ADVERTISEMENT

ಮುಖ್ಯಮಂತ್ರಿಯಿಂದ ನೀತಿ ಸಂಹಿತೆ ಉಲ್ಲಂಘನೆ

ಚುನಾವಣಾ ಆಯೋಗದ ಮೌನ: ಎಚ್.ಕೆ.ಪಾಟೀಲ ಆರೋಪ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 14:20 IST
Last Updated 29 ನವೆಂಬರ್ 2019, 14:20 IST

ಶಿರಸಿ: ‘ಕಾಂಗ್ರೆಸ್ಸಿಗರ ಹಿಂದೆ ಮಾಹಿತಿದಾರರು, ಪೊಲೀಸರನ್ನು ಬಿಡುವ ಚುನಾವಣಾ ಆಯೋಗಕ್ಕೆ, ಪ್ರಚಾರ ಭಾಷಣದಲ್ಲಿ ರಾಜ್ಯದ ಮುಖ್ಯಮಂತ್ರಿ, ₹ 5 ಲಕ್ಷದವರೆಗಿನ ತುಂಡು ಗುತ್ತಿಗೆ ಕಾಮಗಾರಿಗೆ ಟೆಂಡರ್ ರದ್ದುಪಡಿಸುವುದಾಗಿ ಹೇಳಿದ್ದು ಕೇಳಿಸಿಲ್ಲವೇ ? ಮತದಾರರಿಗೆ ನೀಡುವ ಈ ರೀತಿಯ ಆಮಿಷ, ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ’ ಎಂದು ಶಾಸಕ ಎಚ್.ಕೆ.ಪಾಟೀಲ ಪ್ರಶ್ನಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುರುವಾರ ಯಲ್ಲಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತುಂಡು ಗುತ್ತಿಗೆ ಕಾಮಗಾರಿಗೆ ಟೆಂಡರ್ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದಿದ್ದಾರೆ. ಚುನಾವಣೆ ನಡೆಯುವ ಜಿಲ್ಲೆಯಲ್ಲಿ ಈ ಹೇಳಿಕೆ ನೀಡಿದರೂ ಚುನಾವಣಾ ಆಯೋಗ ತೆಪ್ಪಗೆ ಕುಳಿತುಕೊಳ್ಳಬೇಕಾ?’ ಎಂದರು.

‘ನಮ್ಮ ಎಲ್ಲ ಹೇಳಿಕೆಗಳ ವಿಡಿಯೊ, ಆಡಿಯೊ ಮಾಡುತ್ತಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ನಾವು ಮಾಡಿರುವ ಆಪಾದನೆ ಆಧರಿಸಿಯಾದರೂ ವಿಡಿಯೊ ಪರಿಶೀಲಿಸಿ, ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಚುನಾವಣಾ ಆಯೋಗಕ್ಕೆ ಅವಕಾಶವಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

ADVERTISEMENT

ಈ ಚುನಾವಣೆಯು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವಿನ ಚುನಾವಣೆಯಲ್ಲ. ಇದು ಮತದಾರರಿಗೆ ಮಾಡಿರುವ ಮೋಸ ಮತ್ತು ನಿಷ್ಠೆ, ಭ್ರಷ್ಟತೆ ಮತ್ತು ಪ್ರಾಮಾಣಿಕತೆ ನಡುವಿನ ಚುನಾವಣೆಯಾಗಿದೆ. ಪಕ್ಷಾಂತರ ಮಾಡುವ ರಾಜಕಾರಣಿಗಳಿಗೆ ಬುದ್ಧಿಕಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಹೊಡೆತ ಬೀಳುತ್ತದೆ. ಒಂದು ತಿಂಗಳ ಈಚಿನ ರಾಜಕೀಯ ಬೆಳವಣಿಗೆ ಗಮನಿಸಿದರೆ, ಮಹಾರಾಷ್ಟ್ರ, ಹರಿಯಾಣದಲ್ಲಿ ಪಕ್ಷಾಂತರಿಗಳಿಗೆ ಜನರು ಮಣ್ಣುಮುಕ್ಕಿಸಿದ್ದಾರೆ ಎಂದು ಹೇಳಿದರು.ಪಕ್ಷದ ಪ್ರಮುಖರಾದ ಜಗದೀಶ ಗೌಡ, ಆರ್.ಎಂ.ಹೆಗಡೆ, ಎಸ್.ಕೆ.ಭಾಗವತ, ರವೀಂದ್ರ ನಾಯ್ಕ, ದೀಪಕ ದೊಡ್ಡೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.