ ತೊಡಗಿದ್ದಾರೆ.
‘ಸ್ವಂತ ಭೂಮಿ ಹೊಂದಿರುವವರಲ್ಲಿ ಕೃಷಿ ಮಾಡುವವರ ಸಂಖ್ಯೆ ವಿರಳ. ಕೃಷಿ ಮಾಡಲು ಆಸಕ್ತಿ ಇದ್ದವರಿಗೆ ಭೂಮಿ ಇಲ್ಲ. ಗೇಣಿ ಪಡೆದು ಕಲ್ಲಂಗಡಿ ಕೃಷಿ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗೆ ಗೇಣಿ ಪಡೆದುಕೊಂಡವರು ಆದಾಯ ಹೆಚ್ಚಿಸಿಕೊಳ್ಳಲು ವರ್ಷಕ್ಕೆ ಎರಡು ಬಾರಿ ಕಲ್ಲಂಗಡಿ ಫಸಲು ಪಡೆಯಲು ಮಳೆಗಾಲ ಮುಗಿದ ತಕ್ಷಣವೇ ಕೃಷಿ ಚಟುವಟಿಕೆ ಆರಮಭಿಸುತ್ತಿದ್ದಾರೆ’ ಎನ್ನುತ್ತಾರೆ ಭೈರೆ ಗ್ರಾಮದ ರಾಮಚಂದ್ರ ಗಾಂವಕರ.
‘ಈ ಬಾರಿ ಮಳೆ ಪ್ರಮಾಣ ಹೆಚ್ಚಿದ್ದರಿಂದ ಅಂತರ್ಜಲ ಮಟ್ಟವೂ ಏರಿಕೆಯಾಗಿದೆ. ನೀರಿನ ಹರಿವು ಉತ್ತಮವಾಗಿದೆ. ಇದರಿಂದ ಕಲ್ಲಂಗಡಿ ಬೆಳೆಗೆ ಸಾಕಷ್ಟು ನೀರು ಲಭ್ಯತೆ ಇರುವ ಲೆಕ್ಕಾಚಾರದೊಂದಿಗೆ ಕೃಷಿ ಚಟುವಟಿಕೆ ಕೈಗೊಂಡವರಿಗೆ ಅತಿಯಾದ ಚಳಿ ಮತ್ತು ಇಬ್ಬನಿ ಸಮಸ್ಯೆ ಎದುರಾಗಿದೆ. ಮಲ್ಚಿಂಗ್ (ಪ್ಲಾಸ್ಟಿಕ್ ಹೊದಿಕೆ) ಅಳವಡಿಸಿದಿ ಗದ್ದೆಯಲ್ಲಿ ಅಷ್ಟಾಗಿ ಸಮಸ್ಯೆ ಉಂಟಾಗದಿದ್ದರೂ ಮಲ್ಚಿಂಗ್ ಇಲ್ಲದೆ ಕೃಷಿಯಲ್ಲಿ ತೊಡಗಿದ ಕಡೆಯಲ್ಲಿ ಇಬ್ಬನಿಯಿಂದ ಬಳ್ಳಿಗಳ ಬೆಳವಣಿಗೆ ಕುಂಠಿತಗೊಳ್ಳುವ ಅಪಾಯ ಎದುರಾಗಿದೆ. ಹೂವುಗಳು ಕಾಯಿಕಟ್ಟಿಕೊಳ್ಳುವ ಹಂತದಲ್ಲಿ ಉದುರಿ ಬೀಳುತ್ತಿವೆ’ ಎಂದು ಸಮಸ್ಯೆ ವಿವರಿಸಿದರು.
‘ಪ್ರತಿ ಎಕರೆಗೆ ಓಳಿ ನಿರ್ಮಾಣ, ಮಲ್ಚಿಂಗ್ ಅಳವಡಿಕೆ, ಔಷಧ–ಗೊಬ್ಬರ ಸೇರಿದಂತೆ ನಿರ್ವಹಣೆಗೆ ಸರಾಸರಿ ₹1.75 ಲಕ್ಷ ಖರ್ಚು ತಗಲುತ್ತಿದೆ. ಪ್ರತಿ ಕೆ.ಜಿ ಕಲ್ಲಂಗಡಿಗೆ ₹18 ಖರೀದಿ ದರವಿದೆ. ಈ ಮೊತ್ತದಲ್ಲಿ ಹೆಚ್ಚು ಲಾಭ ಇರದಿದ್ದರೂ ನಷ್ಟ ಉಂಟಾಗುವ ಪ್ರಮಾಣ ಕಡಿಮೆ. ಆದರೆ, ಇಬ್ಬನಿಯಿಂದ ಕಾಯಿಗಳ ಗಾತ್ರ ಕುಂಠಿತಗೊಳ್ಳುತ್ತಿದ್ದು ನಷ್ಟ ಎದುರಿಸುವ ಭೀತಿ ಇದೆ’ ಎಂದೂ ಹೇಳಿದರು.
ಕರಾವಳಿ ಭಾಗದಲ್ಲಿ ಫೆಬ್ರವರಿ ಬಳಿಕ ಕಲ್ಲಂಗಡಿ ಬೆಳೆಯಲು ಸೂಕ್ತ ಸಮಯ. ನೀರಾವರಿ ಸೌಲಭ್ಯ ಆಧರಿಸಿ ಕೆಲವರು ಈಗಲೂ ಕಲ್ಲಂಗಡಿ ಬೆಳೆಯುತ್ತಿದ್ದಾರೆಸುನೀಲ ಅಂಕೋಲೇಕರ್ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.